ಹರಿಹರ: ಹಿಂದಿನ ಕಾಂಗ್ರೆಸ್ ಸರ್ಕಾರ ಸೇರಿದಂತೆ ಈಗಿನ ಮೈತ್ರಿ ಸರ್ಕಾರ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆ
ಹೆಚ್ಚಿನ ಆದ್ಯತೆ ನೀಡಿದೆ ಎಂದು ಶಾಸಕ ಎಸ್. ರಾಮಪ್ಪ ಹೇಳಿದರು.
ನಗರದ ಕಾಟ್ವೆ ಭವನದಲ್ಲಿ ಭಾನುವಾರ ಸಂಜೆ ಲೋಕಸಭಾ ಚುನಾವಣಾ ನಿಮಿತ್ತ ಕಾಂಗ್ರೆಸ್ ಪಕ್ಷದ ಅಸಂಘಟಿತ ಕಾರ್ಮಿಕರ ವಿಭಾಗದಿಂದ ಆಯೋಜಿಸಿದ್ದ ಸಂಘಟನೆ, ಪ್ರಚಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಸಂಘಟಿತ ಕಾರ್ಮಿಕರನ್ನು ಮುಖ್ಯವಾಹಿನಿಗೆ ತರಲು ರಾಜ್ಯದ ಸಮ್ಮಿಶ್ರ ಸರಕಾರ ಪ್ರಮಾಣಿಕವಾಗಿ ಶ್ರಮಿಸುತ್ತಿದೆ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಸರಕಾರದಂತೆ ಈಗಿನ ಸಮ್ಮಿಶ್ರ ಸರ್ಕಾರವೂ ಸಹ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆ ಹಲವಾರು ಯೋಜನೆಗಳುನ್ನು ಜಾರಿಗೆ ತಂದಿದೆ. ಕಾರ್ಮಿಕ ಇಲಾಖೆ ಎಲ್ಲಾ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ಸಕಾಲಕ್ಕೆ ದೊರಕಿಸಬೇಕಿದೆ ಎಂದರು.
ಪ್ರಾಥಮಿಕವಾಗಿ ಅಸಂಘಟಿತ ಕಾರ್ಮಿಕರು ಇಲಾಖೆಯಲ್ಲಿ ಹೆಸರನ್ನು ನೋಂದಾಯಿಸಿ ಗುರುತಿನ ಚೀಟಿ ಪಡೆಯಬೇಕು. ಎಲ್ಲಾ ಫಲಾನುಭವಿಗಳಿಗೆ ಗುರುತಿನ ಚೀಟಿ ದೊರೆಯುವಂತೆ ಮಾಡಲು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಈ ಹಿಂದೆಯೇ
ಸೂಚನೆ ನೀಡಿದ್ದೇನೆ ಎಂದರು.
ಎಲ್ಲರಿಗೂ ಸೂರು: ಸ್ವಂತ ಮನೆಯಿದ್ದರೆ ಮಾತ್ರ ಬದುಕಿಗೆ ನೆಮ್ಮದಿ ದೊರೆಯಲು ಸಾಧ್ಯ. ಪ್ರತಿಯೊಂದು ಕುಟುಂಬಕ್ಕೂ ವಸತಿ ಕಲ್ಪಿಸುವುದು ತಮ್ಮ ಗುರಿಯಾಗಿದೆ. ಆ ಸಂದರ್ಭದಲ್ಲಿ ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಆದ್ಯತೆ ಮೇರೆಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು. ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯಾಧ್ಯಕ್ಷ ಶಾಂತವೀರನಾಯಕ್ ಮಾತನಾಡಿ, ರಾಹುಲ್ ಗಾಂಧಿ ಸಲಹೆ ಮೇರೆಗೆ ಪಕ್ಷದಲ್ಲಿ ಅಸಂಘಟಿತ ಕಾರ್ಮಿಕರ ವಿಭಾಗವನ್ನು ಆರಂಭಿಸಲಾಗಿದೆ.
ಸಂಘಟಿತ ಕಾರ್ಮಿಕರಿಗೆ ಪಿಎಫ್, ಇಎಸ್‌ಐ, ನಿವೃತ್ತಿಯಾದಾಗ ಪಿಂಚಣಿ, ಇತರೆ ಸೌಲಭ್ಯಗಳಿರುವಂತೆ ಅಸಂಘಟಿತರಿಗಿಲ್ಲ. ಅವರು ನಿವೃತ್ತಿ ವಯಸ್ಸಿಗೆ ಬಂದಾಗ ಅತ್ಯಂತ ಹೀನಾಯ ಸ್ಥಿತಿಗೆ ತಲುಪುತ್ತಾರೆ. ಅವರ ಸಬಲೀಕರಣಕ್ಕೆ ಕಾಂಗ್ರೆಸ್ ಪಕ್ಷವು ಕಾಳಜಿ ವಹಿಸಿದೆ ಎಂದರು.
ಸಂಘಟನೆಯ ರಾಜ್ಯ ಕಾರ್ಯದರ್ಶಿ ಆರ್. ಅತಾಉಲ್ಲಾ ಖಾನ್ ಮಾತನಾಡಿ, ಬಡವರ ಬಗ್ಗೆ ಪ್ರಮಾಣಿಕ ಕಾಳಜಿವಹಿಸಿದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿ ರಾಹುಲ್ ಗಾಂಧಿಯವರನ್ನು ಪ್ರಧಾನಿ ಮಾಡುವ ಪಣ ತೊಡಬೇಕಿದೆ ಎಂದರು.
ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯಾಧ್ಯಕ್ಷ ಶಾಂತವೀರ ನಾಯಕ್‌ರನ್ನು ಸತ್ಕರಿಸಲಾಯಿತು. ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಲ್.ಬಿ. ಹನುಮಂತಪ್ಪ, ಎಂ.ಬಿ.ಆಬಿದ್ ಅಲಿ, ರಾಜ್ಯ ಪ್ರಧಾನ ಕಾರ್ಯದರ್ಶಿ ನಯಾಜ್ ಶೇಖ್, ಜಿಲ್ಲಾಧ್ಯಕ್ಷ ಮಂಜಾನಾಯ್ಕ, ನಗರಸಭೆ ಮಾಜಿ ಅಧ್ಯಕ್ಷ ಶಂಕರ್ ಖಟಾವ್‌ಕರ್, ಮುಖಂಡರಾದ ಸಿ.ಎನ್.ಹುಲಿಗೇಶ್, ಸೈಯದ್ ಆಸಿಫ್ ಖಾದ್ರಿ, ಭಾನುವಳ್ಳಿ ದಾದಾಪೀರ್, ಶಿವಲಿಂಗಪ್ಪ, ವೀರೇಶ್, ಗೀತಾ ಕದರಮಂಡಲಗಿ, ಮಂಜುಳಮ್ಮ ಮತ್ತಿತರರಿದ್ದರು.