ಕೊಪ್ಪಳ: ಭೂರಹಿತ ದೇವದಾಸಿಯರ ಸಬಲೀಕರಣಕ್ಕೆ ಡಾ| ಬಿ.ಆರ್. ಅಂಬೇಡ್ಕರ ಅಭಿವೃದ್ಧಿ ನಿಗಮದ ಭೂ ಒಡೆತನ ಯೋಜನೆಯಡಿ ಜಮೀನು ಹಂಚಿಕೆಗೆ ಜಿಲ್ಲಾಡಳಿತದಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿ ಪಿ. ಸುನೀಲ್ ಕುಮಾರ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಭೂ ಒಡೆತನ ಯೋಜನೆಯಡಿ ಅರ್ಹ ಮಾಜಿ ದೇವದಾಸಿ ಮಹಿಳೆಯರಿಗೆ ಭೂಮಿ ಮಂಜೂರು ಮಾಡುವ ಸಲುವಾಗಿ ಭೂ ಮಾಲೀಕರ ಜಮೀನುಗಳಿಗೆ ಬೆಲೆ ನಿಗದಿಗೊಳಿಸಲು ನಡೆದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗುರುತಿಸಲ್ಪಟ್ಟ ಭೂರಹಿತ ಮಾಜಿ ದೇವದಾಸಿಯರ ಸಬಲೀಕರಣಕ್ಕಾಗಿ ಡಾ| ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಭೂ ಒಡೆತನ ಯೋಜನೆಯಡಿ ಭೂಮಿ ಖರೀದಿಸಿ ಹಂಚಿಕೆ ಮಾಡುವ ಯೋಜನೆಗೆ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಕೊಪ್ಪಳ ಜಿಲ್ಲೆಯಲ್ಲಿಂದು ಚಾಲನೆ ನೀಡಲಾಗಿದ್ದು, ಈ ಯೋಜನೆಯಡಿ 2017-18ನೇ ಸಾಲಿಗೆ ಜಿಲ್ಲೆಯ 16 ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಭೂ ಹಂಚಿಕೆ ಮಾಡಲಾಗುತ್ತಿದೆ. ಇಲಾಖೆಯಿಂದ ಗುರುತಿಸಲ್ಪಟ್ಟ ಮಾಜಿ ದೇವದಾಸಿಯರಲ್ಲಿ ಅರ್ಹ ಭೂ ರಹಿತ ಮಾಜಿ ದೇವದಾಸಿ ಮಹಿಳೆಯರನ್ನು ಗುರುತಿಸಿ ಆಯ್ಕೆ ಮಾಡಿ ನಿಯಮಾನುಸಾರ ಸೌಲಭ್ಯ ನೀಡಲು ರಾಜ್ಯದ 10 ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಕೊಪ್ಪಳ ಜಿಲ್ಲೆಯೂ ಒಂದಾಗಿದ್ದು, ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಅರ್ಹ ಫಲಾನುಭವಿಗಳಿಗೆ ಅವರು ವಾಸಿಸುವ ಪ್ರದೇಶದ ವ್ಯಾಪ್ತಿಯಲ್ಲಿ ಭೂ ಮಾಲೀಕರಿಂದ ಭೂಮಿ ಖರೀದಿಸಿ ಭೂ ಹಂಚಿಕೆ ಮಾಡಲು ಕ್ರಮ ಕೈಗೊಂಡಿದೆ ಎಂದರು.
ಡಾ| ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಪಿ.ರಮೇಶ ಮಾತನಾಡಿ, ಫಲಾನುಭವಿಗಳ ಆಯ್ಕೆ ಮಾನದಂಡಗಳು ಹಾಗೂ ಅರ್ಹತೆಗಳು, ಭೂ ಹಂಚಿಕೆ ನಿಯಮಗಳ ಕುರಿತು ಸಂಕ್ಷಿಪ್ತ ವಿವರಣೆ ನೀಡಿದರು.
ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಭೂ ಮಾಲೀಕರು, ವಿಮುಕ್ತ ದೇವದಾಸಿ ವೇದಿಕೆಯ ಸಂಚಾಲಕ ಚಂದಾಲಿಂಗ್ ಕಲಾಲಬಂಡಿ, ಮಾಜಿ ದೇವದಾಸಿಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.