ಲಕ್ನೋ: ಉತ್ತರಪ್ರದೇಶ ಸೇರಿದಂತೆ ದೇಶದ ಹಲವೆಡೆ ಅಂತರ್ ಧರ್ಮೀಯ ಮದುವೆ(ಲವ್ ಜಿಹಾದ್) ಕುರಿತಂತೆ ಚರ್ಚೆ ನಡೆಯುತ್ತಿರುವ ನಡುವೆಯೇ ಅಲಹಾಬಾದ್ ಹೈಕೋರ್ಟ್ ದ್ವಿಸದಸ್ಯ ಪೀಠ ಮಂಗಳವಾರ (ನವೆಂಬರ್ 24, 2020) ಮಹತ್ವದ ತೀರ್ಪನ್ನು ನೀಡಿದೆ.
ಏನಿದು ಹಿಂದೂ, ಮುಸ್ಲಿಂ ವಿವಾಹ ವಿವಾದ:
ತಮ್ಮ ಮಗಳನ್ನು ಮತಾಂತರ ಮಾಡಿ ವಿವಾಹವಾಗಿದ್ದಾನೆ ಎಂದು ಆರೋಪಿಸಿ ಯುವತಿಯ ಪೋಷಕರು ಮುಸ್ಲಿಂ ಯುವಕನ ವಿರುದ್ಧ ದಾಖಲಿಸಿದ್ದ ದೂರನ್ನು ಅಲಹಾಬಾದ್ ಹೈಕೋರ್ಟ್ ರದ್ದುಗೊಳಿಸಿದೆ.
ಈ ದೂರಿನ ವಿಚಾರಣೆ ನಡೆಸಿದ ಹೈಕೋರ್ಟ್ ದ್ವಿಸದಸ್ಯ ಪೀಠ, ವೈಯಕ್ತಿಕ ಸಂಬಂಧದ ವಿಚಾರದಲ್ಲಿ ಮಧ್ಯಪ್ರವೇಶಿಸುವುದು ಇಬ್ಬರ ವೈಯಕ್ತಿಯ ಆಯ್ಕೆಯ ಸ್ವಾತಂತ್ರ್ಯದ ಹಕ್ಕನ್ನು ಅತಿಕ್ರಮಣ ಮಾಡಿಕೊಂಡಂತಾಗಲಿದೆ. ದೇಶದಲ್ಲಿ ಲವ್ ಜಿಹಾದ್ ಕುರಿತು ಗಂಭೀರ ಚರ್ಚೆ ನಡೆಯುತ್ತಿರುವ ನಡುವೆಯೇ ಈ ತೀರ್ಪನ್ನು ನೀಡುತ್ತಿರುವುದನ್ನು ಕೋರ್ಟ್ ಗಮನಿಸಿರುವುದಾಗಿಯೂ ತಿಳಿಸಿದೆ.
“ನಾವು ಪ್ರಿಯಾಂಕಾ ಖಾರ್ವಾರ್ ಮತ್ತು ಸಲಾಮತ್ ಅನ್ಸಾರಿಯನ್ನು ಹಿಂದು ಮತ್ತು ಮುಸ್ಲಿಂ ಆಗಿ ನೋಡುತ್ತಿಲ್ಲ. ಅದಕ್ಕಿಂತ ಹೆಚ್ಚಾಗಿ ಇಬ್ಬರು ವಯಸ್ಕರಾಗಿದ್ದು, ಅವರು ತಮ್ಮ ಸ್ವಂತ ಇಚ್ಛೆಯಿಂದ ಆಯ್ಕೆ ಮಾಡಿಕೊಂಡು ಒಂದು ವರ್ಷಕ್ಕಿಂತ ಹೆಚ್ಚು ಕಾಲ ಶಾಂತಿಯುತವಾಗಿ ಮತ್ತು ಖುಷಿಯಿಂದ ಒಟ್ಟಿಗೆ ಜೀವನ ಸಾಗಿಸಿದ್ದಾರೆ. ಭಾರತದ ಸಂವಿಧಾನದ ಪರಿಚ್ಛೇದ 21ರ ಪ್ರಕಾರವೂ ವೈಯಕ್ತಿಕ ಜೀವನ ಮತ್ತು ಸ್ವಾತಂತ್ರ್ಯವನ್ನು ನ್ಯಾಯಾಲಯ ಮತ್ತು ಸಾಂವಿಧಾನಿಕ ನ್ಯಾಯಾಲಯವೂ ಕೂಡಾ ಮುಖ್ಯವಾಗಿ ಎತ್ತಿಹಿಡಿದಿರುವುದಾಗಿ ಅಲಹಾಬಾದ್ ಹೈಕೋರ್ಟ್ ನ ದ್ವಿಸದಸ್ಯ ಪೀಠ ತೀರ್ಪಿನಲ್ಲಿ ಹೇಳಿದೆ.
ಸಲ್ಮಾನ್ ಅನ್ಸಾರಿ ಪೂರ್ವ ಉತ್ತರಪ್ರದೇಶದ ಕುಶಿನಗರ್ ನಿವಾಸಿಯಾಗಿದ್ದು, ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಪ್ರಿಯಾಂಕಾ ಖಾರ್ವಾರ್ ಪೋಷಕರ ವಿರೋಧದ ನಡುವೆಯೇ ಅನ್ಸಾರಿಯನ್ನು ವಿವಾಹವಾಗಿದ್ದಳು. ಮದುವೆಗೂ ಸ್ವಲ್ಪ ದಿನದ ಮೊದಲು ಪ್ರಿಯಾಂಕಾ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ತನ್ನ ಹೆಸರನ್ನು “ಅಲಿಯಾ” ಎಂದು ಬದಲಾಯಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.
ಪ್ರಿಯಾಂಕಾ ವಿವಾಹ ನಂತರ ಪೋಷಕರು ಸಲಾಮತ್ ವಿರುದ್ಧ ಎಫ್ ಐಆರ್ ದಾಖಲಿಸಿದ್ದರು. ಸಲಾಮತ್ ತನ್ನ ಮಗಳನ್ನು ಅಪಹರಿಸಿ ವಿವಾಹವಾಗಿದ್ದಾನೆ ಎಂದು ಆರೋಪಿಸಿದ್ದರು. ಪ್ರಿಯಾಂಕಾ ವಿವಾಹವಾಗುವ ವೇಳೆ ಅಪ್ರಾಪ್ತ ವಯಸ್ಕಳಾಗಿದ್ದು ಸಲಾಮತ್ ವಿರುದ್ಧ ಪೋಕ್ಸೊ ಕಾಯ್ದೆಯಡಿ ಬಂಧಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದರು.