ತಿರುವನಂತಪುರ: ಕುತೂಹಲಕಾರಿ ಬೆಳವಣಿಗೆಯಲ್ಲಿ ಅಯ್ಯಪ್ಪ ದೇಗುಲಕ್ಕೆ ಎಲ್ಲಾ ವಯೋಮಿತಿಯ ಮಹಿಳೆಯರು ಪ್ರವೇಶಿಸಬಹುದು ಎಂದು ಅಭಿಪ್ರಾಯವನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಲು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ನಿರ್ಧರಿಸಿದೆ. ಇದಕ್ಕಿಂತ ಮೊದಲು ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂಬ ನಿಲುವನ್ನೇ ಪ್ರತಿ ಪಾದಿಸಿಕೊಂಡಿತ್ತು. ಅದಕ್ಕಾಗಿ ಸಮಗ್ರ ವರದಿಯನ್ನೇ ಸಿದ್ಧಪಡಿಸಲಾಗಿದೆ. ಸುಪ್ರೀಂ ಕೋರ್ಟಲ್ಲಿ ನ್ಯಾಯಾಂಗ ಹೋರಾಟಕ್ಕಾಗಿ ಹಿರಿಯ ನ್ಯಾಯವಾದಿ ಸಿ.ಆರ್ಯಂ ಸುಂದರಂ ಅವರನ್ನು ನಿಯೋಜಿಸಿದೆ. ಇದು ವರೆಗೆ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಡಾ| ಅಭಿಷೇಕ್ ಮನು ಸಿಂ Ì ಮಂಡಳಿಯನ್ನು ಪ್ರತಿನಿಧಿಸಿದ್ದರು. ಮಂಡಳಿ ಆಯುಕ್ತ ಎನ್.ವಾಸು ನವದೆಹಲಿಯಲ್ಲಿ ಶನಿವಾರ ಹಿರಿಯ ನ್ಯಾಯವಾದಿಗಳ ಜತೆ ಮುಂದೆ ಕೈಗೊಳ್ಳಬೇಕಾದ ಕಾನೂನು ಕ್ರಮಗಳ ಬಗ್ಗೆ ಚರ್ಚಿಸಲಿದ್ದಾರೆ.
550 ಮಂದಿ ನೋಂದಣಿ: ಈ ತಿಂಗಳ 17ರಿಂದ ಮತ್ತೆ ಶಬರಿಮಲೆ ಅಯ್ಯಪ್ಪ ದೇಗುಲ ಭೇಟಿ ಶುರುವಾಗಲಿರುವಂತೆಯೇ ಕೇರಳ ಪೊಲೀಸ್ ಇಲಾಖೆ ಆರಂಭಿಸಿದ ವೆಬ್‌ಸೈಟ್‌ನಲ್ಲಿ 10-50 ವಯೋಮಿತಿಯ 539 ಮಹಿಳೆಯರು ನೋಂದಣಿ ಮಾಡಿಸಿಕೊಂಡಿದ್ದಾರೆ. ಸೂಕ್ತ ರೀತಿಯಲ್ಲಿ ಭೇಟಿಗಾಗಿ ವೆಬ್‌ಸೈಟ್‌ನಲ್ಲಿ ಇದುವರೆಗೆ 3 ಲಕ್ಷ ಮಂದಿ ನೋಂದಾಯಿಸಿಕೊಂಡಿದ್ದಾರೆ. ಆ ಪೈಕಿ 539 ಮಂದಿ ಮಹಿಳೆಯರಾಗಿದ್ದಾರೆ. ದೇಗುಲಕ್ಕೆ ಎಷ್ಟು ಮಂದಿ ಭೇಟಿ ನೀಡುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಕೆಲ ವರ್ಷಗಳ ಹಿಂದೆ ಅದನ್ನು ಆರಂಭಿಸಲಾಗಿತ್ತು. ಅ.30ರಿಂದಲೇ ಹಾಲಿ ಸಾಲಿನ ಬುಕಿಂಗ್ ಶುರುವಾಗಿದೆ. ನ.5 ಮತ್ತು 6ರಂದು ದೇಗುಲ ತೆರೆದಿದ್ದಾಗ ಮಹಿಳಾ ಭಕ್ತರು ಪ್ರವೇಶಿಸಲು ಸಾಧ್ಯವಾಗಿಲ್ಲ. ಭೇಟಿ ನೀಡಲು ಬಯಸುವವರು
https://www.sabarimalaq.com/ ಭೇಟಿ ನೀಡಬಹುದು.
ಅಪವಿತ್ರಗೊಳಿಸಬೇಡಿ: ಪವಿತ್ರ ಶಬರಿಮಲೆ ಕ್ಷೇತ್ರವನ್ನು ಅಪವಿತ್ರಗೊಳಿಸಬೇಡಿ ಎಂದು ತಿರುವನಂತಪುರ ಕ್ಷೇತ್ರದ ಕಾಂಗ್ರೆಸ್ ಸಂಸದ ಶಶಿ ತರೂರ್ ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಮನವಿ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಸರಕಾರದ ವಿರುದ್ಧ ಹರಿಹಾಯ್ದ ಅವರು ಸುಪ್ರೀಂಕೋರ್ಟ್ ತೀರ್ಪು ಅನುಷ್ಠಾನಗೊಳಿಸುವ ಮುನ್ನ ಸಂಬಂಧಪಟ್ಟವರ ಜತೆ ಚರ್ಚೆ ನಡೆಸದೇ ಇದ್ದು ಏಕೆ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ಶಬರಿಮಲೆ ದೇಗುಲದ ಆವರಣದಲ್ಲಿ ಅನುಚಿತವಾಗಿ ವರ್ತಿಸಿದ್ದಾರೆ. ಅಲ್ಲಿ ಅವರ ವರ್ತನೆ ಹಿಂಸೆಗೆ ಪ್ರೋತ್ಸಾಹ ನೀಡುವಂತೆ ಇತ್ತು ಎಂದು ಹೇಳಿದ್ದಾರೆ. ಅತ್ಯಂತ ಪವಿತ್ರವಾಗಿರುವ ಕ್ಷೇತ್ರವನ್ನು ರಾಜಕೀಯಕ್ಕಾಗಿ ಬಳಸಿಕೊಂಡದ್ದು ಸರಿಯಲ್ಲ ಎಂದು ಟೀಕಿಸಿದ್ದಾರೆ.
ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ
ಕೇರಳ ಬಿಜೆಪಿ ಘಟಕದ ಅಧ್ಯಕ್ಷ ಪಿ.ಎಸ್.ಶ್ರೀಧರನ್ ಪಿಳ್ಳೆ ತಮ್ಮ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್ ಮೊರೆ ಹೋಗಿದ್ದಾರೆ. ಪತ್ರಕರ್ತರೊಬ್ಬರು ದಾಖಲಿಸಿದ ದೂರಿನ ಹಿನ್ನೆಲೆಯಲ್ಲಿ ಕಲ್ಲಿಕೋಟೆಯಲ್ಲಿ ಪಿಳ್ಳೆ ವಿರುದ್ಧ ದೂರು ದಾಖಲಾಗಿದೆ. ಯಾವುದೇ ರೀತಿಯಲ್ಲಿ ತಾವು ಪ್ರಚೋದನಾತ್ಮಕವಾಗಿ ಭಾಷಣ ಮಾಡಿಲ್ಲ ಎಂದು ಅವರು ಅರ್ಜಿಯಲ್ಲಿ ಹೇಳಿಕೊಂಡಿದ್ದಾರೆ.