Advertisement

ತಡೆಗೋಡೆ ಹೆಸರಲ್ಲಿ ಹಣ ದುರ್ಬಳಕೆ-ಆರೋಪ

10:53 AM Sep 13, 2019 | Team Udayavani |

ಬೀಳಗಿ: ತಾಲೂಕು ಪಂಚಾಯತ ಅನಿರ್ಬಂದಿತ ಅನುದಾನದಡಿಯಲ್ಲಿ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ತಡೆಗೋಡೆ ನಿರ್ಮಿಸದೆ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಸಂಬಂಧಿಸಿದ ಮೇಲಧಿಕಾರಿಗಳು ತನಿಖೆ ಕೈಗೊಳ್ಳುವ ಮೂಲಕ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಸೊನ್ನ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

ಸೊನ್ನ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನ ಸೇವಾ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಮಾತನಾಡಿ, 2017-18ನೇ ಸಾಲಿನ ತಾಪಂ ಅನಿರ್ಬಂದಿತ ಎರಡು ಲಕ್ಷ ಅನುದಾನದಲ್ಲಿ ಮಲ್ಲಿಕಾರ್ಜುನ ದೇವಸ್ಥಾನದ ಹತ್ತಿರ ತಡೆಗೋಡೆ ನಿರ್ಮಾಣ ಮಾಡಲಾಗಿದೆ ಎನ್ನುವ ಕುರಿತು ಇಲಾಖೆ ದಾಖಲಾತಿಗಳು ಹೇಳುತ್ತವೆ. ಆದರೆ, ಸದರಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಯಾವುದೇ ತಡೆಗೋಡೆ ನಿರ್ಮಿಸಿಲ್ಲ. ಹಾಗಾದರೆ 2 ಲಕ್ಷ ಅನುದಾನ ಯಾರಿಗೆ ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಬಂಧಿಸಿದವರನ್ನು ಕೇಳಿದರೆ, ಈ ಅನುದಾನವನ್ನು ದೇವಸ್ಥಾನದ ಹತ್ತಿರದ ಪಿಕೆಪಿಎಸ್‌ ತಡೆಗೋಡೆ ನಿರ್ಮಾಣಕ್ಕೆ ಬಳಕೆ ಮಾಡಲಾಗಿದೆ ಎಂದು ಹೇಳುವ ಮೂಲಕ ಜಾರಿಕೊಳ್ಳಲು ಯತ್ನಿಸುತ್ತಿದ್ದಾರೆ. ಪಿಕೆಪಿಎಸ್‌ಗೆ ಅನುದಾನ ಹೇಗೆ ಬಳಕೆ ಮಾಡಲು ಸಾಧ್ಯ. ಒಂದು ವರ್ಷದ ಹಿಂದೆ ಪಿಕೆಪಿಎಸ್‌ ನೂತನ ಕಟ್ಟಡ ನಿರ್ಮಾಣದ ವೇಳೆ ಅದರ ಕಾಪೌಂಡ್‌ ಕೂಡ ನಿರ್ಮಿಸಲಾಗಿದೆ. ಸಂಬಂಧಿಸಿದ ಅಕಾರಿಗಳು, ಗುತ್ತಿಗೆದಾರರು ಶಾಮೀಲಾಗಿ ಪಿಕೆಪಿಎಸ್‌ಗೆ ನಿರ್ಮಿಸಿದ ತಡೆಗೋಡೆ ಪೋಟೋಗಳನ್ನೇ ಬಳಸಿಕೊಂಡು ಬಿಲ್ ತೆಗೆಯಲಾಗಿದೆ ಎಂದು ಆರೋಪಿಸಿದರು.

ದೇವಸ್ಥಾನದ ಕಮೀಟಿಯವರಿಗೆ ದೇವಸ್ಥಾನದ ತಡೆಗೋಡೆ ನಿರ್ಮಿಸುವ ಕುರಿತು ಯಾವುದೇ ಮಾಹಿತಿಯಿಲ್ಲ. ಹಾಗಿದ್ದಲ್ಲಿ ದೇವಸ್ಥಾನದ ಹೆಸರಲ್ಲಿ ಅನುದಾನ ಹೇಗೆ ಬಳಕೆ ಮಾಡಲಾಯಿತು ಎಂದು ಪ್ರಶ್ನಿಸಿದ ಗ್ರಾಮಸ್ಥರು, ಹಿರಿಯ ಅಧಿಕಾರಿಗಳು ತನಿಖೆ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ತಾಪಂ ಇಒ ಅವರನ್ನು ಪ್ರಶ್ನಿಸಿದರೆ ಸ್ಪಷ್ಟ ಮಾಹಿತಿ ನೀಡದೆ ನುಣುಚಿಕೊಂಡರು. ಗ್ರಾಮದ ಎಸ್‌.ಎಸ್‌.ಸಾರವಾಡ, ಮಳಿಯಪ್ಪ ಬಳೂಲದ, ಎಸ್‌.ಸಿ.ಮಲಕಗೊಂಡ, ಆರ್‌.ಎಸ್‌.ಸಾರವಾಡ, ಪರಪ್ಪ ಚಿಮ್ಮಡದ, ರಾಮಪ್ಪ ಸಾರವಾಡ, ಬಾಬು ಚಿಮ್ಮಡ, ಬಿ.ಸಿ.ಚಿಗರನ್ನವರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next