Advertisement

ಸೈಂಟ್‌ಮೇರಿ ದ್ವೀಪದಲ್ಲಿ ನೈಟ್‌ಪಾರ್ಟಿ ಆರೋಪ

02:28 AM May 11, 2020 | Sriram |

ಮಲ್ಪೆ: ಲಾಕ್‌ಡೌನ್‌ ಆದೇಶ ಉಲ್ಲಂಘಿಸಿ ಶನಿವಾರ ರಾತ್ರಿ ಮಲ್ಪೆ ಸೈಂಟ್‌ಮೇರಿ ದ್ವೀಪದಲ್ಲಿ ಪಾರ್ಟಿ ನಡೆಸುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಮಲ್ಪೆ ಕಾವಲು ಪೊಲೀಸರು ದಾಳಿ ನಡೆಸಿ ಅಲ್ಲಿದ್ದ 7 ಮಂದಿಯನ್ನು ವಶಕ್ಕೆತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.

Advertisement

ಘಟನೆ ವಿವರ
ಸೈಂಟ್‌ಮೇರಿ ದ್ವೀಪದಲ್ಲಿ ಶನಿವಾರ ರಾತ್ರಿ 11ಗಂಟೆಗೆ ಬೆಳಕು ಕಾಣಿಸುತ್ತಿರುವುದನ್ನು ಗಮನಿಸಿದ ಸ್ಥಳೀಯರು ಕರಾವಳಿ ಕಾವಲು ಪಡೆಗೆ ಮಾಹಿತಿ ನೀಡಿದರು. ತತ್‌ಕ್ಷಣ ಕಾರ್ಯಪ್ರವೃತ್ತರಾದ ಕರಾವಳಿ ಪೊಲೀಸರು ಬೀಚ್‌ ಅಭಿವೃದ್ಧಿ ಸಮಿತಿಯ ನಿರ್ವಾಹಕ ಸುದೇಶ್‌ ಶೆಟ್ಟಿ ಅವರಿಗೆ ಕರೆ ಮಾಡಿ ವಿಚಾರಿಸಿದರು. ಮಳೆಗಾಲ ಆರಂಭವಾಗುವ ಹಿನ್ನೆಲೆ ಯಲ್ಲಿ ಅಲ್ಲಿದ್ದ ಪರಿಕರಗಳನ್ನು ತೆಗೆದುಕೊಂಡು ಹೋಗಲು ಬಂದಿ ದ್ದೇವೆ. ಕಡಲಿನ ಅಲೆಗಳ ಅಬ್ಬರ ಜೋರಾಗಿರುವ ಹಿನ್ನೆಲೆಯಲ್ಲಿ ಇಲ್ಲೇ ಉಳಿದುಕೊಂಡಿದ್ದೇವೆ ಎಂದು ಪ್ರತಿಕ್ರಿಯಿಸಿದರು.

ರಾತ್ರಿ ವೇಳೆ ಅಲ್ಲಿ ಉಳಿಯುವುದಕ್ಕೆ ನಿಷೇಧ ಇರುವುದರಿಂದ ತತ್‌ಕ್ಷಣ ವಾಪಸಾಗುವಂತೆ ಪೊಲೀಸರು ಸೂಚಿಸಿದರು. ಆದರೆ ತಡರಾತ್ರಿಯ ವರೆಗೂ ಅವರು ವಾಪಸಾಗದಿರುವು ದನ್ನು ಕಂಡು ಪೊಲೀಸರು 1 ಗಂಟೆ ವೇಳೆಗೆ ಗಸ್ತು ಬೋಟ್‌ನಲ್ಲಿ ದ್ವೀಪಕ್ಕೆ ತೆರಳಿ ಅಲ್ಲಿ ತಂಗಿದ್ದ ಸುದೇಶ್‌ ಶೆಟ್ಟಿ, ದೇವಾನಂದ, ನಂದಕಿಶೋರ್‌ ಕೆ.ಆರ್‌., ಸಚಿನ್‌ ವೈ ಕುಮಾರ್‌, ಪಾಂಡುರಂಗ ಪಿ. ಕುಂದರ್‌, ಸಚಿನ್‌ ಮತ್ತು ರಾಘವ ಅವರನ್ನು ಪೊಲೀಸ್‌ ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದ್ದಾರೆ.

ಪಾರ್ಟಿ ನಡೆದಿಲ್ಲ
ಸೈಂಟ್‌ಮೇರಿ ದ್ವೀಪದಲ್ಲಿ ಯಾವುದೇ ಪಾರ್ಟಿ ನಡೆದಿಲ್ಲ. ಕೆಲಸದ ನಿಮಿತ್ತ ತೆರಳಿದ್ದೆವು. ಪ್ರತೀ ವರ್ಷ ಮಳೆಗಾಲ ಆರಂಭಕ್ಕೆ ಮುನ್ನ ಅಲ್ಲಿನ ಪರಿಕರ ಗಳನ್ನು ತೆರವುಗೊಳಿಸುವ ಕೆಲಸ ನಡೆಯುತ್ತದೆ. ಆದರಂತೆ ಈ ಸಲವೂ ನಮ್ಮ ಜನರು ಅಲ್ಲಿರುವ ಜನರೇಟರ್‌, ನೀರಿನ ಟ್ಯಾಂಕ್‌, ಪೈಪು, ನೆಟ್‌, ಟೇಬಲ್‌, ಚಯರ್‌, ಪಾತ್ರೆಗಳು ಮೊದಲಾದ ಪರಿಕರಗಳನ್ನು ವಾಪಸ್‌ ತರುವ ಕೆಲಸ ಎರಡು ದಿನಗಳಿಂದ ನಡೆಯುತ್ತಿದೆ. ನಿನ್ನೆ ಅಲ್ಲಿನ ಕೆಲಸವನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಕತ್ತಲಾ ದ್ದರಿಂದ ಉಳಿದುಕೊಳ್ಳುವಂತಾಗಿದೆ ವಿನಾ ಯಾವುದೇ ಪಾರ್ಟಿ ಮಾಡಿಲ್ಲ. ಅಧಿಕಾರಿಗಳು ತನಿಖೆ ನಡೆಸಲಿ, ತಪ್ಪು ಸಾಬೀತಾದರೆ ಕ್ರಮ ಕೈಗೊಳ್ಳಲಿ ಎಂದು ಬೀಚ್‌ ಅಭಿವೃದ್ಧಿ ಸಮಿತಿಯ ನಿರ್ವಾಹಕ ಸುದೇಶ್‌ ಶೆಟ್ಟಿ ತಿಳಿಸಿದ್ದಾರೆ.

ದ್ವೀಪದಲ್ಲಿ ಗುಂಪೊಂದು ಪಾರ್ಟಿ ಮಾಡುತ್ತಿರುವ ಬಗ್ಗೆ ಬಂದ ದೂರಿನಂತೆ ದಾಳಿ ನಡೆಸಿದ್ದೇವೆ. ಅಲ್ಲಿದ್ದ 7 ಮಂದಿಯನ್ನು ತಡರಾತ್ರಿ ಕರೆದುಕೊಂಡು ಬಂದಿದ್ದೇವೆ. ಅಭಿವೃದ್ಧಿ ಸಮಿತಿಯ ಟೆಂಡರ್‌ ಉಲ್ಲಂಘನೆಯ ಬಗ್ಗೆ ಮತ್ತು ಕೋವಿಡ್‌ -19 ಲಾಕ್‌ಡೌನ್‌ ಸಂದರ್ಭ ಅಲ್ಲಿ ತಂಗಿದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ
ಗಳಿಗೆ ವರದಿ ಸಲ್ಲಿಸಲಾಗುತ್ತದೆ.
– ಚೇತನ್‌ ಆರ್‌. ,
ಎಸ್ಪಿ, ಕರಾವಳಿ ಕಾವಲು ಪೊಲೀಸ್‌ ಪಡೆ

Advertisement

ಘಟನೆ ಬಗ್ಗೆ ಕರಾವಳಿ ಕಾವಲು ಪೊಲೀಸರು ಸಲ್ಲಿಸುವ ವರದಿಯನ್ನು ಪರಿಶೀಲಿಸಿ ನಿಯಮ ಉಲ್ಲಂಘನೆ ಆಗಿರುವುದು ಕಂಡು ಬಂದರೆ ಅವರ ವಿರುದ್ಧ ಸೂಕ್ತ ಕ್ರಮ ಜರಗಿಸಲಾಗುವುದು.
– ಜಿ. ಜಗದೀಶ್‌, ಉಡುಪಿ ಜಿಲ್ಲಾಧಿಕಾರಿಗಳು ಹಾಗೂ
ಮಲ್ಪೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next