“ವಿವಾದರಹಿತ ರಾಜಕಾರಣಿಯಾಗಿರುವುದಕ್ಕೆ “ಹೊಂದಾಣಿಕೆ ರಾಜಕಾರಣಿ’ ಎಂಬ ಪಟ್ಟಕಟ್ಟುವುದು ಸರಿಯಲ್ಲ. ಪಕ್ಷ ವಹಿಸಿದ ಜವಾಬ್ದಾರಿ ಹಾಗೂ ಜನರ ನಿರೀಕ್ಷೆಯಂತೆ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಇದು ದೇಶದ ಸಮರ್ಥ ನಾಯಕತ್ವಕ್ಕಾಗಿ ನಡೆಯುವ ಚುನಾವಣೆ. ಪ್ರಬಲರೊಂದಿಗೆ ಸೆಣಸಾಡಬೇಕೆಂಬ ಚಪಲ ಇಲ್ಲ. ಸೆಣಸಾಡಿ ಗೆಲ್ಲಬೇಕೆಂಬ ಹಂಬಲ ಇದೆ.’ ಇದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಅವರ ಮಾತು. ಅವರು “ಉದಯವಾಣಿ’ಗೆ ನೀಡಿರುವ ವಿಶೇಷ ಸಂದರ್ಶನದ ವಿವರ ಇಲ್ಲಿದೆ.
ರಾಜ್ಯದಲ್ಲಿ ಸೀಟು ಸಂಖ್ಯೆ ಹೆಚ್ಚಿಸಲು ಕಾರ್ಯತಂತ್ರ ಏನು?
ಬಿಜೆಪಿ ಹಾಗೂ ಎನ್‌ಡಿಎ ಮಿತ್ರಕೂಟದ ಎಲ್ಲ ಸಂಸದರು ಸಮರ್ಥವಾಗಿ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ನಾವು ರಾಜಕೀಯ ಸಮೀಕ್ಷೆ ನಡೆಸಿದ್ದೇವೆ. ಜೆಡಿಎಸ್-ಕಾಂಗ್ರೆಸ್ ಆಂತರಿಕ ಜಗಳದ ಜತೆ ನಮ್ಮ ಸಂಘಟನಾ ಶಕ್ತಿ ವೃದ್ಧಿಯಾಗಿದೆ. ಲೋಕಸಭಾ ಚುನಾವಣೆಯಲ್ಲಿ ಜನ ಅಭಿವೃದ್ಧಿ ಹಾಗೂ ದೇಶದ ಹಿತಕ್ಕಾಗಿ ಮತ ಹಾಕುತ್ತಾರೆ. ವಿಧಾನಸಭೆ ಚುನಾವಣೆಗೂ ಈ ಚುನಾವಣೆಗೂ ಸಾಕಷ್ಟು ವ್ಯತ್ಯಾಸ ಇದೆ. ಕಳೆದ ಐದು ವರ್ಷದಲ್ಲಿ ರಾಜ್ಯಕ್ಕೆ ದುಪ್ಪಟ್ಟು ಅನುದಾನ
ಬಂದಿದೆ. ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ, ಸಿದ್ದರಾಮಯ್ಯ ಅವರ ಜಂಗೀಕುಸ್ತಿ ನೋಡಿ ಜನ ಬೇಸತ್ತು
ಹೋಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ 22ಕ್ಕೂ ಅಧಿಕ ಸೀಟು ಬರುತ್ತವೆ. ಕೇಂದ್ರ ಸರ್ಕಾರದ ಐದು ವರ್ಷದ ಸಾಧನೆಯೇ ದೇಶದಲ್ಲಿ 300ಕ್ಕೂ ಅಧಿಕ ಸೀಟು ತಂದುಕೊಡುತ್ತದೆ.
ರಾಷ್ಟ್ರ ರಾಜಕಾರಣದಲ್ಲಿ ಅನಂತಕುಮಾರ್ ಅವರಿಂದ ತೆರವಾದ ಸ್ಥಾನ ನಿಮ್ಮಿಂದ ತುಂಬಲು ಸಾಧ್ಯವೇ?
ಅನಂತ ಕುಮಾರ್ ಅವರಿಂದ ತೆರವಾದ ಸ್ಥಾನವನ್ನು ತುಂಬಲು ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. ಕಳಸಾ ಬಂಡೂರಿ ಯೋಜನೆ ಕುರಿತು ರಾಜ್ಯದ ನಾಯಕರನ್ನು ದೆಹಲಿಯ ನಮ್ಮ ಮನೆಗೆ ಕರೆಸಿ, ಮಾಜಿ ಪ್ರಧಾನಿ ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪ್ರಮುಖ ನಿಯೋಗಗಳನ್ನು ಸರ್ಕಾರದ ಮುಂದೆ ಕರೆದುಕೊಂಡು ಹೋಗಿದ್ದೆ. ರಾಜ್ಯದ ಹಿತಾಸಕ್ತಿ ಬಂದಾಗ ರಾಜ್ಯದ ಕೊಂಡಿಯಾಗಿ ಪೂರ್ತಿ ಪ್ರಮಾಣದಲ್ಲಿ ಕೆಲಸ ಮಾಡಿದ್ದೇನೆ. ಮುಂದೆಯೂ ಮಾಡಲಿದ್ದೇನೆ. ಅನಂತಕುಮಾರ್ ಅವರಷ್ಟು ಶಕ್ತಿಶಾಲಿಯಾಗಿಲ್ಲದಿದ್ದರೂ ಆ ಸ್ಥಾನ ತುಂಬಬಲ್ಲ ಸಾಮರ್ಥ್ಯ ನನ್ನಲ್ಲಿದೆ.
ನಿಮ್ಮನ್ನು ಹೊಂದಾಣಿಕೆ ರಾಜಕಾರಣಿ ಎಂದು ಕರೆಯುವುದೇಕೆ?
“ವಿವಾದರಹಿತ’ ಎಂದರೆ “ಹೊಂದಾಣಿಕೆ’ ಎಂದಲ್ಲ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕೂಡ ವಿವಾದರಹಿತ
ರಾಜಕಾರಣಿಯಾಗಿದ್ದರು. ಹಾಗಂತ ಅವರನ್ನು ಹೊಂದಾಣಿಕೆ ರಾಜಕಾರಣಿ ಎಂದು ಕರೆಯಲಾಗುತ್ತದೆಯೇ? ಬಿಜೆಪಿಯಿಂದ
ಶಾಸಕ, ಸಂಸದ, ಮುಖ್ಯಮಂತ್ರಿ, ಕೇಂದ್ರ ಸಚಿವನಾಗಿದ್ದೇನೆ, ನಾಲ್ಕುವರೆ ವರ್ಷ ಪಕ್ಷದ ರಾಜ್ಯಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. “ನಾನು ನಮ್ಮ ಪಕ್ಷದ ನಂ.1 ಫಲಾನುಭವಿ.’ ದೇಶಕ್ಕೆ ಮಂತ್ರಿಯಾಗಿ, ರಾಜ್ಯಕ್ಕೆ ಮುಖ್ಯಮಂತ್ರಿಯಾಗಿ, ಕ್ಷೇತ್ರಕ್ಕೆ ಶಾಸಕ, ಸಂಸದನಾಗಿ ಕೆಸಲ ಮಾಡಿದ್ದೇನೆ. ಇದರಿಂದ ವಿವಾದರಹಿತನಾಗಿ ಉಳಿದಿದ್ದೇನೆ. ಹಾಗಂತ ಹೊಂದಾಣಿಕೆ ರಾಜಕಾರಣ ಮಾಡಿಲ್ಲ. ಮಾಡುವುದೂ ಇಲ್ಲ.
ನಿಮಗೆ ವಲಸೆ ಹಕ್ಕಿ ಎಂಬ ಬಿರುದಿದೆಯಲ್ಲ?
ಬೇರೇಬೇರೆ ಕಾರಣಕ್ಕೆ ಬೆಂಗಳೂರಿಗೆ ಬಂದೆ. ಬೆಂಗಳೂರಿಗೆ ಬಂದಾಗ ವಲಸೆ ಹಕ್ಕಿಯಾಗಿದ್ದೆ. ಆದರೆ, ಈಗ ವಲಸೆ ಹಕ್ಕಿಯಾಗಿಲ್ಲ. ಉಡುಪಿ ಸಂಸದೆಯಾಗಿದ್ದ ಮನೋರಮಾ ಮಧ್ವರಾಜ್ ಅವರು ಪಕ್ಷಾಂತರ ಮಾಡಿದರು. ಚಿಕ್ಕಮಗಳೂರಿನ ನಮ್ಮ ಸಂಸದರಾಗಿದ್ದ ಡಿ.ಸಿ.ಶ್ರೀಕಂಠಪ್ಪ ಅವರು ವಿಧಿವಶರಾಗಿದ್ದರು. ಪಕ್ಷ ಸೂಚಿಸಿದಂತೆ ಈ ಎರಡೂ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದೆ. ಡಿ.ಬಿ.ಚಂದ್ರೇಗೌಡರ ನಿರ್ಗಮನದ ನಂತರ ಪಕ್ಷದ ಅಪೇಕ್ಷೆಯಂತೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧೆ ಮಾಡಿದೆ. ಈ ಬಾರಿಯೂ ಮೈಸೂರು-ಕೊಡಗು, ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಬರಲು ಹೇಳುತ್ತಲೇ ಇದ್ದರು.
ಕಾಂಗ್ರೆಸ್ ಬಿಡುಗಡೆ ಮಾಡಿದ ಡೈರಿಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗಿದೆಯೇ?
ಅದೊಂದು ನಕಲಿ ಡೈರಿ. ಈಗ ರಾಜ್ಯದಲ್ಲಿ ಅವರದ್ದೇ ಸರ್ಕಾರ ಇದೆ. 2009ರಲ್ಲಿ ಕೇಂದ್ರದಲ್ಲೂ ಅವರದ್ದೇ ಸರ್ಕಾರ ಇತ್ತು. ಆದರೂ ಯಾವುದೇ ತನಿಖೆ ಮಾಡಿಲ್ಲ. ಬಿಜೆಪಿಗೆ ಜನ ಬೆಂಬಲ ಬರುತ್ತದೆ ಎಂಬುದು ಗೊತ್ತಾದ ನಂತರ ನಕಲಿ ಡೈರಿ
ಸೃಷ್ಟಿಸಿ ಜನರ ತಲೆ ಕೆಡಿಸುವ ಪ್ರಯತ್ನ ನಡೆಸಿದ್ದಾರೆ. ಕಾಂಗ್ರೆಸ್ ತಾನೇ ತೋಡಿಕೊಂಡ ಖೆಡ್ಡಾಗೆ ಬಿದ್ದಿದೆ.
ರಾಜು ಖಾರ್ವಿ ಕೊಡೇರಿ