Advertisement

ಮೈತ್ರಿ ಸರ್ಕಾರ ರಚನೆ ಗುಟ್ಟು ಅರ್ಥವಾಗುತ್ತಿಲ್ಲ: ಸುಧಾಕರ್‌

11:17 AM Jun 21, 2018 | |

ಚಿಕ್ಕಬಳ್ಳಾಪುರ: ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿರುವ ಕುಮಾರಸ್ವಾಮಿ ಅದೃಷ್ಟದ ರಾಜಕಾರಣಿಯಾಗಿದ್ದಾರೆ. ಆದರೆ ರಾಜ್ಯದಲ್ಲಿ ಅತಿ ಕಡಿಮೆ ಸೀಟು ಪಡೆದಿರುವ ಜೆಡಿಎಸ್‌ನೊಂದಿಗೆ ನಮ್ಮ ಪಕ್ಷ ಮೈತ್ರಿ ಸರ್ಕಾರ ರಚನೆ ಮಾಡಿರುವ ಗುಟ್ಟು ನನಗೆ ಇನ್ನೂ ಅರ್ಥವಾಗಿಲ್ಲ. ಅದರ ಹುಡುಕಾಟದಲ್ಲಿ ಇದ್ದೇನೆ
ಎಂದು ಶಾಸಕ ಡಾ.ಕೆ.ಸುಧಾಕರ್‌ ತಿಳಿಸಿದರು.

Advertisement

ತಾಲೂಕಿನ ಸುದ್ದಹಳ್ಳಿಯಲ್ಲಿ ಬುಧವಾರ ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘ ವತಿಯಿಂದ ಕೋಚಿಮುಲ್‌ ನೆರವಿನೊಂದಿಗೆ 10.50 ಲಕ್ಷ ರೂ, ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಿಸಿರುವ ಅಮೃತ ಭವನ ಕಟ್ಟಡವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ನಮಗೆ 35 ಸೀಟು ಬಂದಿವೆ. ನಿಮ್ಮ ಪಕ್ಷದವರೇ ಮುಖ್ಯಮಂತ್ರಿಯಾಗಲಿ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ನಮ್ಮ ಪಕ್ಷದ ನಾಯಕರಿಗೆ ಹೇಳಿದ್ದರಂತೆ. ಆದರೂ ನಮ್ಮ ಪಕ್ಷದ ನಾಯಕರು ಜೆಡಿಎಸ್‌ ಪಕ್ಷಕ್ಕೆ ಸಿಎಂ ಸ್ಥಾನ ಬಿಟ್ಟು ಕೊಟ್ಟಿದ್ದಾರೆ. ನನಗೆ ಇಂದಿಗೂ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಸರ್ಕಾರ ರಚನೆಗ ಗುಟ್ಟು ತಿಳಿಯುತ್ತಿಲ್ಲ ಎಂದರು.

ಹಿಂಬಾಗಿಲ ಓಡಾಟ: ರಾಜ್ಯದ ಸಮ್ಮಿಶ್ರ ಸರ್ಕಾರ ಒಳ್ಳೆ ಆಡಳಿತ ನೀಡುವ ಭರವಸೆ ನನಗಿದೆ. ಜಿಲ್ಲೆಯ
ಅಭಿವೃದ್ಧಿಗೂ ಸಂಪೂರ್ಣ ಸಹಕಾರ ನೀಡುವುದಾಗಿ ಸಿಎಂ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ನಮ್ಮ
ಸರ್ಕಾರ ಇದ್ದಾಗ ಎಲ್ಲಾ ಕೆಲಸ ಕಾರ್ಯಗಳಿಗೆ ಮುಂಬಾಗಲಿನಿಂದ ಬಂದು ಹೋಗುತ್ತಿದ್ದವು. ಈಗ
ಹಿಂಬಾಗಲಿಂದ ಬಂದು ಹೋಗಬೇಕಿದೆ. ಆದರೂ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಸರ್ಕಾರದ ಸಮನ್ವಯ
ಸಮಿತಿ ಅಧ್ಯಕ್ಷರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಿರುವುದರಿಂದ ಮೈತ್ರಿ ಸರ್ಕಾರ ಸುಗಮವಾಗಿ ನಿರೀಕ್ಷೆಯಂತೆ ಉತ್ತಮ ಕೆಲಸಗಳನ್ನು ಮಾಡುವ ಭರವಸೆ ನನಗಿದೆ ಎಂದರು.

ಬೇಸರ: ಕಳೆದ ಐದು ವರ್ಷದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನೇತೃತ್ವದಲ್ಲಿ ಉತ್ತಮ ಜನಪರ ಆಡಳಿತ ನೀಡಿತು. ಹಿಂದೆ ಯಾವ ಸರ್ಕಾರ, ಸಿಎಂ ಕೊಡದಷ್ಟು ಸಾಮಾಜಿಕ ನ್ಯಾಯಕ್ಕೆ ಸಿದ್ದರಾಮಯ್ಯ ಒತ್ತು ಕೊಟ್ಟರು. ಆದರೂ ಚುನಾವಣೆಯಲ್ಲಿ ರಾಜ್ಯದ ಜನತೆ ನಮ್ಮ ಪಕ್ಷದ ಕೈ ಹಿಡಿಯಲಿಲ್ಲ. ಅನೇಕ ಉತ್ತಮ ಕಾರ್ಯಕ್ರಮಗಳ ಬಳಿಕವೂ ಕಳೆದ ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಸೋತಿದ್ದು ಏಕೆ ಎಂದು ನನಗೂ ಇನ್ನೂ ಅರ್ಥ ಮಾಡಿಕೊಳ್ಳಲಿಕ್ಕೆ ಆಗಲಿಲ್ಲ ಎಂದು ಸುಧಾಕರ್‌ ತೀವ್ರ ಬೇಸರ ವ್ಯಕ್ತಪಡಿಸಿದರು.

ಹೈನುಗಾರಿಕೆಗೆ ಒತ್ತು: ಇಂದು ಉನ್ನತ ಶಿಕ್ಷಣ ಪಡೆದವರೂ ಕೂಡ ಹೈನುಗಾರಿಕೆ ಕಡೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಕನಿಷ್ಠ ಎರಡು ಸೀಮೆ ಹಸು ಇಟ್ಟುಕೊಂಡರೆ ತಿಂಗಳಿಗೆ 15 ರಿಂದ 20 ಸಾವಿರ ರೂ, ಸಂಪಾದನೆ ಮಾಡಬಹುದು. ಹೈನುಗಾರಿಕೆ ರೈತನಿಗೆ ಸ್ವಾವಲಂಬಿ ಜತೆಗೆ ಸ್ವಾಭಿಮಾನದ ಬದುಕು ಕಲ್ಪಿಸಿ ಕೊಟ್ಟಿದೆ.

Advertisement

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರೈತರು ಉತ್ಪಾದಿಸುವ ಪ್ರತಿ ಲೀ.ಹಾಲಿಗೆ 5 ರೂ, ಪ್ರೋತ್ಸಾಹ ಧನ ನೀಡಿ ರೈತರಿಗೆ ಉತ್ತೇಜನ ನೀಡಿದರು. ಆದೇ ರೀತಿ ಮುಂದಿನ ದಿನಗಳಲ್ಲಿ ಹೈನುಗಾರಿಕೆಗೆ ಹೆಚ್ಚು ಪ್ರೋತ್ಸಾಹ, ಬೆಂಬಲ ನೀಡಲಾಗುವುದೆಂದ ಶಾಸಕ ಡಾ.ಕೆ.ಸುಧಾಕರ್‌. ಸದ್ಯ ತಾಲೂಕಿಲ್ಲಿ 160 ಹಾಲು ಉತ್ಪಾದಕರ ಸಹಕಾರ ಸಂಘಗಳು ಇವೆ. ಅವು 200 ದಾಟಿದ ನಂತರ ಕ್ಷೇತ್ರಕ್ಕೆ ಸಂಬಂದಪಟ್ಟ ಇಲಾಖೆ ಸಚಿವರನ್ನು ಕರೆದು ಬೃಹತ್‌ ಕಾರ್ಯಕ್ರಮ ರೂಪಿಸಲಾಗುವುದೆಂದರು.

ಇದೇ ವೇಳೆ ಕೋಚಿಮುಲ್‌ ನಿರ್ದೇಶಕ ಕೆ.ವಿ. ನಾಗರಾಜ್‌, ಮುದ್ದೇನಹಳ್ಳಿ ಗ್ರಾಪಂ ಅಧ್ಯಕ್ಷೆ ಲಲಿತಾ, ಗ್ರಾಪಂ ಮಾಜಿ ಅಧ್ಯಕ್ಷ ರಾಜಣ್ಣ, ಮಿಲ್ಟನ್‌ ವೆಂಕಟೇಶ್‌, ಸುಧಾ ವೆಂಕಟೇಶ್‌, ಶಂಕರ್‌, ನಾರಾಯಣಸ್ವಾಮಿ, ಮಂಜುನಾಥ, ಕೋಚಿಮುಲ್‌ ಅಧಿಕಾರಿಗಳಾದ ಡಾ. ವಿ.ಎಂ.ರಾಜು. ಡಾ.ಕೆ.ಜಿ. ಈಶ್ವರಯ್ಯ ಸೇರಿದಂತೆ ಇತರರು ಹಾಜರಿದ್ದರು. 

ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ರೈತರ ಸಾಲ ಮನ್ನಾ ಆಗುವುದು ಖಚಿತ. ಈ ನಿಟ್ಟಿನಲ್ಲಿ ಜುಲೈ ತಿಂಗಳಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಜೆಟ್‌ನಲ್ಲಿ ರೈತರ ಸಾಲ ಮನ್ನಾ ನಿರ್ಧಾರವನ್ನು ಪ್ರಕಟಿಸಲಿದ್ದಾರೆ.

ಡಾ.ಕೆ.ಸುಧಾಕರ್‌, ಶಾಸಕ. 

Advertisement

Udayavani is now on Telegram. Click here to join our channel and stay updated with the latest news.

Next