Advertisement

Lok Sabha Polls: ಮೈತ್ರಿ ಅಭ್ಯರ್ಥಿ ಯದುವೀರ್ ಗೆಲುವಿಗೆ ಶ್ರಮ: ಶಾಸಕ ಹರೀಶ್‌ ಗೌಡ

06:32 PM Mar 16, 2024 | Team Udayavani |

ಹುಣಸೂರು:ವರಿಷ್ಟರ ತೀರ್ಮಾನದಂತೆ ಈ ಬಾರಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯೊಂದಿಗೆ ಮೈಸೂರು-ಕೊಡಗು ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆ ಎದುರಿಸಲು ಸಕಲ ಸಿದ್ದತೆ ನಡೆಸಿದ್ದು, ಪ್ರತಿಹಳ್ಳಿಹಳ್ಳಿಗಳಲ್ಲೂ ಪ್ರಚಾರ ಕೈಗೊಳ್ಳುವ ಮೂಲಕ ಮೈತ್ರಿ ಅಭ್ಯರ್ಥಿ ಯದುವೀರ್ ಒಡೆಯರ್ ಗೆಲುವಿಗೆ ಶ್ರಮಿಸುವುದಾಗಿ ಶಾಸಕ ಹರೀಶ್ ಗೌಡ ಹೇಳಿದರು.

Advertisement

ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕರು ಮೈಸೂರು-ಕೊಡಗು ಕ್ಷೇತ್ರದಲ್ಲಿ ಈ ಹಿಂದಿನ ಸಂಸದ ಪ್ರತಾಪಸಿಂಹ ಅಭಿವೃದ್ಧಿ ವಿಷಯದಲ್ಲಿ ಹಾಗೂ ತಂಬಾಕು ಬೆಳೆಗಾರರ ಸಮಸ್ಯೆಗೆ ಸ್ಪಂದಿಸಿ ಹಲವು ಯೋಜನೆ ಮತ್ತು ಸವಾಲುಗಳನ್ನು ಪರಿಹರಿಸುವಲ್ಲಿ ಯಶಸ್ಸು ಕಂಡಿದ್ದರು. ಆದರೆ ಅವರಿಗೆ ಟಿಕೆಟ್ ನಿರಾಕರಿಸಿದೆ, ಇದು ಆ ಪಕ್ಷದ ಆಂತರಿಕ ವಿಚಾರ. ಈ ಬಾರಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಬದಲಿಸಿ ಯದುವೀರ್ ರನ್ನು ಅಭ್ಯರ್ಥಿಯನ್ನಾಗಿಸಿದೆ. ಜೆಡಿಎಸ್ ಮೈತ್ರಿ ಧರ್ಮ ಪಾಲಿಸಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಿ ಕೇಂದ್ರದಲ್ಲಿ ಸುಭದ್ರ ಸರ್ಕಾರಕ್ಕೆ ಕೈ ಜೋಡಿಸಲಿದೆ ಎಂದರು.

ಮತದಾರರು ಯದುವೀರ್ ರನ್ನು ಸ್ವೀಕರಿಸುವ ವಿಶ್ವಾಸವಿದೆ:
ಯದುವೀರ್ ರವರು ಸಾರ್ವಜನಿಕ ಜೀವನದಲ್ಲಿ ತೊಡಗಿದ್ದು ಹಲವು ಸಾರ್ವಜನಿಕ, ಸಮಾಜ ಸೇವಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ತಳ ಹಂತದ ಜನರ ಬದುಕಿನ ಬವಣೆ ಅರಿತಿದ್ದಾರೆ. ಮತದಾರರು ಯದುವೀರ್ ಅವರನ್ನು ಪ್ರೀತಿಯಿಂದ ಸ್ವೀಕರಿಸುವ ವಿಶ್ವಾಸವಿದೆ. ಸಂಸದರಾದ ಬಳಿಕ ಪ್ರತಾಪಸಿಂಹ ಅವರ ಮಾದರಿಯಲ್ಲೇ ಕೆಲಸ ನಿರ್ವಹಿಸುವ ಆಶಾಭಾವನೆ ಹೊಂದಿದ್ದೇನೆ ಅದು ಪ್ರಶ್ನೆಯೊಂದಕ್ಕೆ ತಿಳಿಸಿದರು.

ಪ್ರತಾಪಸಿಂಹಗೆ ಟಿಕೆಟ್ ತಪ್ಪಿದ್ದಕ್ಕೆ ಬೇಸರವಿದೆ:
ಪ್ರತಾಪಸಿಂಹ ಅವರಿಗೆ ಟಿಕೆಟ್ ಕೈ ತಪ್ಪಿದ ಬಗ್ಗೆ ಬೇಸರವಿದೆ, ಆದರೆ ಅವರೇ ಹೇಳಿರುವಂತೆ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಗುರಿಯೊಂದಿಗೆ ಯದುವೀರ್ ಅವರ ಗೆಲುವಿಗೆ ಪ್ರಚಾರದಲ್ಲಿ ತೊಡಗಿಸಿಕೊಳ್ಳುವುದಾಗಿ ತಿಳಿಸಿರುವುದರಿಂದ ಯಾವುದೇ ಗೊಂದಲವಿಲ್ಲದೆ ಎರಡೂ ಪಕ್ಷದ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಲಿದ್ದೇವೆ ಎಂದರು.

ಈ ವೇಳೆ ಟಿಎಪಿಸಿಎಂಎಸ್ ಅಧ್ಯಕ್ಷ ಬಸವಲಿಂಗಯ್ಯ, ಉಪಾಧ್ಯಕ್ಷ ನಾಗರಾಜ್, ಮುಖಂಡರಾದ ಕೆಂಪೇಗೌಡ, ಚಂದ್ರಶೇಖರ್ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next