Advertisement

ಪಿಎಸೈ ತಮ್ಮನ ಹಣ ಕದ್ದ ಆರೋಪ : ಕೃಷ್ಣಾ ನದಿಗೆ ಹಾರಿ ಯುವಕ ಆತ್ಮಹತ್ಯೆ

02:22 PM Jul 13, 2022 | Vishnudas Patil |

ವಿಜಯಪುರ: ನಗರದ ಠಾಣೆಯೊಂದರ ಪಿಎಸ್ಐ ತಮ್ಮನ ಕಾರಿನಲ್ಲಿದ್ದ ಹಣ ಕದ್ದ ಆರೋಪದಲ್ಲಿ ಪೊಲೀಸರು ಕಿರುಕುಳ ನೀಡುತ್ತಿದ್ದಾರೆಂದು ಮಾನಸಿಕವಾಗಿ ನೊಂದಿದ್ದ ಯುವಕನೊಬ್ಬ ಡೆತ್ ನೋಟ್ ಬರೆದಿಟ್ಡು ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

Advertisement

ನಗರದ ಸೋಮನಾಥ ನಾಗಮೋತಿ (25) ಎಂಬ ಯುವಕನೇ ಕೊಲ್ಹಾರ ಬಳಿ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ನಗರದ ಎಪಿಎಂಸಿ ಠಾಣೆ ಪಿಎಸ್ಐ ಸೊಮೇಶ ಗೆಜ್ಜಿ ಇವರ ಸಹೋದರ ಸಚಿನ್ ಗೆಜ್ಜಿ ಕಾರಿನಲ್ಲಿಟ್ಟಿದ್ದ 1 ಲಕ್ಷ ರೂ. ಕದ್ದ ಆರೋಪ ಹೊರಿಸಲಾಗಿತ್ತು. ಹಣ ಕದ್ದಿರುವುದಾಗಿ ಪೊಲೀಸರು ಸೋಮನಾಥ ನನ್ನು ಠಾಣೆಗೆ ಕರೆಯಿಸಿ ಹಲ್ಲೆ, ಮಾಡಿ ಹಣ ವಾಪಸ್ ನೀಡುವಂತೆ ಒತ್ತಾಯ ಮಾಡಿದ್ದರು ಎಂದು ಯುವಕ ಆರೋಪಿಸಿದ್ದ.

ಈ ಕುರಿತು ಪೇಸ್ ಬುಕ್ ನಲ್ಲಿ ಪೊಲೀಸರ ಕಿರುಕುಳದಿಂದಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಹೇಳಿಕೆ ನೀಡಿ ಕಾಣೆಯಾಗಿದ್ದ. ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದ ಸೋಮನಾಥ ಇದೀಗ, ಕೊಲ್ಹಾರ ಬಳಿ ಕೃಷ್ಣಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ತನ್ನ ಸಾವಿಗೆ ನಾನು ಹಣ ಕದ್ದಿರುವುದಾಗಿ ಸುಳ್ಳು ಆರೋಪ ಮಾಡಿರುವ ಪಿಎಸೈ ಸೋಮೇಶ ಗೆಜ್ಜಿ ಸಹೋದರ ಸಚಿನ ಗೆಜ್ಜಿ, ಎಸೈ ಸೋಮೇಶ ಗೆಜ್ಜಿ, ರವಿ ದೇಗಿನಾಳ, ಸಂತೋಷ ದೇಗಿನಾಳ ಕಾರಣ ಎಂದು ಸಾವಿಗೆ‌ ಮುನ್ನ ಲಿಖಿತ ಬರಣಿಗೆ ಹಾಗೂ ಫೇಸ್ ಬುಕ್ ನಲ್ಲಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.

Advertisement

ಹಣ ಕದ್ದಿಲ್ಲ, ಬಡವನಾದ ನಾನು ಇಷ್ಟೊಂದು ಹಣ ಕೊಡಲು ಸಾಧ್ಯವೂ ಇಲ್ಲ. ಪೊಲೀಸರು ಬಿಳಿ ಹಾಳೆಯ ಮೇಲೆ ನನ್ನ ಸಹಿ ಪಡೆದಿದ್ದಾರೆ. ಅಲ್ಲದೇ ನನ್ನ‌ ಮನೆಯಲ್ಲಿ ಹಣ ಇಟ್ಟು, ಕಳ್ಳತನದ ಆರೋಪ ಹೊರಿಸಿ, ನಮ್ಮ ಮನೆಯವರ ಮೇಲೆ ಕೇಸ್ ಹಾಕಿ ಸಂಸಾರ ಹಾಳು ಮಾಡುವುದಾಗಿ ಬೆದರಿಕೆ ಹಾಕಿದ್ದಾಗಿ ಡೆತ್ ನೋಟ್ ನಲ್ಲಿ ಬರೆದಿದ್ದಾನೆ.

ನನಗೇನಾದರೂ ಆದರೆ ಇವರೇ ಕಾರಣ. ನನ್ನ ಸಾವಿಗೆ ನ್ಯಾಯ ಕೊಡಿಸಿ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಅವರಿಗೂ ಡೆತ್ ನೋಟ್ ನಲ್ಲಿ ಮನವಿ ಮಾಡಿದ್ದಾನೆ.

ಪೊಲೀಸ್ ದೌರ್ಜನ್ಯದಿಂದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುರಿತು ಪ್ರತಿಕ್ರಿಯಿಸಿರುವ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ,
ಪೊಲೀಸ್ ಇಲಾಖೆ ತನಿಖೆ ಮಾಡುತ್ತದೆ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ‌ಕೈಗೊಳ್ಳಲಿದ್ದಾರೆ. ಅಪರಾಧ ಮಾಡಿದವರಿಗೆ ಶಿಕ್ಷೆ ಆಗಲಿದೆ. ತನಿಖೆಗೆ ಮೊದಲೇ ಯಾರ ವಿರುದ್ಧವೂ ಮಾತನಾಡುವುದು ಸರಿಯಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next