ಕೋಲಾರ: ಸಮವಸ್ತ್ರ ಧರಿಸಿ ದರೋಡೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಕೋಲಾರದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಇಬ್ಬರು ಪೊಲೀಸರು ಬಂಧನಕ್ಕೆ ಒಳಗಾಗಿದ್ದಾರೆ.
ಕಳೆದ 27ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕಟ್ಟಿಗೇನಹಳ್ಳಿ ಟ್ರಕ್ ಚಾಲಕ ಶಬ್ಬೀರ್ ಬೇಗ್ ಬಂಗಾರಪೇಟೆಯಲ್ಲಿ ಸಂಬಂಧಿಕರ ಮನೆಗೆ ಹೋಗಿ ಸ್ಕಾರ್ಪಿಯೋ ಕಾರ್‌ನಲ್ಲಿ ಹಿಂತಿರುಗುತ್ತಿದ್ದಾಗ ಮಾಲೂರು ತಾಲೂಕಿನ ಟೇಕಲ್ ಕ್ರಾಸ್ ಹತ್ತಿರ ಚಿಕ್ಕಕುಂತೂರು ಗೇಟ್ ಬಳಿ 7 ಗಂಟೆಯಲ್ಲಿ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ.
ಎರಡು ಇನ್ನೋವ ಕಾರಿನಲ್ಲಿ ಬಂದ ಐದಾರು ಮಂದಿ ಅಪರಿಚಿತರು ಕಾರನ್ನು ಅಡ್ಡಗಟ್ಟಿ ಆತನ ಬಳಿಯಿದ್ದ ಹಣ, ಫೋನ್ ಕಸಿದುಕೊಂಡು ಪಿಸ್ತೂಲು ತೋರಿಸಿ ನಾವು ಆಂಧ್ರ ಪ್ರದೇಶದ ಪೊಲೀಸರು, ಎಲ್ಲೆಲ್ಲಿ ದರೋಡೆ ಮಾಡಿದ್ದೀಯ ಹೇಳು ಎಂದು ಹಲ್ಲೆ ನಡೆಸಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಆತನ ತಮ್ಮನಿಗೆ ಮೊಬೈಲ್ ಕರೆ ಮಾಡಿ ನಿನ್ನ ಅಣ್ಣನ್ನು ಲಾಕ್ ಮಾಡಿದ್ದೇವೆ. ಬಂದು ಮಾತನಾಡು ಎಂದು ತೆಲುಗು, ಉರ್ದು ಭಾಷೆಯಲ್ಲಿ ಬೆದರಿಕೆ ಹಾಕಿದರಂತೆ. ರಾತ್ರಿ 11 ಗಂಟೆಯಲ್ಲಿ ಟಮಕ ಬಳಿ ಬಿಟ್ಟು ಪರಾರಿಯಾದರಂತೆ.
ತಪ್ಪು ದೂರು ನೀಡಿರುವ ಆರೋಪ: ಪೊಲೀಸರ ಸಮವಸ್ತ್ರದಲ್ಲಿದ್ದ ಡಕಾಯಿತ ರಿಂದ ಗೂಸ ತಿಂದ ಶಬ್ಬೀರ್ ಬೇಗ್ ಕೋಲಾರ ಗಲ್‌ಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಡಿಎಆರ್ ಪೇದೆಗಳಾದ ವೇಣು ಮತ್ತು ಮತ್ತೂಬ್ಬನ್ನು ಬಂಧಿಸಿದ್ದಾರೆ. ಆದರೆ, ದೂರು ನೀಡಿದ ಶಬ್ಬಿರ್ ಕಾರಿನಲ್ಲಿ ರಕ್ತಚಂದನ ತುಂಡುಗಳನ್ನು ಸಾಗಿಸುತ್ತಿದ್ದ. ಡಿಎಆರ್ ಪೇದೆ ವೇಣು ಹಾಗೂ ಇತರರು ದಾಳಿ ನಡೆಸಿದರು.
ಪ್ರಕರಣವನ್ನು ತಿರುಚಲು ಪೊಲೀಸರಿಗೆ ತಪ್ಪು ದೂರು ನೀಡಲಾಗಿದೆ ಎಂದು ಪೊಲೀಸ್ ವಲಯಗಳಲ್ಲಿ ಚರ್ಚೆಯಾಗುತ್ತಿದೆ. ಅದು ನಿಜವೇ ಆದಲ್ಲಿ, ಪೊಲೀಸರು ಪ್ರಾಮಾಣಿಕವಾಗಿ ತನಿಖೆ ನಡೆಸಬೇಕು. ಆಗ ಮಾತ್ರ ನಿಜಾಂಶ ಹೊರ ಬರುತ್ತದೆ. ಕೋಲಾರ ಗಲ್‌ಪೇಟೆ ಪೊಲೀಸರು ಶಸ್ತ್ರಸ್ತ್ರ ಕಾಯ್ದೆ ಮೇರೆಗೆ ಪ್ರಕರಣ ದಾಖಲಿಸಿದ್ದಾರೆ.