Advertisement
ಜೆಡಿಎಸ್ ಈ ಹಿಂದೆ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿ ಕೊಂಡು ಕೈಸುಟ್ಟುಕೊಂಡಿತ್ತು. ಬಳಿಕ ಕುಮಾರಸ್ವಾಮಿ ಬಿಜೆಪಿಯೊಂದಿಗೆ ಕೈ ಜೋಡಿಸಿ ತಪ್ಪು ಮಾಡಿದ್ದರು. ಮತ್ತೆ ಅಂತಹ ತಪ್ಪು ಮಾಡುವುದಿಲ್ಲ ಎಂದರು. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಫೆಬ್ರವರಿ ಅಂತ್ಯದ ವೇಳೆಗೆ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲೂ ಪಕ್ಷ ಸ್ಪರ್ಧೆ ಮಾಡಲಿದ್ದು, ಕೆಲವೆಡೆ ಎಡಪಕ್ಷಗಳು ಮನವಿ ಮಾಡಿದರೆ ಸೀಟು ಬಿಟ್ಟುಕೊಡಲಾಗುವುದು. ಹಿಂದಿನಂತೆ ಎಸ್‌ಡಿಪಿಐ ಜತೆ ಸೀಟು ಹಂಚಿಕೊಳ್ಳುವ ಯೋಚನೆ ಇಲ್ಲ ಎಂದರು.
ರಾಜ್ಯದಲ್ಲಿ ಕಾವೇರಿ ನೀರಿನ ಸಮಸ್ಯೆ, ಮಹಾದಾಯಿ ವಿಚಾರ, ರೈತರ ಸಮಸ್ಯೆ ಮೊದಲಾದ ವಿಚಾರಗಳನ್ನು ಮುಂದಿಟ್ಟುಕೊಂಡು ಜನರ ಬಳಿಗೆ ತೆರಳುತ್ತೇವೆ. ಕಾವೇರಿ, ಮಹಾದಾಯಿ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರಧಾನಿ ಮೋದಿ ಬಳಿ ಮಾತುಕತೆ ನಡೆಸಿದ್ದೇವೆ. ಅವರು ಎಲ್ಲದಕ್ಕೂ ಮೌನ ವಹಿಸಿ ಬುದ್ಧಿವಂತಿಕೆ ಪ್ರದರ್ಶಿಸುತ್ತಿದ್ದಾರೆ. ಮೋದಿ ಕುರಿತು ತಾನು ಮೃದು ಧೋರಣೆ ತಳೆದಿದ್ದೇನೆ ಎಂಬ ಆರೋಪ ಇದೆ. ಆದರೆ ಅದು ಅವರ ಸ್ಥಾನಕ್ಕೆ ಕೊಡುವ ಗೌರವ ಎಂದರು. ಫೆಬ್ರವರಿಯಲ್ಲಿ ಜೆಡಿಎಸ್ ಸಮಾವೇಶ
ಫೆಬ್ರವರಿ 2ನೇ ವಾರದಲ್ಲಿ ಮಂಗಳೂರಿನಲ್ಲಿ ಜೆಡಿಎಸ್ ಸಮಾವೇಶ ನಡೆಯಲಿದೆ. ಈ ಹಿಂದೆ ಜಿಲ್ಲೆಯಲ್ಲಿ ಕೋಮು ಗಲಭೆ ನಡೆದಾಗ ನಾವು ಜೆಡಿಎಸ್ ವತಿಯಿಂದ ಶಾಂತಿಸಭೆ ಆಯೋಜಿಸಲು ನಿರ್ಧರಿಸಿದ್ದೆವು. ಆದರೆ ಸರಕಾರ ಅದಕ್ಕೆ ಅವಕಾಶ ನೀಡಲಿಲ್ಲ. ನಾವು ಯಾವುದೇ ರಾಜಕೀಯ ಉದ್ದೇಶದಿಂದ ಆ ಸಭೆಯನ್ನು ಆಯೋಜಿಸಿರಲಿಲ್ಲ. ಆದರೆ ಕಾನೂನಿಗೆ ಗೌರವ ಕೊಟ್ಟು ನಾವು ಸಭೆಯನ್ನು ರದ್ದುಪಡಿಸಿದ್ದೆವು. ಮುಂದೆ ಜೆಡಿಎಸ್ ಅಧಿಕಾರಕ್ಕೆ ಬಂದರೆ ಇಂತಹ ಕೋಮು ಗಲಭೆಗಳನ್ನು ಮಟ್ಟ ಹಾಕಲಾಗುವುದು ಎಂದರು.
Related Articles
ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಪ್ರಸ್ತುತ ಜೆಡಿಎಸ್‌ಗೆ ಸೇರ್ಪಡೆಗೊಂಡಿದ್ದು, ಪಕ್ಷದ ಸಿದ್ಧಾಂತವನ್ನು ಒಪ್ಪಿ ಕೊಂಡು ಬರುವವರಿಗೆ ಅವಕಾಶ ನೀಡುತ್ತೇವೆ. ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಶಾಸಕರಾದ ಡಾ| ಶಿವರಾಜ್ ಪಾಟೀಲ್ ಹಾಗೂ ಮಾನಪ್ಪ ವಜ್ಜಲ್ ರಾಜೀನಾಮೆ ಅಂಗೀಕಾರ ಆಗುವ ಮೊದಲೇ ಬಿಜೆಪಿ ಸೇರಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳುವುದು ಸ್ಪೀಕರ್‌ಗೆ ಬಿಟ್ಟ ವಿಚಾರ ಎಂದು ದೇವೇಗೌಡ ಅವರು ವಿವರಿಸಿದರು.
Advertisement
ವೈ.ಎಸ್.ವಿ. ದತ್ತಾ ಪಕ್ಷದಲ್ಲಿ ಸಕ್ರಿಯರಾಗಿಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ದತ್ತಾ ಪ್ರಸ್ತುತ ಆತ್ಮಚರಿತ್ರೆ ಬರೆಯುವುದರಲ್ಲಿ ಮಗ್ನರಾಗಿದ್ದಾರೆ. ಚಿಕ್ಕಮಗಳೂರು ಭಾಗದಲ್ಲಿ ಅವರೇ ನಮ್ಮ ನಾಯಕರಾಗಿದ್ದು, ಮುಂದೆಯೂ ಕಡೂರು ಕ್ಷೇತ್ರದಿಂದ ಗೆದ್ದು ಬರಲಿದ್ದಾರೆ. ಸಚಿವ ಅನಂತಕುಮಾರ ಹೆಗಡೆ ಅವರ ವಿವಾದಾತ್ಮಕ ಹೇಳಿಕೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ಮೋದಿ ಅವರು ಉತ್ತಮ ರಾಜಕೀಯಾನುಭವ ಹೊಂದಿದ್ದು, ಈ ಕುರಿತು ಸಚಿವರಿಗೆ ಸಲಹೆ ನೀಡಬೇಕು ಎಂದು ತಿಳಿಸಿದರು.ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎಂ. ಫಾರೂಕ್, ದ.ಕ. ಜಿಲ್ಲಾಧ್ಯಕ್ಷ ಮೊಹಮ್ಮದ್ ಕುಂಞಿ, ಯುವ ಘಟಕದ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ, ಮುಖಂಡರಾದ ಎಂ.ಬಿ. ಸದಾಶಿವ, ಅಶ್ವಿನ್ ಪಿರೇರಾ, ರಾಮ್‌ಗಣೇಶ್, ರಮೇಶ್ ಗೌಡ, ರವೂಫ್ ಪುತ್ತಿಗೆ, ರಮೀಜಾ ಭಾನು, ಅಜೀಜ್ ಕುದ್ರೋಳಿ, ವಸಂತ ಪೂಜಾರಿ, ಎಂ.ಕೆ. ಖಾದರ್, ಹೈದರ್ ಪರ್ತಿಪಾಡಿ ಮೊದಲಾದವರು ಉಪಸ್ಥಿತರಿದ್ದರು.