ಬೆಂಗಳೂರು: ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಅಕ್ರಮ ಎಸಗಿದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಬೆಂಗಳೂರು ವಿವಿಯ ಸಮಾಜಶಾಸ್ತ್ರ ವಿಭಾಗದ ಪ್ರೊಫೆಸರ್ ಬಿ.ಸಿ.ಮೈಲಾರಪ್ಪ ಅವರನ್ನು ಅಮಾನತುಗೊಳಿಸಲು ಕ್ರಮ ಕೈಗೊಳ್ಳುವಂತೆ ಉನ್ನತ ಶಿಕ್ಷಣ ಇಲಾಖೆಯು ಬೆಂಗಳೂರು ವಿವಿಯ ಕುಲಸಚಿವರಿಗೆ ನಿರ್ದೇಶನ ನೀಡಿದೆ.
ಹೈದರಬಾದ್‌ನ ಜ್ಯುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಕೆ. ಶಶಿಧರ್ ರೆಡ್ಡಿ ಎಂಬುವರು 2023ರ ಫೆ. 15ರಂದು ನೀಡಿದ್ದ ದೂರಿನ ಬಗ್ಗೆ ತನಿಖೆ ನಡೆಸಿದ್ದ ಪೊಲೀಸರು 2024ರ ಮಾ.22ರಂದು ಮೈಲಾರಪ್ಪ ಸೇರಿದಂತೆ ಪ್ರಕರಣದಲ್ಲಿನ ಇತರ ಆರೋಪಿಗಳಾದ ಕೊರಟಗೆರೆ ಕೃಷ್ಣಪ್ರಸಾದ್, ಆರ್. ಜಗನ್ನಾಥ್, ಸುರೇಂದರ್ ರೆಡ್ಡಿ ಅವರನ್ನು ಬಂಧಿಸಿದ್ದರು. ಮೈಲಾರಪ್ಪ ಅವರ ಬಂಧನದ ಬಗ್ಗೆ ತೆಲಂಗಾಣ ಪೊಲೀಸರು ವಿವಿಗೆ ಮಾಹಿತಿ ನೀಡಿದ್ದರೂ, ಉನ್ನತ ಶಿಕ್ಷಣ ಇಲಾಖೆ ಮಾಹಿತಿ ಕೇಳಿದ್ದರೂ ಸಹ ವಿವಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಬಗ್ಗೆ ಮೇ 5 ರಂದು ಉದಯವಾಣಿ ವರದಿ ಪ್ರಕಟಿಸಿತ್ತು.
ಆ ಬಳಿಕ ವಿವಿಯ ಕುಲಪತಿ ಅವರು ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ವಿವಿಯ ಸಿಂಡಿಕೇಟ್‌ನ ಸಭೆ ಕರೆದು ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಈ ಬಗ್ಗೆ ಪರಿಶೀಲನೆ ನಡೆಸಿ ಅಭಿಪ್ರಾಯ ನೀಡುವಂತೆ ಉನ್ನತ ಶಿಕ್ಷಣ ಇಲಾಖೆಯನ್ನು ಕೋರಿದ್ದರು. ಈ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರು ಪತ್ರ ಬರೆದಿದ್ದು, ಮೈಲಾರಪ್ಪ ಅವರು 48 ಗಂಟೆಗೂ ಅಧಿಕ ಕಾಲ ಕಾರಾಗೃಹ ವಾಸದಲ್ಲಿದ್ದುದ್ದರಿಂದ ಬಂಧಿಸಲಾದ ದಿನಾಂಕದಿಂದ (ಮಾ.22) ಪೂರ್ವಾನ್ವಯ ಆಗುವಂತೆ ಅಮಾನತಿನಲ್ಲಿಡಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಏನಿದು ಪ್ರಕರಣ?: ಶಶಿಧರ್ ರೆಡ್ಡಿಗೆ ಯಲಹಂಕದ ಹೊಸಹಳ್ಳಿಯಲ್ಲಿ ಕೃಷ್ಣಪ್ರಸಾದ್ ಎಂಬವರಿಗೆ ಸೇರಿದ ಜಮೀನು ಕೊಡಿಸುವುದಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸುಮಾರು 5 ಕೋಟಿ ರೂ ಮುಂಗಡವನ್ನು ಆರೋಪಿಗಳು ಪಡೆದಿದ್ದರು. ಆ ಜಮೀನು ಕೃಷ್ಣಪ್ರಸಾದ್ ಅವರಿಗೆ ಸೇರಿಲ್ಲ ಎಂದು ತಿಳಿಯುತ್ತಲೇ ತಾನು ನೀಡಿದ್ದ ಮುಂಗಡವನ್ನು ವಾಪಾಸ್ ನೀಡುವಂತೆ ಶಶಿಧರ್ ರೆಡ್ಡಿ ಕೇಳಿದ್ದರು. ಆಗ ಪ್ರೊ. ಮೈಲಾರಪ್ಪ ಕರೆ ಮಾಡಿ ತನಗೆ ಸರ್ಕಾರದ ಮಟ್ಟದಲ್ಲಿ ಉತ್ತಮ ಸಂಕರ್ಪವಿದೆ, ಹಣಕ್ಕಾಗಿ ಆರೋಪಿಗಳ ಮೇಲೆ ಒತ್ತಡ ಹೇರಬೇಡಿ ಎಂದು ಬೆದರಿಕೆ ಹಾಕಿದ್ದರು. ಆ ಬಳಿಕ ಈ ಜಮೀನನ್ನು ಸರ್ಕಾರವು ವೈಎಎಸ್ ಚಾರಿಟಬಲ್ ಟ್ರಸ್ಟ್ ಮತ್ತು ಕೊಡವ ಸಮಾಜಕ್ಕೆ ಹಂಚಿಕೆ ಮಾಡಿರುವುದು ಶಶಿಧರ್ ರೆಡ್ಡಿ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಹಣವನ್ನು ವಾಪಸ್ ನೀಡುವಂತೆ ಕೇಳಿದಾಗ ಬೆದರಿಕೆ ಮತ್ತು ನಿರ್ಲಕ್ಷ್ಯ ತೋರಿದ್ದಾರೆ ಎಂದು ಶಶಿಧರ್ ರೆಡ್ಡಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.