ಬನಹಟ್ಟಿ: ಧಾರ್ಮಿಕ ಹಾಗೂ ದೇಶದ ಸಂಸ್ಕೃತಿ ಉಳಿಸಿ-ಬೆಳೆಸುವ ನಿಟ್ಟಿನಲ್ಲಿ “ವ್ಯೋಮಕಾಯ ಸಿದ್ಧ ಶ್ರೀ ಅಲ್ಲಮಪ್ರಭು’ ಚಲನಚಿತ್ರ ನಿರ್ಮಿಸಲಾಗುತ್ತಿದೆ ಎಂದು ಚಿತ್ರಕತೆ ಬರೆದ ಮಾಧವಾನಂದ ಶೇಗುಣಸಿ ಹೇಳಿದರು.
ತಾಲೂಕಿನ ಹನಗಂಡಿ ಗ್ರಾಮದ ದೇಸಾಯಿ ಮನೆತನದ ವಾಡೆಯಲ್ಲಿ ನಡೆದ ಚಿತ್ರೀಕರಣ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕು ವರ್ಷಗಳ ಹಿಂದೆ ನಿರ್ದೇಶಕ ಓಂಪ್ರಕಾಶ ಅವರೊಂದಿಗೆ “ಕ್ರಾಂತಿಯೋಗಿ ಮಹಾದೇವರು’ ಧಾರ್ಮಿಕ ಚಿತ್ರ ಹೊರತರಲಾಗಿತ್ತು. ಇದೀಗ ಅಮರ ಜ್ಯೋತಿ ಪಿಕ್ಟರ್ ಅಡಿಯಲ್ಲಿ ಅಂದಿನ ಶರಣರ ಒಡನಾಟ, ಅನುಭವ ಮಂಟಪ, ಬಿಜ್ಜಳನ ಆಸ್ಥಾನ ಕುರಿತಾಗಿ ಮಹತ್ತರ ಮಾಹಿತಿ ಹೊತ್ತು ತರುವಲ್ಲಿ ಚಲನಚಿತ್ರ ಮುಂದಾಗಿದೆ. ಉತ್ತರ ಕನ್ನಡ ಜಿಲ್ಲೆಯ ಬನವಾಸಿ, ಹುಲಿಕಲ್ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಚಿತ್ರೀಕರಣಗೊಂಡಿದ್ದು, ಇದೀಗ ಉತ್ತರ ಕರ್ನಾಟಕದಲ್ಲಿ 12 ನೇ ಶತಮಾನದಲ್ಲಿ ಅಲ್ಲಮಪ್ರಭುಗಳು ಸಂಚರಿಸಿದ ಪ್ರದೇಶಗಳನ್ನು ಗುರುತಿಸಿ ಚಿತ್ರೀಕರಣ ಮಾಡಲಾಗಿ ಶೇ.60 ಭಾಗ ಚಿತ್ರೀಕರಣಗೊಂಡಿದೆ ಎಂದು ಶೇಗುಣಸಿ ತಿಳಿಸಿದರು.
ಎನ್‌ಕೌಂಟರ ದಯಾನಾಯಕ ಚಿತ್ರದ ನಾಯಕ ನಟ ಸಚಿನ್ ಸುವರ್ಣ ಮಾತನಾಡಿ, ಧಾಡಸಿ ಚಿತ್ರಗಳಲ್ಲಿ ಅಭಿನಯಿಸಿದ ನನಗೆ ಇದೊಂದು ಹೊಸ ಅನುಭವ ನೀಡುತ್ತಿದೆ. ಇಂತಹ ಚಿತ್ರಗಳಲ್ಲಿ ಅಭಿನಯಿಸಲು ಪರಿಶುದ್ಧ ಶರೀರ, ಶರಣರ ಶ್ರೀಮಂತಿಕೆಯ ಸಂಸ್ಕೃತಿ ಅರಿತಾಗ ಮಾತ್ರ ಸಾಧ್ಯ. ಈ ಮೊದಲು ಮಾಂಸಾಹಾರಿಯಾಗಿದ್ದೆ, ಇದೀಗ ಎಲ್ಲವನ್ನೂ ತ್ಯಜಿಸಿ ಸತ್ಸಂಗ ಸಿರಿವಂತಿಕೆಗೆ ಮಾರು ಹೋಗಿದ್ದೇನೆ. ಈ ಚಿತ್ರ ಮಾಡುತ್ತಿರುವುದರಿಂದ ನನ್ನ ಜೀವನದಲ್ಲಿ ಹೊಸ ಯುಗ ಆರಂಭವಾಗಿದೆ. ನನ್ನಲ್ಲಿ ಮತ್ತು ನನ್ನ ಕುಟುಂಬದವರಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ ಎಂದು ಹೇಳಿದರು.
ಇದನ್ನೂ ಓದಿ:ಮಹಿಳೆಯರು ಆರ್ಥಿಕವಾಗಿ ಸಬಲರಾಗಲಿ: ಶಿಲ್ಪಾ
ನಿರ್ಮಾಪಕ ಹಳಿಂಗಳಿಯ ಮಹಾವೀರ ಪ್ರಭುಗಳು ಮಾತನಾಡಿ, ಅಲ್ಲಮರ ವ್ಯಕ್ತಿತ್ವದ ಬಗ್ಗೆ ನಾಡಿನ ಎಲ್ಲ ಜನತೆಗೂ ಗೊತ್ತಾಗಬೇಕೆಂಬ ಕಾರಣಕ್ಕೆ ನಾವು-ನಮ್ಮ ಭಕ್ತ ಸಮೂಹ ಈ ಚಿತ್ರ ನಿರ್ಮಿಸುತ್ತಿದ್ದೇವೆ ಎಂದರು. ಚಿಮ್ಮಡ ವಿರಕ್ತಮಠದ ಶ್ರೀ ಪ್ರಭುದೇವರು ಮಾತನಾಡಿ, ಶರಣರ ವಿಚಾರಗಳನ್ನು ಆಚರಣೆಗೆ ತರುವುದು ಚಲನಚಿತ್ರಗಳ ಮೂಲಕ ಆಗಬೇಕೆಂದರು.
ನಿರ್ದೇಶಕ ಶರಣ ಗದ್ದವಾಲ, ನಟಿ ಸಂಭ್ರಮಶ್ರೀ, ಛಾಯಾಗ್ರಾಹಕ ಆರ್. ಗಿರಿ, ನೀಲೇಶ ದೇಸಾಯಿ, ಬಸವರಾಜ ಬಾಳಿಕಾಯಿ ಇತರರಿದ್ದರು.