ಬೆಂಗಳೂರು: ರೈತರೇ ಸ್ವತಃ ತಮ್ಮ ಜಮೀನಿನ ಬಗ್ಗೆ ತಾವೇ ಪ್ರಮಾಣ ಪತ್ರ ನೀಡುವ ರೈತ ಬೆಳೆ ಸಮೀಕ್ಷೆ ಆಪ್ ಯಶಸ್ವಿಯಾಗಿದೆ.
ಶುಕ್ರವಾರ ಮಧ್ಯಾಹ್ನದವರೆಗೆ 1 ಕೋಟಿ 2ಲಕ್ಷದ 90 ಸಾವಿರ ಪ್ಲಾಟ್ ಗಳು ಆಪ್ ಗೆ ಅಪ್ಲೋಡ್ ಆಗಿವೆ.
ಹೀಗೆ ಅಪ್ಲೋಡ್ ಮಾಡಿದ ಬೆಳೆ ಸಮೀಕ್ಷೆಯ ವಿವರಗಳನ್ನು ರೈತರು ಪಡೆಯಲು ಕೃಷಿ ಇಲಾಖೆ ಮತ್ತೊಂದು ಆಪ್ ಅನ್ನು ಬಿಡುಗಡೆ ಮಾಡಿದೆ.
‘ಬೆಳೆ ದರ್ಶಕ್ -2020′ ಹೆಸರಿನ ಈ ಆಪ್ ಮೂಲಕ ರೈತರು ಅಪ್ಲೊಡ್ ಆಗಿರುವ ತಮ್ಮ ಬೆಳೆಯ ವಿವರಗಳ ಮಾಹಿತಿಯನ್ನು ಪಡೆಯಬಹುದು. ಅಲ್ಲದೇ ಬೆಳೆ ದರ್ಶಕ್-2020 ಆಪ್ ಮೂಲಕ ಅಪ್ಲೋಡ್ ಆದ ವಿವರಗಳು ಸರಿಯಾಗಿವೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬಹುದಾಗಿದೆ.
ರೈತರಾಗಲೀ ಅಥವಾ ಖಾಸಗಿ ನಿವಾಸಿಗಳು ಬೆಳೆ ಸಮೀಕ್ಷೆ ಮಾಹಿತಿಯನ್ನು ಒಂದು ವೇಳೆ ತಪ್ಪಾಗಿ ದಾಖಲಿಸಿದ್ದಲ್ಲಿ ಆಕ್ಷೇಪಣೆ ಸಲ್ಲಿಸಿ ತಿದ್ದುಪಡಿ ಮಾಡಿಕೊಳ್ಳಲು ಬೆಳೆ ದರ್ಶಕ್ ನಲ್ಲಿ ಅವಕಾಶ ಕಲ್ಪಿಸಲಾಗಿದೆ.
ಕೃಷಿ ಕ್ಷೇತ್ರದಲ್ಲಿ ನವೀನ ತಂತ್ರಜ್ಞಾನ ಬಳಕೆ ಮತ್ತು ರೈತರಿಗೆ ಅನುಕೂಲ ಕಲ್ಪಿಸಲು ಹೊಸ ಹೊಸ ಹೆಜ್ಜೆಗಳನ್ನು ಇಡುತ್ತಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಇಂದು ಇಂತಹ ಮತ್ತೊಂದು ಮಹತ್ವದ ಬೆಳೆ ದರ್ಶಕ್-2020 ಆಪ್ ಅನ್ನು ಲೋಕಾರ್ಪಣೆಗೊಳಿಸಿದರು.
ಸೆ.23 ಬೆಳೆ ಸಮೀಕ್ಷೆ ಅಪ್ಲೋಡ್ ಮಾಡಲು ಕೊನೆಯ ದಿನವಾಗಿದ್ದು, ರೈತರು ಆದಷ್ಟು ಬೇಗ ತಮ್ಮ ಜಮೀನಿನ ಸಮೀಕ್ಷೆ ಅಪ್ಲೊಡ್ ಮಾಡುವಂತೆ ಸಚಿವರು ಮನವಿ ಮಾಡಿದ್ದಾರೆ.