Advertisement

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

01:13 PM Apr 06, 2024 | Team Udayavani |

ಮುಂಬಯಿ: ಇನ್ನು ಮುಂದೆ ನೀವು ಎಟಿಎಂ ಕೇಂದ್ರಗಳಲ್ಲೇ ಯುಪಿಐ ಮೂಲಕ ನಿಮ್ಮ ಖಾತೆಗೆ ನಗದನ್ನು ಜಮೆ ಮಾಡಬಹುದು! ಇದಕ್ಕೆ ಯಾವ ಕಾರ್ಡುಗಳ ಅಗತ್ಯವೂ ಇರುವುದಿಲ್ಲ.

Advertisement

ಹೌದು, ಯುಪಿಐ ಮೂಲಕ ಹಣ ಡೆಪಾಸಿಟ್‌ ಸೌಲಭ್ಯ ಒದಗಿಸುವ ಮಹತ್ವದ ನಿರ್ಧಾರವನ್ನು ಭಾರ ತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಕೈಗೊಂಡಿದೆ. ಆದರೆ ಇದು ಹೇಗೆ ಕಾರ್ಯನಿರ್ವಹಿಸಲಿದೆ ಎಂಬ ವಿವರವನ್ನು ನೀಡಿಲ್ಲ. ಸದ್ಯದಲ್ಲೇ ಈ ಕುರಿತು ವಿಸ್ತೃತ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಆರ್‌ ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಹೇಳಿದ್ದಾರೆ.

ಪ್ರಸ್ತುತ, ಕೇವಲ ಡೆಬಿಟ್‌ ಕಾರ್ಡ್‌ಗಳ ಮೂಲಕವಷ್ಟೇ ಎಟಿಎಂ ಕೇಂದ್ರಗಳಲ್ಲಿ ಹಣವನ್ನು ಡೆಪಾಸಿಟ್‌ ಮಾಡಲು ಸಾಧ್ಯವಾಗುತ್ತಿದೆ. ಜತೆಗೆ ಯುಪಿಐ ಮೂಲಕ ಎಟಿಎಂ ಕೇಂದ್ರಗಳಿಂದ ಹಣ ವಿತ್‌ಡ್ರಾ ಮಾಡುವ ಅವಕಾಶವನ್ನೂ ಕಲ್ಪಿಸಲಾಗಿದೆ. ಆದರೆ ಇದೇ ಮೊದಲ ಬಾರಿಗೆ ಯುಪಿಐ ಮೂಲಕ ನಗದನ್ನು ಜಮೆ ಮಾಡುವ ಸೌಲಭ್ಯ ಒದಗಿಸುವುದಾಗಿ ಆರ್‌ಬಿಐ ಹೇಳಿದೆ. ಇದಲ್ಲದೇ ಥರ್ಡ್‌ ಪಾರ್ಟಿ ಯುಪಿಐ ಆ್ಯಪ್‌ಗಳ ಮೂಲಕ ಪ್ರೀಪೇಯ್ಡ ಪೇಮೆಂಟ್‌ ಇನ್‌ಸ್ಟ್ರೆಮೆಂಟ್‌(ಪಿಪಿಐ)ಗಳನ್ನು ಲಿಂಕ್‌ ಮಾಡುವುದಕ್ಕೂ ಅನುಮತಿ ನೀಡಲು ಆರ್‌ಬಿಐ ನಿರ್ಧರಿಸಿದೆ.

ಅನುಕೂಲವೇನು?

 ಗ್ರಾಹಕರು ಬ್ಯಾಂಕ್‌ಗಳಲ್ಲಿ ಸರದಿಯಲ್ಲಿ ಕಾಯುವ ಅಗತ್ಯವಿರುವುದಿಲ್ಲ

Advertisement

 ಸುಲಭ ಹಾಗೂ ಸರಳವಾಗಿ ನಗದು ಠೇವಣಿ ಮಾಡಬಹುದು

 ಬ್ಯಾಂಕ್‌ ಶಾಖೆಗಳಲ್ಲಿ ನಗದು ನಿರ್ವಹಣೆಯ ಭಾರ ತಗ್ಗಲಿದೆ

ಯುಪಿಐ ಮೂಲಕ ಹಣ ಜಮೆ ಹೇಗೆ?

ಕ್ಯಾಷ್‌ ಡೆಪಾಸಿಟ್‌ ಮೆಷಿನ್‌ಗಳ ಮೂಲಕವೇ ಈ ಪ್ರಕ್ರಿಯೆ ನಡೆಸಬೇಕಾಗುತ್ತದೆ. ಪ್ರಸ್ತುತ ಡೆಬಿಟ್‌ ಕಾರ್ಡ್‌ಗಳ ಮೂಲಕ ಹಣ ಜಮೆ ಮಾಡಬೇಕೆಂದರೆ, ನೀವು ಮೊದಲು ನಿಮ್ಮ ಕಾರ್ಡ್‌ ಹಾಕಿ, ಪಿನ್‌ ನಮೂದಿಸಿ, “ಡೆಪಾಸಿಟ್‌’ ಆಯ್ಕೆಯನ್ನು ಒತ್ತಿ, ನಗದನ್ನು ಜಮೆ ಮಾಡುತ್ತೀರಿ. ಯುಪಿಐ ಮೂಲಕ ಹಣ ಜಮೆ ಮಾಡುವುದಿದ್ದರೆ, ಡೆಬಿಟ್‌ ಕಾರ್ಡ್‌ನ ಬಳಕೆಯ ಬದಲಾಗಿ ನಿಮ್ಮ ಬ್ಯಾಂಕ್‌ ಖಾತೆಯೊಂದಿಗೆ ಲಿಂಕ್‌ ಆಗಿರುವ ಯುಪಿಐ ಬಳಸಿ ಡೆಪಾಸಿಟ್‌ ಮಾಡಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next