ಕನಕಪುರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ವ ಕ್ಷೇತ್ರದಲ್ಲಿ ಒಂದರ ಮೇಲೊಂದು ಲಂಚಾವತಾರದ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇತ್ತೀಚಿಗಷ್ಟೇ ನಗರಸಭೆಯಲ್ಲಿ ಇ-ಖಾತೆಗಾಗಿ ಲಂಚ ಪಡೆದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು ಈಗ ಅಂತಹುದೇ ಮತ್ತೂಂದು ಲಂಚ ಪ್ರಕರಣ ಬೆಳಕಿಗೆ ಬಂದಿದೆ.
ತಾಲೂಕಿನ ಕಸಬಾ ಹೋಬಳಿಯ ಕುರಿಗೌಡನದೊಡ್ಡಿ ಗ್ರಾಮದ ನವೀನ್ ಎಂಬಾತನಿಂದ ಪೌತಿ ಖಾತೆಗಾಗಿ ಗ್ರಾಮಲೆಕ್ಕಾಧಿಕಾರಿಯೊಬ್ಬರು ಲಂಚ ಪಡೆದು ಕೆಲಸವನ್ನು ಮಾಡಿಕೊಡದೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂದು ಗ್ರೇಡ್-2 ತಹಶೀಲ್ದಾರ್ ಅವರಿಗೆ ದೂರು ನೀಡಿದ್ದಾರೆ.
ಕುರಿಗೌನಡ ದೊಡ್ಡಿ ಗ್ರಾಮದ ನವೀನ್ ತಮ್ಮ ಪೂರ್ವಿಕರಿಂದ ಬಂದ ಆಸ್ತಿಯನ್ನು ತಮ್ಮ ತಂದೆ ಹೆಸರಿಗೆ ಪೌತಿ ಖಾತೆ ಮಾಡಿಕೊಡಲು ಅರ್ಜಿ ಹಾಕಿದ್ದು ಕಸಬಾ ಹೋಬಳಿಯ ಗ್ರಾಮ ಲೆಕ್ಕಾಧಿಕಾರಿ ಚಂದ್ರೇಗೌಡ ಪೌತಿ ಖಾತೆ ಮಾಡಿಕೊಡಲು 50 ಸಾವಿರ ರೂ.ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ 15 ಸಾವಿರ ರೂ. ಹಣ ಪಡೆದು ಪೌತಿ ಖಾತೆಯನ್ನು ಮಾಡಿಕೊಡದೆ ಹಣವನ್ನು ಹಿಂದಿರುಗಿಸದೆ ದೂರವಾಣಿ ಕರೆಯನ್ನು ಬ್ಲಾಕ್ ಲಿಸ್ಟ್‌ನಲ್ಲಿಟ್ಟಿದ್ದಾರೆ ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ.
ಕಳೆದ 9ವರ್ಷಗಳಿಂದ ಪೌತಿ ಖಾತೆ ಮಾಡಿ ಕೊಡದೆ ಅಲೆದಾಡಿಸುತ್ತಿದ್ದಾರೆ ಹಣ ಪಡೆದು ಕೆಲಸವನ್ನು ಮಾಡಿಕೊಡದಿರುವ ಬಗ್ಗೆ ಪ್ರಶ್ನೆ ಮಾಡಿದರೆ ನಮಗೆ ಧಮ್ಕಿ ಹಾಕುತ್ತಾರೆ ಎಂದು ಗ್ರೇಡ್-2 ತಹಶೀಲ್ದಾರ್ ಶಿವಕುಮಾರ್ ಅವರಿಗೆ ದೂರು ನೀಡಿದ್ದಾರೆ. ಚಂದ್ರೇಗೌಡ ಮಾತನಾಡಿರುವ ದೂರವಾಣಿ ಆಡಿಯೋ ಸಂಭಾಷಣೆ ಸಾಕ್ಯಧಾರಗಳೊಂದಿಗೆ ರಾಷ್ಟ್ರ ಸಮಿತಿ ಪಕ್ಷದ ತಾಲೂಕು ಅಧ್ಯಕ್ಷ ಪ್ರಶಾಂತ್ ಅವರ ಸಹಾಯ ದೂರು ನೀಡಿದ್ದು, ಈ ಪ್ರಕರಣದ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕನಕಪುರ ತಾಲೂಕಿನಲ್ಲಿ ಲಂಚ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸಬೇಕಾದ ಅಧಿಕಾರಿಗಳು ವಿನಾಕಾರಣ ಕೆಲಸಕಾರ್ಯಗಳನ್ನು ಮಾಡಿಕೊಡದೆ ವಿಳಂಬ ಮಾಡಿ ಅಲೆದಾಡಿಸಿ ಲಂಚಕ್ಕೆ ಬೇಡಿಕೆ ಇಟ್ಟು ರೈತರು ಮತ್ತು ಸಾರ್ವಜನಿಕರನ್ನು ಸುಲಿಗೆ ಮಾಡುವ ಆರೋಪಗಳು ಇತ್ತೀಚೆಗೆ ವ್ಯಾಪಕವಾಗಿ ಕೇಳಿ ಬರುತ್ತಿದೆ ಇದಕ್ಕೆ ನಿದರ್ಶನವೆಂಬಂತೆ ಇತ್ತೀಚಿಗೆ ಕಳೆದ ಒಂದು ತಿಂಗಳ ಹಿಂದೆ ನಗರಸಭೆಯ ಲಂಚದ ಪ್ರಕರಣ ಬೆಳಕಿಗೆ ಬಂದಿತ್ತು. ಆದರೆ ಈ ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ಅಷ್ಟರಲ್ಲಾಗಲೇ ಮತ್ತೂಂದು ಲಂಚ ಪಡೆದ ಪ್ರಕರಣ ಬೆಳಕಿಗೆ ಬಂದಿರುವುದು ತಾಲೂಕು ಆಡಳಿತ ಮತ್ತು ನಗರಸಭೆಯಲ್ಲಿ ಲಂಚಾವತಾರ ತಾಂಡವವಾಡುತ್ತಿರುವುದಕ್ಕೆ ಸಾಕ್ಷಿ ಹೇಳುತ್ತಿವೆ.