Advertisement

ಪಾಸ್‌ ಇದ್ದರೂ ಟಿಕೆಟ್‌ ಹಣ ಪಡೆದ ಆರೋಪ

05:34 PM Jun 18, 2022 | Shwetha M |

ಮುದ್ದೇಬಿಹಾಳ: ವಿದ್ಯಾರ್ಥಿಗಳ ಬಸ್‌ ಪಾಸ್‌ ಅವಧಿ ಜೂ. 30ರವರೆಗಿದ್ದರೂ ವಿದ್ಯಾರ್ಥಿಗಳಿಂದ ಪ್ರಯಾಣ ದರ ಪಡೆದ ಮತ್ತು ಪ್ರಯಾಣ ದರ ಪಡೆದರೂ ಟಿಕೆಟ್‌ ನೀಡದ ಆರೋಪದ ಮೇಲೆ ವಿದ್ಯಾರ್ಥಿಗಳು, ಪಾಲಕರು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುದ್ದೇಬಿಹಾಳ ಘಟಕದ ಬಸ್‌ ತಡೆದು ನಿರ್ವಾಹಕ, ಚಾಲಕರನ್ನು ತರಾಟೆಗೆ ತೆಗೆದುಕೊಂಡ ಘಟನೆ ಚಿರ್ಚನಕಲ್‌ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ.

Advertisement

ಚಿರ್ಚನಕಲ್‌ ಗ್ರಾಮದಲ್ಲಿ 1-4ರವರೆಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದೆ. 5-10ನೇ ತರಗತಿವರೆಗೆ ಕಲಿಯಬೇಕಾದರೆ ಪಕ್ಕದ ಕಂದಗಲ್‌ ಇಲ್ಲವೇ ದೂರದ ಮಾದಿನಾಳ ಗ್ರಾಮಕ್ಕೆ ವಿದ್ಯಾರ್ಥಿಗಳು ಹೋಗಿ ಬರಬೇಕಾಗುತ್ತದೆ. ಗ್ರಾಮದಿಂದ ಅಂದಾಜು 15-20 ವಿದ್ಯಾರ್ಥಿಗಳು ನಿತ್ಯ ಚಿರ್ಚನಕಲ್‌ನಿಂದ ಬೆಳಗ್ಗೆ ಹೋಗಿ ಸಂಜೆ ಮರಳಿ ಬರುತ್ತಾರೆ. ಇದಕ್ಕಾಗಿ ಅವರಲ್ಲಿ ಬಹುತೇಕರು ರಿಯಾಯಿತಿ ದರದ ವಿದ್ಯಾರ್ಥಿ ಬಸ್‌ ಪಾಸ್‌ ಪಡೆದುಕೊಂಡಿದ್ದಾರೆ.

ಜೂನ್‌ ಮೊದಲ ವಾರದಿಂದ ಶಾಲೆಗಳು ನಿಯಮಿತವಾಗಿ ಶುರುವಾಗಿದ್ದರಿಂದ ವಿದ್ಯಾರ್ಥಿಗಳು ಶಾಲೆಗೆ ಹೋಗಿ ಬರುವುದು ಮಾಡುತ್ತಿದ್ದಾರೆ. ಆದರೆ ಬಸ್‌ ಪಾಸ್‌ ಅವಧಿ ಮುಗಿದಿದೆ ಎಂದು ಭಾವಿಸಿ ಇವರು ನಿತ್ಯವೂ ನಿರ್ವಾಹಕನಿಗೆ ಹಣ ಕೊಟ್ಟು ಹೋಗಿ ಬರುವಂತಾಗಿತ್ತು. ಬಸ್‌ ಪಾಸ್‌ ಅವಧಿ ಮುಕ್ತಾಯವಾಗಿದೆ ಎಂದು ತಿಳಿದು ಮಾದಿನಾಳ ಗ್ರಾಮ ಪ್ರಾಥಮಿಕ ಮತ್ತು ಪ್ರೌಢಶಾಲೆ ಮುಖ್ಯಾಧ್ಯಾಪಕರು ಪಾಲಕರೊಂದಿಗೆ ಮುದ್ದೇಬಿಹಾಳ ಬಸ್‌ ಘಟಕದಲ್ಲಿರುವ ಘಟಕ ವ್ಯವಸ್ಥಾಪಕರ ಕಚೇರಿಗೆ ಗುರುವಾರ ಆಗಮಿಸಿ ಪಾಸ್‌ ನವೀಕರಿಸುವಂತೆ ಕೇಳಿಕೊಂಡಿದ್ದರು.

ಸರ್ಕಾರ ವಿದ್ಯಾರ್ಥಿ ರಿಯಾಯಿತಿ ಬಸ್‌ ಪಾಸ್‌ ಅವಧಿಯನ್ನು ಜೂ. 30ರವರೆಗೂ ವಿಸ್ತರಿಸಿದೆ. ಅಲ್ಲಿವರೆಗೂ ಬಸ್‌ ಪಾಸ್‌ ನವೀಕರಿಸಿಕೊಳ್ಳಲು, ಹೊಸ ಪಾಸ್‌ ಮಾಡಿಸಿಕೊಳ್ಳಲು ಕಾಲಾವಕಾಶ ಇದೆ. ಮುಖ್ಯಾಧ್ಯಾಪಕರೇ ಆಸಕ್ತಿ ವಹಿಸಿ ತಮ್ಮ ಶಾಲೆಯಲ್ಲಿ ಕಲಿಯುವ ಬೇರೆ ಊರಿನ ವಿದ್ಯಾರ್ಥಿಗಳ ಒಟ್ಟಾರೆ ಮಾಹಿತಿಯನ್ನು ಕ್ರೋಢೀಕರಿಸಿ ಘಟಕಕ್ಕೆ ತಂದು ಬಸ್‌ ಪಾಸ್‌ ಮಾಡಿಸಿಕೊಂಡು ಸಹಕರಿಸುವಂತೆ ಕೋರಿದ್ದರು. ಇದರಿಂದ ವಿದ್ಯಾರ್ಥಿಗಳು, ಅವರ ಪಾಲಕರು ಘಟಕಕ್ಕೆ ಬಂದು ಪಾಸ್‌ಗೆ ಸರದಿಯಲ್ಲಿ ನಿಲ್ಲುವುದು ತಪ್ಪಿದಂತಾಗುತ್ತದೆ ಎಂದು ಅವರು ಈ ಸಲಹೆ ನೀಡಿದ್ದರು.

ಪಾಸ್‌ ಅವಧಿ ವಿಸ್ತರಿಸಲಾಗಿದೆ ಎನ್ನುವುದನ್ನು ಅರಿತ ಪಾಲಕರು ಮರಳಿ ಊರಿಗೆ ಹೋದ ಮೇಲೆ ತಮ್ಮ ಮಕ್ಕಳು ನಿತ್ಯವೂ ಬಸ್‌ ದರಕ್ಕೆಂದು 20 ರೂ. ಪಡೆದುಕೊಳ್ಳುತ್ತಿರುವ ಬಗ್ಗೆ ವಿಚಾರಿಸಿದ್ದಾರೆ. ಬೆಳಗ್ಗೆ ಬರುವ ಬಸ್‌ ನಿರ್ವಾಹಕ ಹಣ ಪಡೆದು ಟಿಕೆಟ್‌ ಕೊಡುತ್ತಾರೆ. ಆದರೆ ಸಂಜೆ ಬರುವ ನಿರ್ವಾಹಕ ಮಾತ್ರ ಪೂರ್ತಿ ದರದ ಹಣ ಪಡೆದುಕೊಂಡರೂ ಟಿಕೆಟ್‌ ಕೊಡುವುದಿಲ್ಲ. ಕೆಲವರಿಂದ 5 ರೂ. ಪಡೆದುಕೊಳ್ಳುತ್ತಾನೆ ಎಂದು ತಿಳಿಸಿದರು. ಇದನ್ನರಿತ ಪಾಲಕರು ಚಿರ್ಚನಕಲ್‌ನಲ್ಲಿ ವಿದ್ಯಾರ್ಥಿಗಳನ್ನಿಳಿಸಿ ಕಂದಗನೂರಿಗೆ ಹೋಗಿದ್ದ ಬಸ್‌ ಚಿರ್ಚನಕಲ್‌ ಮಾರ್ಗವಾಗಿ ಮುದ್ದೇಬಿಹಾಳಕ್ಕೆ ಹೋಗುವಾಗ ತಡೆದರು. ಪಾಲಕರು ತಮ್ಮ ಮಕ್ಕಳ ಸಮೇತ ನಿರ್ವಾಹಕನನ್ನು ತರಾಟೆಗೆ ತೆಗೆದುಕೊಂಡರು.

Advertisement

ಈ ವೇಳೆ ಪಾಲಕರು ಮತ್ತು ನಿರ್ವಾಹಕರ ನಡುವೆ ವಾಗ್ವಾದ ನಡೆಯಿತು. ಒಂದಿಬ್ಬರು ಪಾಲಕರು ಮಕ್ಕಳನ್ನು ಕರೆದು ನಿರ್ವಾಹಕ ಎಷ್ಟು ಹಣ ಪಡೆದುಕೊಂಡಿದ್ದಾನೆ. ಇದೇ ನಿರ್ವಾಹಕನೋ ಅಥವಾ ಬೇರೆ ನಿರ್ವಾಹಕನೋ ಎಂದು ಪ್ರಶ್ನಿಸಿದಾಗ ಅವರು 10 ರೂ. ಕೊಟ್ಟಿದ್ದಾಗಿ ಮತ್ತು ಇದೇ ನಿರ್ವಾಹಕ ಹಣ ಪಡೆದುಕೊಂಡಿದ್ದಾಗಿ ತಿಳಿಸಿದರು. ಇದರಿಂದ ಬೆಪ್ಪಾದ ನಿರ್ವಾಹಕ ಬಸ್‌ಗೆ ರೈಟ್‌ ಹೇಳಲು ಮುಂದಾದಾಗ ತಡೆದ ಪಾಲಕರು ಮತ್ತೇ ನಿರ್ವಾಹಕನ ತರಾಟೆಗೆ ತೆಗೆದುಕೊಂಡರು. ಈ ವೇಳೆ ನಿರ್ವಾಹಕನ ನೆರವಿಗೆ ಬಂದ ಚಾಲಕನಿಗೂ ತರಾಟೆಗೆ ತೆಗೆದುಕೊಂಡು ಘಟಕ ವ್ಯವಸ್ಥಾಪಕರು ಇಲ್ಲಿಗೆ ಬಂದು ಸಮಸ್ಯೆ ಆಲಿಸಿ ಬಗೆಹರಿಸುವವರೆಗೂ ಬಸ್‌ ಮುಂದೆ ಹೋಗಲು ಬಿಡೋದಿಲ್ಲ ಎಂದು ಪಟ್ಟು ಹಿಡಿದರು. ಈ ವೇಳೆ ಬಹು ಹೊತ್ತಿನವರೆಗೂ ವಾದ, ವಿವಾದ, ವಾಗ್ವಾದ ನಡೆದು ಇನ್ನು ಮುಂದೆ ಹೀಗೆ ಮಾಡದಂತೆ ನಿರ್ವಾಹಕನಿಗೆ ಎಚ್ಚರಿಕೆ ನೀಡಿ ಪಾಲಕರು ಬಸ್‌ ಮುಂದೆ ಹೋಗಲು ಅವಕಾಶ ಮಾಡಿಕೊಟ್ಟರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕೆಲ ಪಾಲಕರು, 10-15 ದಿನಗಳ ಹಿಂದೆ ಶಾಲೆ ಶುರುವಾಗಿದೆ. ನಮ್ಮ ಮಕ್ಕಳು ಮುದ್ದೇಬಿಹಾಳ- ಬಿದರಕುಂದಿ-ಗೋನಾಳ-ಮಾದಿನಾಳ-ಚಿರ್ಚನ ‌ಕ್‌-ಕಂದಗನೂರ ಬಸ್‌ಗೆ ನಿತ್ಯವೂ ಮಾದಿನಾಳಕ್ಕೆ ಶಾಲೆ ಕಲಿಯಲು ಹೋಗಿ ಬರುತ್ತಾರೆ. ಬೆಳಗ್ಗೆ 8ಕ್ಕೆ ಬರುವ ಬಸ್‌ನವರು ಪಾಸ್‌ ನಡೆಯುವುದಿಲ್ಲ. ಅವಧಿ ಮುಗಿದಿದೆ ಎಂದು ಹೇಳಿ ವಿದ್ಯಾರ್ಥಿಗಳಿಂದ ಬಸ್‌ ಚಾರ್ಜ್‌ ಪಡೆದುಕೊಂಡು ಟಿಕೆಟ್‌ ಕೊಟ್ಟಿದ್ದಾರೆ. ಆದರೆ ಸಂಜೆ ಮಾದಿನಾಳದಿಂದ ಚಿರ್ಚನಕಲ್‌ ಗೆ ಬರುವ ವಿದ್ಯಾರ್ಥಿಗಳಿಂದ ನಿರ್ವಾಹಕ ಬಸ್‌ ಚಾರ್ಜ್‌ ಪಡೆದುಕೊಂಡರು ಟಿಕೆಟ್‌ ಕೊಟ್ಟಿಲ್ಲ. ಕೆಲವರಿಂದ ಪೂರ್ಣ ದರ 10 ರೂ, ಇನ್ನೂ ಕೆಲವರಿಂದ ಅರ್ಧ ದರ 5 ರೂ. ಪಡೆದುಕೊಂಡಿದ್ದಾನೆ. ಈ ರೀತಿ ಮಾಡಿದರೆ ಸಂಸ್ಥೆಗೆ ನಷ್ಟವಾದಂತಲ್ಲವೆ? ಮೇಲಾಗಿ ಪಾಸ್‌ ಅವಧಿ ಮುಂದುವರಿಸಿದ್ದರೂ ಅದನ್ನು ಮುಚ್ಚಿಟ್ಟು ಮಕ್ಕಳಿಂದ ಬಸ್‌ ಚಾರ್ಜ್‌ ಪಡೆದುಕೊಂಡಿರುವುದು ಅನ್ಯಾಯವಲ್ಲವೇ? ಈ ಬಗ್ಗೆ ಕೇಳಿದರೆ ಬಸ್‌ ಲಾಭದಲ್ಲಿ ಓಡುತ್ತಿಲ್ಲ, ಲಾಸ್‌ ಆಗುತ್ತಿದೆ ಎಂದು ಬಂದ್‌ ಮಾಡುತ್ತಾರೆ. ನಮ್ಮ ಸಮಸ್ಯೆ ಯಾರಿಗೆ ಹೇಳಿಕೊಳ್ಳಬೇಕು ಎಂದು ಅಸಹಾಯಕತೆ ತೋಡಿಕೊಂಡರು.

ಮಾದಿನಾಳ ಶಾಲೆ ಶಿಕ್ಷಕರು ನನ್ನ ಬಳಿ ಬಂದಾಗ ಅವರಿಗೆ ಬಸ್‌ ಅವಧಿ ವಿಸ್ತರಣೆ ಕುರಿತು ತಿಳಿಸಿ ಸಹಕರಿಸುವಂತೆ ಕೋರಿ ಕಳುಹಿಸಿದ್ದೆ. ಇವತ್ತು ಸಂಜೆ ನಡೆದ ಘಟನೆ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ವಿಚಾರಿಸಿ ನಿರ್ವಾಹಕ ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳುತ್ತೇನೆ. -ಚಿತ್ತವಾಡಗಿ,ಬಸ್‌ ಘಟಕ ವ್ಯವಸ್ಥಾಪಕ

Advertisement

Udayavani is now on Telegram. Click here to join our channel and stay updated with the latest news.

Next