Advertisement

ಆಶ್ರಯ ಮನೆಗಳ ಮಂಜೂರು ಅನುಮಾನ

10:08 AM Dec 27, 2019 | Lakshmi GovindaRaj |

ಬೆಂಗಳೂರು: ಆಶ್ರಯ ಮನೆ ಯೋಜನೆಗಳ ಫ‌ಲಾನು ಭವಿಗಳ ಆಯ್ಕೆಯಲ್ಲಿ ಅಕ್ರಮವಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ತನಿಖೆ ಹಾಗೂ ಕಾನೂನು ತಿದ್ದುಪಡಿಗೆ ಮುಂದಾಗಿರುವುದು ಹಾಗೂ ಮನೆಗಳನ್ನು ಅರ್ಹ ಫ‌ಲಾನುಭವಿಗಳಿಗೆ ಮಂಜೂರು ಮಾಡದೇ ವಿಳಂಬ ಧೋರಣೆ ಅನುಸರಿಸುತ್ತಿರುವುದು ರಾಜ್ಯಾ ದ್ಯಂತ ಪಂಚಾಯತಿ ಸದಸ್ಯರಿಗೆ ನಿರಾಸೆ ಮೂಡಿಸಿದೆ.

Advertisement

ಈ ಹಿನ್ನೆಲೆಯಲ್ಲಿ 2019-20ನೇ ಸಾಲಿನ ಆಶ್ರಯ ಮನೆಗಳು ಬಿಡುಗಡೆಯಾಗುವ ಅನುಮಾನ ವ್ಯಕ್ತವಾಗಿ ದೆ. ಅಲ್ಲದೆ, ಇದೊಂದು ಹಣಕಾಸಿನ ಸಮಸ್ಯೆಯಿಂದ 2019-20ನೇ ಸಾಲಿನ ಮನೆ ಬಿಡುಗಡೆಯಿಂದ ತಪ್ಪಿಸಿ ಕೊಳ್ಳುವ ಪ್ರಯತ್ನವೇ ಎಂಬ ಚರ್ಚೆಯೂ ಆರಂಭ ವಾಗಿದೆ. ಈಗ ಬಿಜೆಪಿ ಸರ್ಕಾರ ಬಂದ ಮೇಲೆ ಪ್ರವಾಹ ಉಂಟಾಗಿದ್ದರಿಂದ ಈ ಸರ್ಕಾರಕ್ಕೂ ಹಣಕಾಸಿನ ಸಮಸ್ಯೆ ಉಂಟಾಗಿದೆ. ಈ ವರ್ಷದ ಆಶ್ರಯ ಮನೆ ಗಳನ್ನು ಹಂಚಿಕೆ ಮಾಡಲು ಆರ್ಥಿಕ ಸಮಸ್ಯೆ ಇದೆ ಎಂದು ಹೇಳಲಾಗುತ್ತಿದೆ.

ಆಶ್ರಯ ಮನೆ ಹಂಚಿಕೆಯಲ್ಲಿ ಅಕ್ರಮವಾಗಿರುವ ಆರೋಪ ಇರುವುದರಿಂದ ತನಿಖೆ ಮುಗಿಯುವವ ರೆಗೂ ಹೊಸ ಮನೆಗಳನ್ನು ಹಂಚಿಕೆ ಮಾಡುವ ಪ್ರಕ್ರಿಯೆಯನ್ನು ತಡೆ ಹಿಡಿದಿರುವುದರಿಂದ 2020ರಲ್ಲಿ ಚುನಾವಣೆ ಎದುರಿಸಲಿರುವ ಗ್ರಾಮ ಪಂಚಾಯತಿ ಸದಸ್ಯರಿಗೆ ನಿರಾಸೆ ಮೂಡಿಸಿದೆ. ಅಧಿಕಾರದ ಕೊನೆಯ ಅವಧಿಯಲ್ಲಿ ಫ‌ಲಾನುಭವಿಗಳಿಗೆ ಮನೆ ಹಂಚಿಕೆ ಮಾಡುವ ಮೂಲಕ ಮರು ಆಯ್ಕೆಯಾಗುವ ಬಯಕೆ ಹೊಂದಿರುವ ಗ್ರಾಮ ಪಂಚಾಯತಿ ಸದಸ್ಯರಿಗೆ ಸರ್ಕಾರದ ಈ ನಿರ್ಧಾರ ಅಸಮಾಧಾನ ತಂದಿದೆ ಎನ್ನಲಾಗುತ್ತಿದೆ.

ಆಯ್ಕೆ, ಹಣ ಬಿಡುಗಡೆ ಪ್ರಕ್ರಿಯೆ ಹೇಗೆ?: ರಾಜ್ಯ ಸರ್ಕಾರ ನೀಡುವ ಆಶ್ರಯ ಮನೆಗಳ ಹಂಚಿಕೆಗೆ ಗ್ರಾಮಸಭೆ ಮೂಲಕ ಫ‌ಲಾನುಭವಿಗಳ ಆಯ್ಕೆ ಮಾಡಲು ಗ್ರಾಮ ಸ್ವರಾಜ್‌ ಕಾಯ್ದೆಯಂತೆ ಚಿತ್ರೀಕರಣ ಮಾಡಲಾಗುತ್ತದೆ. ನಂತರ, ಮನೆ ನಿರ್ಮಾಣ ಕಾರ್ಯದ ಎಲ್ಲ ಹಂತಗಳನ್ನೂ ಪರಿಶೀಲನೆ ನಡೆಸಿಯೇ ಹಣ ಬಿಡುಗಡೆ ಮಾಡುತ್ತ ಬರಲಾಗುತ್ತದೆ. ಪ್ರಮುಖ ವಾಗಿ 2010ರಿಂದ ಒಮ್ಮೆ ಆಯ್ಕೆಯಾದ ಫ‌ಲಾನು ಭವಿಯ ಆಧಾರ್‌ಕಾರ್ಡ್‌ನ್ನು ಆತ ನಿರ್ಮಿಸುವ ಮನೆ ಹಾಗೂ ಹೆಸರಿಗೆ ಜೋಡಿಸಲಾಗುತ್ತದೆ.

ಅಲ್ಲದೇ, ಫ‌ಲಾನುಭವಿಯ ಮನೆ ನಿರ್ಮಾಣದ ಪ್ರತಿ ಹಂತದಲ್ಲಿಯೂ ಜಿಪಿಎಸ್‌ ಆಧಾರದಲ್ಲಿಯೇ ಫೋಟೊ ತೆಗೆಸಿಕೊಂಡು ಆನ್‌ಲೈನ್‌ ಮೂಲಕವೇ ರಾಜೀವ್‌ ಗಾಂಧಿ ಅಭಿವೃದ್ಧಿ ನಿಗಮಕ್ಕೆ ಜಿಲ್ಲಾ ಪಂಚಾಯತ್‌ ಸಿಇಒ ಮೂಲಕವೇ ಕಳುಹಿಸಲಾಗುತ್ತದೆ. ಆದರೂ, ಸರ್ಕಾರ ಯಾಕೆ ಈ ಕುರಿತು ನಿರ್ಲಕ್ಷ್ಯ ವಹಿಸಿದೆ ಎಂಬುದು ಗ್ರಾಮ ಪಂಚಾಯತ್‌ ಸದಸ್ಯರ ಅಳಲು.

Advertisement

ಆಯ್ಕೆ ಪ್ರಕ್ರಿಯೆಯಲ್ಲಿ ಅಕ್ರಮ?: ರಾಜ್ಯ ಸರ್ಕಾರ ಪ್ರತಿ ವರ್ಷ ಬಸವ, ಅಂಬೇಡ್ಕರ್‌, ವಾಜಪೇಯಿ ವಸತಿ ಯೋಜನೆ ಸೇರಿದಂತೆ ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಪ್ರತಿ ಗ್ರಾಮ ಪಂಚಾಯತಿಗೆ ಕನಿಷ್ಠ 20 ರಿಂದ 30 ಮನೆಗಳನ್ನು ಬಿಡುಗಡೆ ಮಾಡುತ್ತದೆ. ಅದರ ಹೊರತಾಗಿ ಕೆಲವು ಶಾಸಕರು (ವಿಶೇಷವಾಗಿ ಆಡಳಿತ ಪಕ್ಷದ ಶಾಸಕರು) ತಮ್ಮ ಪ್ರಭಾವ ಬಳಸಿ ವಸತಿ ಸಚಿವರ ಮೂಲಕ ತಮ್ಮ ಕ್ಷೇತ್ರಗಳಿಗೆ 200 ರಿಂದ 300 ಹೆಚ್ಚುವರಿ ಮನೆಗಳನ್ನು ಪಡೆಯುವ ಪರಿಪಾಠ ಪಕ್ಷಾತೀತವಾಗಿ ನಡೆದುಕೊಂಡು ಬಂದಿದೆ.

ಶಾಸಕರು ಹೆಚ್ಚುವರಿ ಮನೆಗಳನ್ನು ಪಡೆದುಕೊಂಡಾಗ ಅಂತಹ ಮನೆಗಳ ಹಂಚಿಕೆಯ ಫ‌ಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ಶಾಸಕರು ಸೂಚಿಸಿದವರಿಗೆ ಹೆಚ್ಚಿನ ಪ್ರಮಾಣದಲ್ಲಿ ಮನೆಗಳ ಹಂಚಿಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಇಂತಹ ಸಂದರ್ಭದಲ್ಲಿ ಶಾಸಕರ ಸೂಚನೆಯ ಮೇರೆಗೆ ಅನೌಪಚಾರಿಕವಾಗಿ ಗ್ರಾಮಸಭೆಗಳನ್ನು ನಡೆಸಿ, ಫ‌ಲಾನುಭವಿಗಳ ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಲಾ ಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಈಗಿರುವ ಕಾನೂನಿನ ಪ್ರಕಾರ ಗ್ರಾಮಸಭೆಗಿರುವ ಅಧಿಕಾರ ಕಸಿದು, ಶಾಸಕರಿಗೆ ಫ‌ಲಾನುಭವಿಗಳ ಆಯ್ಕೆ ಅಧಿಕಾರ ನೀಡಿದರೆ, ಶಾಸಕರ ಹಿಂಬಾಲಕರೇ ಪ್ರಭಾವ ಬಳಸಿ ಫ‌ಲಾನುಭವಿಗಳನ್ನು ಆಯ್ಕೆ ಮಾಡಿಕೊಳ್ಳುವ ಅಪಾಯವೂ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಶಾಸಕರ ಉಸ್ತುವಾರಿ ಸಮಿತಿ: 2015ರಲ್ಲಿ ರಾಜ್ಯದಲ್ಲಿ ಜಾರಿಗೆ ಬಂದಿರುವ ಗ್ರಾಮ ಸ್ವರಾಜ್‌ ಕಾಯ್ದೆಯ ಪ್ರಕಾರ ಪಂಚಾಯತಿ ಮಟ್ಟದಲ್ಲಿ ನಡೆಯುವ ತೀರ್ಮಾನಗಳನ್ನು ಪರಿಶೀಲನೆ ನಡೆಸಲು ಶಾಸಕರ ಅಧ್ಯಕ್ಷತೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿಯೂ ತಾಲೂಕು ಯೋಜನೆ ಮತ್ತು ಅಭಿವೃದ್ಧಿ ಮೇಲುಸ್ತುವಾರಿ ಸಮಿತಿ ಇದೆ. ಆ ಸಮಿತಿಗೆ ಪಂಚಾಯತಿಯಲ್ಲಿ ತೆಗೆದುಕೊಂಡ ತೀರ್ಮಾನಗಳನ್ನು ಪರಿಶೀಲಿಸಿ, ಕ್ರಮ ಕೈಗೊಳ್ಳಲು ಅಧಿಕಾರವಿದೆ. ಗ್ರಾಮ ಸಭೆಯಲ್ಲಿ ಆಯ್ಕೆ ಯಾದ ಫ‌ಲಾನುಭವಿಗಳಲ್ಲಿ ಅನರ್ಹರಿಗೆ ಅವಕಾಶ ಕಲ್ಪಿಸಿದ್ದರೆ, ಅದನ್ನು ತೆಗೆದುಹಾಕಲು ಈಗಿರುವ ಶಾಸಕರ ಸಮಿತಿಗೆ ಅಧಿಕಾರ ಇದೆ.

ಆದರೆ, ಹೊಸದಾಗಿ ಫ‌ಲಾನುಭವಿಯನ್ನು ಸೇರಿಸುವ ಅಧಿಕಾರವಿಲ್ಲ. ಈಗ ಆಶ್ರಯ ಮನೆ ಫ‌ಲಾನುಭವಿಗಳ ಆಯ್ಕೆ ವಿಷಯದಲ್ಲಿಯೂ ಶಾಸಕರ ನೇತೃತ್ವದ ಮೇಲುಸ್ತುವಾರಿ ಸಮಿತಿ ಪರಿಶೀಲನೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿ ಸದಸ್ಯರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡುವ ಅಧಿಕಾರ ಹೊಂದಿದೆ. ಜಿಲ್ಲಾ ಮಟ್ಟದಲ್ಲಿಯೂ ಜಿಲ್ಲಾ ಉಸ್ತುವಾರಿ ಸಚಿವರು ಅಥವಾ ಜಿಲ್ಲಾ ಪಂಚಾಯತಿ ಅಧ್ಯಕ್ಷರ ಅಧ್ಯಕ್ಷತೆಯ ಮೇಲುಸ್ತುವಾರಿ ಸಮಿತಿ ಇದೆ.

ಗ್ರಾಮ ಸ್ವರಾಜ್‌ ಜೀವಂತ: ರಾಜೀವ್‌ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಅಧಿಕಾರ ವಿಕೇಂದ್ರಿಕರಣ ಕಲ್ಪನೆ ಯಲ್ಲಿ ಸಂವಿಧಾನದ 73ನೇ ತಿದ್ದುಪಡಿ ಪ್ರಕಾರ ದೇಶಾದ್ಯಂತ ಗ್ರಾಮಸಭೆ ಕಡ್ಡಾಯವಾಗಿರ ಬೇಕೆಂಬ ಕಾನೂನು ಜಾರಿಗೊಳಿಸಲಾಗಿತ್ತು. 1993ರಲ್ಲಿ ಕರ್ನಾಟಕ ಪಂಚಾಯತ್‌ರಾಜ್‌ ಕಾಯ್ದೆಯಲ್ಲಿ ಈ ಕಾಯ್ದೆಯನ್ನು ಜಾರಿಗೊಳಿಸ ಲಾಗಿತ್ತು. ನಂತರ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಎಚ್‌.ಕೆ. ಪಾಟೀಲ್‌ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರಾಗಿದ್ದಾಗ 2015ರಲ್ಲಿ ರಮೇಶ್‌ ಕುಮಾರ್‌ ನೇತೃತ್ವದಲ್ಲಿ ಗ್ರಾಮಸಭೆಗೆ ಹೆಚ್ಚಿನ ಅಧಿಕಾರ ನೀಡಲು ಗ್ರಾಮ ಸ್ವರಾಜ್‌ ಕಾಯ್ದೆಯನ್ನು ಜಾರಿಗೆ ತರಲಾಗಿದೆ.

ಈ ಕಾಯ್ದೆಯ ಪ್ರಕಾರ ಫ‌ಲಾನುಭವಿಗಳ ಆಯ್ಕೆ ಮಾಡಲು ಕಡ್ಡಾಯ ವಾಗಿ ಗ್ರಾಮಸಭೆಯಲ್ಲಿ ತೀರ್ಮಾನ ಮಾಡ ಬೇಕು. ಪ್ರತಿ ಪಂಚಾಯತಿಯಲ್ಲಿಯೂ ವರ್ಷದಲ್ಲಿ ಕನಿಷ್ಠ ಎರಡು ಬಾರಿ ಗ್ರಾಮಸಭೆ ನಡೆಸಬೇಕೆಂಬ ನಿಯಮವಿದೆ. ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಮತದಾರರೂ ಗ್ರಾಮಸಭೆಯ ಅಧಿಕೃತ ಸದಸ್ಯರಾಗಿರುತ್ತಾರೆ. ಗ್ರಾಮಸಭೆಗಳಲ್ಲಿ ಫ‌ಲಾನುಭವಿಗಳ ಆಯ್ಕೆಗೆ ಮುಕ್ತ ಅವಕಾಶವಿರುತ್ತದೆ. ಈ ಸಭೆಯಲ್ಲಿ ಫ‌ಲಾನುಭವಿಗಳ ಆಯ್ಕೆ ಮಾಡುವಲ್ಲಿ ಅನರ್ಹರಿಗೆ ಅವಕಾಶ ಕಲ್ಪಿಸಲಾಗಿದೆ ಎಂಬ ಅನುಮಾನ ಬಂದರೆ ಶಾಸಕರು ಪರಿಶೀಲನೆ ಮಾಡಲು ಗ್ರಾಮ ಸ್ವರಾಜ್‌ ಕಾಯ್ದೆಯಲ್ಲಿ ಅವಕಾಶ ಇದೆ.

ಗ್ರಾಮ ಸ್ವರಾಜ್‌ ಕಾಯ್ದೆ ದೇಶದಲ್ಲಿಯೇ ಅತ್ಯಂತ ಬಲಿಷ್ಠವಾಗಿದೆ. ಪಂಚಾಯತಿ ಮಟ್ಟದಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಲು ಈಗಲೂ ಶಾಸಕರಿಗೆ ಅಧಿಕಾರ ಇದೆ. ಸೋಮಣ್ಣ ಅವರಿಗೆ ಬದಲಾಗಿರುವ ಕಾನೂನಿನ ಅರಿವು ಇದ್ದಂತಿಲ್ಲ. ಲೋಪದೋಷಗಳಿದ್ದರೆ ಸರಿಪಡಿಸುವ ಕೆಲಸ ಮಾಡಲಿ. ಅದನ್ನು ಬಿಟ್ಟು ಪಂಚಾಯತಿ ವ್ಯವಸ್ಥೆಯನ್ನು ನಿರ್ವೀರ್ಯಗೊಳಿಸುವ ಪ್ರಯತ್ನ ಮಾಡಬಾರದು.
-ಸಿ.ನಾರಾಯಣಸ್ವಾಮಿ, ಕಾರ್ಯಾಧ್ಯಕ್ಷರು, ಕರ್ನಾಟಕ ಪಂಚಾಯತ್‌ ರಾಜ್‌ ಪರಿಷತ್‌

* ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next