ಹೊಸದಿಲ್ಲಿ : ಜಮ್ಮು ಕಾಶ್ಮೀರದಲ್ಲಿ ಪಿಡಿಪಿ ಜತೆ ಸೇರಿ ಕಾಂಗ್ರೆಸ್ ಸರಕಾರ ಸಮ್ಮಿಶ್ರ ಸರಕಾರ ರಚಿಸುವುದೇ ?ಇಂಥದ್ದೊಂದು ಪ್ರಶ್ನೆ ಈಗ ರಾಜಕೀಯ ವಲಯದಲ್ಲಿ ಹರಿದಾಡುತ್ತಿದ್ದು ತಾಜಾ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಜಮ್ಮು ಕಾಶ್ಮೀರದಲ್ಲಿ ಪಿಡಿಪಿ ಜತೆಗೂಡಿ ಕಾಂಗ್ರೆಸ್ ಪಕ್ಷ ಸಮ್ಮಿಶ್ರ ಸರಕಾರ ರಚಿಸುವ ಸಾಧ್ಯತೆಗಳು ಇವೆ ಎಂಬ ಮಾತುಗಳು ಕೇಳಿಬರುತ್ತಿವೆ.
ವರದಿಗಳ ಪ್ರಕಾರ ಇಂದು ಸೋಮವಾರ ಕಾಂಗ್ರೆಸ್ ಉನ್ನತ ನಾಯಕರು ಜಮ್ಮು ಕಾಶ್ಮೀರದಲ್ಲಿನ ತಾಜಾ ರಾಜಕೀಯ ಸ್ಥಿತಿಗತಿಯನ್ನು ಚರ್ಚಿಸಲು ದಿಲ್ಲಿಯಲ್ಲಿ ಸಭೆ ಸೇರಲಿರುವುದಾಗಿ ವರದಿಗಳು ತಿಳಿಸಿವೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿವಾಸಿದಲ್ಲಿ ಕಾಂಗ್ರೆಸ್ ಉನ್ನತ ಮಟ್ಟ ಸಭೆ ಬೆಳಗ್ಗೆ 11.30ರ ಸುಮಾರಿಗೆ ನಡೆಯಲಿದೆ. ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಈ ಹಿಂದೆ ಮನಮೋಹನ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಕಾಶ್ಮೀರ ಸಮಿತಿಯನ್ನು ರಚಿಸಿದ ಉದಾಹರಣೆ ಇದೆ.
ಈ ಹಿಂದೆ ಕಾಶ್ಮೀರ ಸಮಿತಿಯಲ್ಲಿ ಸಿರಿಯ ನಾಯಕರಾದ ಡಾ. ಕರಣ್ ಸಿಂಗ್, ಪಿ. ಚಿದಂಬರಂ, ಗುಲಾಮ್ ನಬಿ ಆಜಾದ್, ಅಂಬಿಕಾ ಸೋನಿ ಮೊದಲಾದವರು ಇದ್ದರು.
ಇಂದು ಮನಮೋಹನ್ ಸಿಂಗ್ ನಿವಾಸದಲ್ಲಿ ನಡೆಯುವ ಸಭೆಯಲ್ಲಿ ಕಾಶ್ಮೀರ ವಿಷಯವೇ ಪ್ರಧಾನವಾಗಿ ಚರ್ಚಿತವಾಗಲಿದ್ದು ಪಿಡಿಪಿ ಜತೆಗೂಡಿ ಸಮ್ಮಿಶ್ರ ಸರಕಾರ ರಚಿಸುವ ಬಗ್ಗೆ ಚಿಂತನೆ ನಡೆಯಲಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಆದರೆ ನಿನ್ನೆ ಭಾನುವಾರ ಕಾಂಗ್ರೆಸ್ ತಾನು ಪಿಡಿಪಿ ಜತೆಗೂಡಿ ಸಮ್ಮಿಶ್ರ ಸರಕಾರ ರಚಿಸುವುದಿಲ್ಲ ಎಂದು ಹೇಳಿದೆ. ಅದರ ಹೊರತಾಗಿಯೂ ಇಂದು ನಡೆಯಲಿರುವ ಕಾಂಗ್ರೆಸ್ ಉನ್ನತರ ಸಭೆಗೆ ಕಾಶ್ಮೀರ ದೃಷ್ಟಿಕೋನದಿಂದ ವಿಶೇಷ ಮಹತ್ವ ಇದೆ ಎಂದು ವರದಿಗಳು ಹೇಳಿವೆ.