ಬೆಂಗಳೂರು: ಸಹೋದ್ಯೋಗಿ ಯುವತಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಕಂಪನಿಯ ವ್ಯವಸ್ಥಾಪಕನ ವಿರುದ್ಧ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋರಮಂಗಲದ ಪೇಯಿಂಗ್ ಗೆಸ್ಟ್ ಕಟ್ಟಡದಲ್ಲಿ ವಾಸವಿರುವ 27 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಕೊರಿಯರ್ ಕಂಪನಿ ವ್ಯವಸ್ಥಾಪಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ದೂರುದಾರ ಯುವತಿ, ಮೂರು ತಿಂಗಳ ಹಿಂದಯಷ್ಟೇ ಕೊರಿಯರ್ ಕಂಪನಿ ಕೆಲಸಕ್ಕೆ ಸೇರಿದ್ದರು. ಆರೋಪಿ ಕೂಡ ಅದೇ ಕಂಪನಿಯಲ್ಲಿ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದಾನೆ. ರಾತ್ರಿ 10 ಗಂಟೆಯವರೆಗೂ ಯುವತಿಯನ್ನು ಕಚೇರಿಯಲ್ಲಿ ಕೂರಿಸಿಕೊಳ್ಳುತ್ತಿದ್ದ ಆರೋಪಿ, ಆಕೆಗೆ ಹೆಚ್ಚುವರಿ ಕೆಲಸ ಮಾಡಿಸುತ್ತಿದ್ದ. ನಂತರ, ತನ್ನ ಕಾರಿನಲ್ಲಿಯೇ ಯುವತಿಯನ್ನು ಪೇಯಿಂಗ್ ಗೆಸ್ಟ್ ಕಟ್ಟಡಕ್ಕೆ ಕರೆದೊಯ್ದು ಬಿಟ್ಟು ಬರುತ್ತಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.
ಈ ನಡುವೆ ಮೇ 4ರಂದು ಯುವತಿಯನ್ನು ಕಾರಿನಲ್ಲಿ ಕರೆದೊಯ್ಯುತ್ತಿದ್ದ ವೇಳೆ ಆರೋಪಿ, ಆಕೆ ಜತೆ ಅಸಭ್ಯವಾಗಿ ವರ್ತಿಸಿದ್ದ. ಆಕೆಯ ಅಂಗಾಂಗಗಳನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದ. ತಾನು ಹೇಳಿದಂತೆ ಕೇಳದಿದ್ದರೆ, ಕೆಲಸದಿಂದ ತೆಗೆದು ಹಾಕುವುದಾಗಿ ಬೆದರಿಸಿದ್ದ. ಅದರಿಂದ ನೊಂದ ಯುವತಿ, ಠಾಣೆಗೆ ಬಂದು ದೂರು ನೀಡಿದ್ದಾರೆ.
ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.