ಬೆಂಗಳೂರು: ಕಳೆದ ಕೋವಿಡ್ ಸಂದರ್ಭದಲ್ಲಿ ಮುಷ್ಕರದಲ್ಲಿ ಭಾಗವಹಿಸಿ ವಜಾಗೊಂಡಿದ್ದ ಎರಡು ಸಾವಿರ ಬಿಎಂಟಿಸಿ ಸಿಬ್ಬಂದಿಗಳಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದ 500 ಮಂದಿ ಸಿಬ್ಬಂದಿಗಳನ್ನು ಶೀಘ್ರವೇ ವಾಪಾಸ್ ತೆಗೆದುಕೊಳ್ಳಲಾಗುವುದು ಎಂದು ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ತಿಳಿಸಿದರು.
ಬೆಂಗಳೂರಿನ ಶಾಂತಿನಗರ ಕಚೇರಿಯಲ್ಲಿ ಮಾತನಾಡಿದ ಅವರು, ವಜಾಗೊಂಡು ನ್ಯಾಯಾಲಯದ ಮೊರೆ ಹೋಗಿರುವ 500 ಮಂದಿ ಸಿಬ್ಬಂದಿಗಳು ಡಿಸೆಂಬರ್ ಅಂತ್ಯದೊಳಗೆ ನಮ್ಮ ಕಚೇರಿಯಲ್ಲಿಯೇ ನಡೆಯುವ ಲೋಕ ಆದಾಲತ್ ನಲ್ಲಿ ಭಾಗವಹಿಸಿ ತಮ್ಮ ಪ್ರಕರಣವನ್ನು ಬಗೆಹರಿಸಿಕೊಂಡು ಕೆಲಸಕ್ಕೆ ವಾಪಾಸ್ ತೆರಳಲು ಅವಕಾಶ ನೀಡಲಾಗಿದೆ. ಇದು ಡಿಸೆಂಬರ್ ಅಂತ್ಯದೊಳಗೆ ಮಾತ್ರ ಅಷ್ಟರೊಳಗೆ ಯಾರು ಬರುವುದಿಲ್ಲವೋ ಅವರಿಗೆ ಅವಕಾಶ ಇರುವುದಿಲ್ಲ ಎಂದು ಹೇಳಿದರು.
ಬೆಂಗಳೂರಿನಲ್ಲಿ ಬಿಎಂಟಿಸಿ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡಲಾಗಿದೆ. ಸುಮಾರು ಎರಡು ಸಾವಿರ ನೂತನ ಬಸ್ ಗಳನ್ನು ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಿಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಸಹೋದರನೊಂದಿಗೆ “ಅವತಾರ್ -2” ಸಿನಿಮಾ ನೋಡುತ್ತಿರುವಾಗ ಹೃದಯಾಘಾತ: ಕುಸಿದು ಬಿದ್ದು ವ್ಯಕ್ತಿ ಸಾವು
ಬಿಎಂಟಿಸಿ ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್ ಸುದ್ದಿಗಾರರೊಂದಿಗೆ ಮಾತನಾಡಿ, ಬಿಎಂಟಿಸಿ ಬಸ್ ಗಳ ಮೇಲಿನ ಅಪಘಾತ ದೂರುಗಳ ಪತ್ತೆಗಾಗಿ ಬಸ್ ಗಳ ಮುಂಭಾಗ ಹಾಗು ಹಿಂಭಾಗ ಸಿಸಿ ಕ್ಯಾಮರಾಗಳನ್ನು ಅಳವಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.