Advertisement

ರಮೇಶ್‌ಕುಮಾರ್‌ ಮೇಲೆ ಅವ್ಯವಹಾರ ಆರೋಪ

02:23 PM Dec 07, 2021 | Team Udayavani |

ಕೋಲಾರ: ರಮೇಶ್‌ಕುಮಾರ್‌ ಆರೋಗ್ಯ ಸಚಿವರಾಗಿದ್ದಾಗ 500 ಕೋಟಿ ರೂ. ಅವ್ಯವಹಾರ ನಡೆದಿರುವ ಕುರಿತು ಸಿಎಜಿ ವರದಿಯಲ್ಲಿ ಉಲ್ಲೇಖವಾಗಿದ್ದು, ದಾಖಲೆ ಸಮೇತ ಬಿಡುಗಡೆ ಮಾಡುವೆ, ದಿನಕ್ಕೊಂದು ಬಣ್ಣ ಬದಲಿಸುವ ಇಂತಹವರಿಂದ ನಾನು ನೀತಿಪಾಠ ಕಲಿಯುವ ಅಗತ್ಯವಿಲ್ಲ ಎಂದು ರಾಜ್ಯ ಆರೋಗ್ಯ ಸಚಿವ ಡಾ. ಸುಧಾಕರ್‌ ವಾಗ್ಧಾಳಿ ನಡೆಸಿದರು.

Advertisement

ವಿಧಾನ ಪರಿಷತ್‌ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಅಭ್ಯರ್ಥಿ ಡಾ.ವೇಣುಗೋಪಾಲ್‌ ಪರ ಸೋಮವಾರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ದುರುದ್ದೇಶದಿಂದ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ, ಇವರ ಅವ್ಯವಹಾರದ ಕುರಿತು ದಾಖಲೆ ಸಮೇತ ಬಿಡುಗಡೆ ಮಾಡುವುದಾಗಿ ತಿಳಿಸಿದರು.

ನೀತಿ ಪಾಠದ ಅಗತ್ಯವಿಲ್ಲ: ಕಳೆದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಜೆಡಿಎಸ್‌ ಪರ ಪ್ರಚಾರ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ, ಈಗ ಕಾಂಗ್ರೆಸ್‌ ಪರ ಚುನಾವಣಾ ಪ್ರಚಾರ ನಡೆಸುತ್ತಿರುವ ಇಂತಹವರಿಂದ ನನಗೆ ನೀತಿ ಪಾಠ ಅಗತ್ಯವಿಲ್ಲ. ಕಾವಿ ಹಾಕಿದ್ದರೆ ಸ್ವಾಮಿ ಎನ್ನಬಹುದು, ಕಾಂಗ್ರೆಸ್‌ನಲ್ಲಿ ಕಾವಿ ಹಾಕದೆಯೇ ಇರುವ ಸ್ವಾಮಿ ಬುದ್ಧಿವಾದ ಹೇಳುತ್ತಿದ್ದಾರೆ ಎಂದು ರಮೇಶ್‌ಕುಮಾರ್‌ ವಿರುದ್ಧ ಪರೋಕ್ಷ ವಾಗ್ಧಾಳಿ ನಡೆಸಿದರು.

ಅಭಿವೃದ್ಧಿಗೆ ಬೆಂಬಲ ನೀಡಿ: ಕ್ಷೇತ್ರದಲ್ಲಿ ನಮಗೆ ಅವಕಾಶ ಹೆಚ್ಚಿದೆ, ಒಳ್ಳೆ ರೀತಿಯಲ್ಲಿ ಚುನಾವಣೆ ನಡೆಸುತ್ತಿದ್ದೇವೆ. ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವಂತೆ ಹೈಕಮಾಂಡ್‌ ಫರ್ಮಾನು ನೀಡಿದೆ. ನಿನ್ನೆ ಒಂದು ಇವತ್ತು ಒಂದು ಹೇಳುವ ಹೈಕಮಾಂಡ್‌ ನಮ್ಮದಲ್ಲ. ಕಣದಲ್ಲಿ ಪ್ರಬಲ ಸ್ಪರ್ಧೆಯ ಜತೆಗೆ ಮುಂಚೂಣಿಯಲ್ಲಿದ್ದೇವೆ.

ಪ್ರತಿ ಸದಸ್ಯನನ್ನು ಭೇಟಿ ಮಾಡಿ ದೇಶದಲ್ಲಿ ಪ್ರಧಾನಿ ಮೋದಿ ಆಡಳಿತ, ರಾಜ್ಯದಲ್ಲಿ ಬಿ.ಎಸ್‌.ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ನಾಯಕತ್ವದಲ್ಲಿ ಅಭಿವೃದ್ಧಿಗೆ ಬೆಂಬಲ ನೀಡುವಂತೆ ಕೋರುತ್ತಿರುವುದಾಗಿ ನುಡಿದರು. ಮಾರಣಾಂತಿಕ ರೋಗ ಕೊರೊನಾವನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ.

Advertisement

ಇದನ್ನೂ ಓದಿ:- “ಒಂದಾನೊಂದು ಕಾಲದಲ್ಲಿ” ಹೊಸಬರು…

ಭೀಕರ ಆರ್ಥಿಕ ದುಸ್ಥಿತಿಯ ಸಂದರ್ಭದಲ್ಲೂ ಲಕ್ಷಾಂತರ ಸರಕಾರಿ ನೌಕರರಿಗೆ ನಯಾ ಪೈಸೆ ಖೋತಾ ಇಲ್ಲದೆ ವೇತನವನ್ನು ಪಾವತಿ ಮಾಡಲಾಗಿದೆ ಎಂದು ತಿಳಿಸಿದರು. ಚಿಂತಾಮಣಿ, ಬಾಗೇಪಲ್ಲಿ, ಗೌರಿಬಿದನೂರು, ಕೆಜಿಎಫ್‌, ಮುಳಬಾಗಿಲು, ಮಾಲೂರು ಹಾಗೂ ಕೋಲಾರದಲ್ಲೂ ಕೈಗಾರಿಕೆ ಅಭಿವೃದ್ಧಿಗೆ ಭೂ ಸ್ವಾಧೀನ ಪ್ರಕ್ರಿಯೆ ವಿವಿಧ ಹಂತದಲ್ಲಿದೆ. ಉದ್ಯೋಗಾವಕಾಶ ಕಲ್ಪಿಸುವ ಮೂಲಕ ಯುವಕರ ಕೈಬಲಪಡಿಸಲು ಸರ್ಕಾರ ದೃಢ ಸಂಕಲ್ಪ ಮಾಡಿದೆ ಎಂದು ಹೇಳಿದರು.

ನೀರು ಹಂಚಿಕೆ ಕುರಿತು ಚರ್ಚೆ: ಇತ್ತೀಚೆಗೆ ತಿರುಪತಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಆಂಧ್ರದ ಸಿಎಂ ಜಗನ್‌ಮೋಹನ್‌ರೆಡ್ಡಿ ಜತೆ ಚರ್ಚಿಸಿದ್ದಾರೆ. ಗಡಿಭಾಗಕ್ಕೆ ಬಂದಿರುವ ಗೋದಾವರಿ, ಕೃಷ್ಣಾ ನದಿ ನೀರಲ್ಲಿ 5 ಟಿಎಂಸಿ ಪೈಪ್‌ಲೈನ್‌ ಮೂಲಕ ಕೋಲಾರ, ಚಿಕ್ಕಬಳ್ಳಾಪುರಕ್ಕೆ ಹರಿಸುವ ಬಗ್ಗೆ ಚರ್ಚಿಸಲಾಗಿದೆ. ಒಂದು ತಿಂಗಳೊಳಗೆ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಅ ಧಿಕೃತ ಸಭೆ ನಡೆಯಲಿದೆ ಎಂದು ಹೇಳಿದರು.

ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಹೊಸ ಯೋಜನೆ ಘೋಷಣೆ ಮಾಡಲು ಸಾಧ್ಯವಿಲ್ಲ, ಒಟ್ಟಾರೆ ಎರಡೂ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಕಾರ್ಯಯೋಜನೆ ಹಾಕಿಕೊಡಿದೆ. ಮತದಾರರು ಬಿಜೆಪಿ ಬೆಂಬಲಿಸಬೇಕು, ದೇಶದಲ್ಲಿ ಕಾಂಗ್ರೆಸ್‌ ಮುಂದಿನ ದಿನಗಳಲ್ಲಿ ಭೂತ ಕನ್ನಡಿಯಿಂದ ನೋಡಿದರೂ ಕಾಣುವುದಿಲ್ಲ ಎಂದು ವ್ಯಂಗ್ಯವಾಡಿದರು.

ಸುದ್ದಿಗೋಷ್ಠಿಯಲ್ಲಿ ಸಂಸದ ಎಸ್‌.ಮುನಿಸ್ವಾಮಿ, ವಿಧಾನ ಪರಿಷತ್‌ ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ, ಶಾಸಕ ಎಚ್‌.ನಾಗೇಶ್‌, ಮಾಜಿ ಶಾಸಕರಾದ ಕೆ.ಎಸ್‌. ಮಂಜುನಾಥ್‌, ವರ್ತೂರು ಪ್ರಕಾಶ್‌, ಸಂಪಂಗಿ, ಬಿ.ಪಿ.ವೆಂಕಟಮುನಿಯಪ್ಪ, ಅಭ್ಯರ್ಥಿ ಡಾ.ವೇಣುಗೋಪಾಲ್‌, ಪಕ್ಷದ ಜಿಲ್ಲಾ ಮಾಧ್ಯಮ ಪ್ರಮುಖ್‌ ಎಸ್‌.ಬಿ.ಮುನಿವೆಂಕಟಪ್ಪ ಮತ್ತಿತರರು ಉಪಸ್ಥಿತರಿದ್ದರು.

ಮರ್ಯಾದೆ ಉಳಿಸಿಕೊಳ್ಳಲು ಹೆಣಗಾಡ್ತಾರೆ

ಬಿಜೆಪಿ ಅಭ್ಯರ್ಥಿ ಗೆಲ್ಲುವ ಹಂತಕ್ಕೆ ಬಂದು ನಿಂತಿದ್ದೇವೆ, ಈ ವೇಳೆ ಜೆಡಿಎಸ್‌ ಜತೆ ಹೊಂದಾಣಿಕೆ ಪ್ರಸ್ತಾಪ ಇಲ್ಲ, ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಇದ್ದು, ಗೆಲುವು ನಮ್ಮದೇ ಎಂದು ರಾಜ್ಯ ತೋಟಗಾರಿಕಾ ಸಚಿವ ಮುನಿರತ್ನ ಸಾರಿದರು. ಪ್ರತಿ ಗ್ರಾಪಂ ಸದಸ್ಯರ ಬೇಡಿಕೆ ಅಭಿವೃದ್ಧಿಯಾಗಿದ್ದು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ.

ಕಳೆದ ಬಾರಿ ಹೊರಗಿನಿಂದ ಬಂದು ಗೆದ್ದು ಹೋದವರು ವಾಪಸ್‌ ಬರಲಿಲ್ಲ, ಬಿಜೆಪಿ ಸ್ಥಳೀಯ ಅಭ್ಯರ್ಥಿಯನ್ನು ಕೊಟ್ಟಿದೆ. ಬೆಂಬಲಕ್ಕೆ ನಿಲ್ಲುವುದಾಗಿ ಭರವಸೆ ನೀಡಿದರು. ವಿಧಾನ ಪರಿಷತ್‌ ಚುನಾವಣೆಯಲ್ಲಿ ಹಣ ಹಂಚಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಚಿವರು, ದುಡ್ಡಿನಿಂದಲೇ ಚುನಾವಣೆ ನಡೆಯುವ ಆರೋಪವನ್ನು ವಿರೋಧ ಪಕ್ಷದವರು ಮಾಡೋದು ಸಹಜ. ಅದಕ್ಕೆಂದೇ ಬೇರೆ ಸಂಸ್ಥೆಗಳು ಇವೆ, ದೂರು ನೀಡಬಹುದು.

ನಮಗೆ ಅಪರೇಷನ್‌ ಕಮಲ ಗೊತ್ತಿಲ್ಲ. ಪಕ್ಷದ ಸಿದ್ಧಾಂತ ಒಪ್ಪಿ ಯಾರೇ ಬಂದರೂ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂದು ನುಡಿದರು. ಕೋಲಾರ ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಾಗುವುದು. ಕಳೆದ ಬಾರಿ ವಿಧಾನ ಪರಿಷತ್‌ನಲ್ಲಿ ಗೆದ್ದವರು ಇತ್ತ ತಿರುಗಿಯೂ ನೋಡಲಿಲ್ಲ, ಅವರನ್ನು ಬೆಂಬಲಿಸಿ ತಮ್ಮದೇ ಅಭ್ಯರ್ಥಿ ಸೋಲಿಸಿದ ಮಹಾನುಭಾವರು ಈಗ ಮರ್ಯಾದೆ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next