ವಿಜಯಪುರ: ಮೈತ್ರಿ ಸರ್ಕಾರದಲ್ಲಿ ಸಚಿವರಾಗಿರುವ ವಿಜಯಪುರ ಜಿಲ್ಲೆಯ ಕಾಂಗ್ರೆಸ್ ಸಚಿವರಿಬ್ಬರು ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಆಲಮಟ್ಟಿಯ ಲಾಲ ಬಹಾದ್ದೂರ ಶಾಸ್ತ್ರಿ ಜಲಾಶಯದ ನೀರಿನ ಸಂಗ್ರಹದ ವಿಷಯದಲ್ಲಿ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ.
ತಮ್ಮ ವಿರುದ್ಧ ಶಿವಾನಂದ ಪಾಟೀಲ ಹೇಳಿಕೆ ನೀಡಿದ್ದಾರೆಂದು ಗೃಹ ಸಚಿವ ಎಂ.ಬಿ.ಪಾಟೀಲ ಕಿಡಿಕಾರಿದ್ದರೆ, ಅಂಥ ಹೇಳಿಕೆ ನೀಡಿದ್ದರೆ ಸಾಬೀತುಪಡಿಸಲಿ ಎಂದು ಶಿವಾನಂದ ಪಾಟೀಲ ಸವಾಲು ಹಾಕಿದ್ದಾರೆ.
ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಗೃಹ ಸಚಿವ ಎಂ.ಬಿ.ಪಾಟೀಲ, ಆರೋಗ್ಯ ಸಚಿವ ಶಿವಾನಂದ ಪಾಟೀಲ ಅವರ ಮನಸ್ಥಿತಿ ಅಸೂಯೆ, ಕೊಳಕು ಹಾಗೂ ಒರಟು ಸ್ವಭಾವದಿಂದ ಕೂಡಿದೆ. ಹೀಗಾಗಿ ನನ್ನ ಮೇಲೆ ಹೊಟ್ಟೆ ಉರಿಯಿಂದ ಸಲ್ಲದ ಆರೋಪ ಮಾಡಿ ಟೀಕಿಸುತ್ತಿದ್ದಾರೆ.
ಅವರ ಕ್ಷೇತ್ರ ವ್ಯಾಪ್ತಿಯಲ್ಲಿನ ಬಳೂತಿ ಜಾಕವೆಲ್ ಸುಟ್ಟಿತ್ತು. ಅನ್ನದಾತರ ಕಾಳಜಿಯಿಂದ ನಾನು ಅದನ್ನು ದುರಸ್ತಿ ಮಾಡಿಸಿದ್ದೆ. ಇದರಿಂದ ಶಿವಾನಂದ ಅವರಿಗೆ ನನ್ನ ಮೇಲೆ ಹೊಟ್ಟೆ ಉರಿ ಆರಂಭವಾಗಿದೆ. ಇಷ್ಟಕ್ಕೂ ಈ ಕಾಳಜಿ, ಬದ್ಧತೆ ಬಳೂತಿ ಜಾಕ್‌ವೆಲ್ ಸುಟ್ಟಾಗ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದ್ದಾರೆ.
ಆಲಮಟ್ಟಿ ಜಲಾಶಯದಲ್ಲಿ ಹಿಂದಿನ ವರ್ಷ ಸಂಗ್ರಹ ಇದ್ದ ನೀರು ಖಾಲಿಯಾಗಲು ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ.ಪಾಟೀಲ ಕಾರಣ ಎಂದು ಸಚಿವ ಶಿವಾನಂದ ಪಾಟೀಲ ಹೇಳಿಕೆ ನೀಡಿದ್ದಾರೆ. ಇಷ್ಟಕ್ಕೂ ಜಲಾಶಯದಲ್ಲಿ ಲಭ್ಯ ಇರುವ ನೀರನ್ನು ಯಾವ ಕೆಲಸಕ್ಕೆ, ಎಷ್ಟೆಷ್ಟು ನೀರನ್ನು ಯಾವ್ಯಾವ ಸಂದರ್ಭದಲ್ಲಿ ಹೇಗೆಲ್ಲ ಬಿಡಬೇಕು ಎಂಬುದನ್ನು ನಿರ್ಧರಿಸುವುದು ನೀರಾವರಿ ಸಲಹಾ ಸಮಿತಿಯೇ ಹೊರತು ಜಲಸಂಪನ್ಮೂಲ ಸಚಿವರಲ್ಲ.
ಈ ಎಲ್ಲ ಅಂಶ ಗೊತ್ತಿದ್ದೂ ಮಾಧ್ಯಮಗಳ ಮೂಲಕ ನನ್ನ ಮೇಲೆ ಗೂಬೆ ಕೂರಿಸಲು ಮುಂದಾಗಿರುವ ಕ್ರಮ ಸರಿಯಲ್ಲ ಎಂದರು. ಶಿವಾನಂದ ಪಾಟೀಲರ ವರ್ತನೆಯಿಂದ ಬೇಜಾರಾಗಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಅವರ ಗಮನಕ್ಕೆ ತರುತ್ತೇನೆ ಎಂದರು.