Advertisement

ವರ್ಷವಿಡೀ ಭಿನ್ನಮತ-ಅತೃಪ್ತ ಶಾಸಕರದ್ದೇ ಸದ್ದು!

09:46 AM Jun 29, 2019 | Team Udayavani |

ಬೆಳಗಾವಿ: ಅಧಿಕಾರಕ್ಕೆ ಬಂದಾಗಿನಿಂದ ಅಸಮಾಧಾನ, ಅತೃಪ್ತಿ ಹಾಗೂ ಭಿನ್ನಮತದ ಆತಂಕವನ್ನೇ ಎದುರಿಸುತ್ತ ಬಂದಿರುವ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಮೈತ್ರಿ ಸರಕಾರ ಒಂದು ವರ್ಷ ಪೂರೈಸಿದೆ. ಸಾಕಷ್ಟು ಅಳೆದು-ತೂಗಿ ನಡೆದ ಈ ಒಂದು ವರ್ಷದ ಅವಧಿಯಲ್ಲಿ ಗಡಿನಾಡು ಬೆಳಗಾವಿ ಜಿಲ್ಲೆಗೆ ಅಭಿವೃದ್ಧಿಯ ವಿಷಯದಲ್ಲಿ ಮಿಶ್ರ ಫಲ ಸಿಕ್ಕಿದೆ.

Advertisement

ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರ ಬಂದಾಗ ಬೆಳಗಾವಿ ಜಿಲ್ಲೆಯ ಜನರಲ್ಲಿ ಸಾಕಷ್ಟು ನಿರೀಕ್ಷೆಗಳು ಗರಿಗೆದರಿದ್ದವು. 2006 ರಲ್ಲಿ ಇದೇ ರೀತಿ ಎಚ್.ಡಿ. ಕುಮಾರಸ್ವಾಮಿ ಮೊದಲ ಬಾರಿಗೆ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿಯಾದಾಗ ಬೆಳಗಾವಿಗೆ ಕೊಡುಗೆಗಳ ಮಹಾಪೂರವೇ ಹರಿದುಬಂದಿತ್ತು. ಆದರೆ ಈ ಬಾರಿ ಅಂತಹ ಬೆಳವಣಿಗೆ ಕಾಣುತ್ತಿಲ್ಲ.

ಈ ಸರಕಾರದಲ್ಲಿ ಬೆಳಗಾವಿ ಜಿಲ್ಲೆ ಸರಕಾರದ ಕೊಡುಗೆಗಳಿಂದ ಸುದ್ದಿ ಮಾಡಲಿಲ್ಲ. ಬದಲಾಗಿ ಭಿನ್ನಮತ, ಅತೃಪ್ತ ಶಾಸಕರು ಎಂಬ ಸುದ್ದಿಯಲ್ಲೇ ವರ್ಷ ಕಳೆಯಿತು. ಜಿಲ್ಲೆಗೆ ಹಲವಾರು ಯೋಜನೆಗಳನ್ನು ಪ್ರಕಟಿಸಬೇಕಿದ್ದ ಸರಕಾರ ಹಾಗೂ ಮುಖ್ಯಮಂತ್ರಿಗಳು ಜಾರಕಿಹೊಳಿ ಸೋದರರನ್ನು ಸಮಾಧಾನಪಡಿಸುವದರಲ್ಲೇ ಹೆಚ್ಚು ಕಾಲ ಕಳೆಯಬೇಕಾಯಿತು. ಇದರಿಂದ ಜಿಲ್ಲೆಯ ಜನರ ಬಹುತೇಕ ಬೇಡಿಕೆಗಳು ಕಾಗದದಲ್ಲೇ ಉಳಿದುಕೊಂಡವು.

ಮೈತ್ರಿ ಸರಕಾರ ರಚನೆಯಾದ ಮೇಲೆ ಉತ್ತರ ಕರ್ನಾಟಕದ ಅದರಲ್ಲೂ ವಿಶೇಷವಾಗಿ ಜಿಲ್ಲೆಯ ಬಹುತೇಕ ಮಠಾಧೀಶರು ಸುವರ್ಣ ವಿಧಾನಸೌಧದ ಮುಂದೆ ಧರಣಿ ನಡೆಸಿ ಕಚೇರಿಗಳ ಸ್ಥಳಾಂತರಕ್ಕೆ ಆಗ್ರಹಿಸಿದ್ದರು. ಅದಕ್ಕೆ ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಸಕ್ಕರೆ ನಿರ್ದೇಶನಾಲಯ, ನೀರಾವರಿ ಸೇರಿದಂತೆ ಒಂಬತ್ತು ಕಚೇರಿಗಳ ಸ್ಥಳಾಂತರ ಘೋಷಣೆ ಸಹ ಮಾಡಿದರು. ಆದರೆ ಇವತ್ತಿನವರೆಗೂ ಒಂದೇ ಒಂದು ಕಚೇರಿ ಉತ್ತರ ಕರ್ನಾಟಕಕ್ಕೆ ಬಂದಿಲ್ಲ ಎಂಬ ಅಸಮಾಧಾನ ಈ ಭಾಗದ ಜನರಲ್ಲಿದೆ.

ಇದಲ್ಲದೇ ಬೆಳಗಾವಿ ನಗರದಲ್ಲಿ ಆರು ದಶಕಗಳಿಂದ ಹಾಗೇ ಇರುವ ಕುಡಿಯುವ ನೀರು ಪೈಪ್‌ಲೈನ್‌ಗಳ ಬದಲಾವಣೆ, ಒಳಚರಂಡಿ ನಿರ್ಮಾಣ ಹಾಗೂ ನಗರದಲ್ಲಿ ಫ್ಲೈಓವರ್‌ಗಳ ನಿರ್ಮಾಣ ಸರಕಾರದ ಮುಂದಿರುವ ಪ್ರಮುಖ ಬೇಡಿಕೆಗಳು. ಹಿಂದಿನ ಸರಕಾರದ ಅವಧಿಯಲ್ಲಿ ಫ್ಲೈಓವರ್‌ಗಳ ನಿರ್ಮಾಣಕ್ಕೆ ಹಣ ಮಂಜೂರಾಗಿದ್ದರೂ ಅದು ಕಾರ್ಯಗತವಾಗಲೇ ಇಲ್ಲ.

Advertisement

ಸರಕಾರ ಬಂದ ನಂತರ ಕೆಲ ಶಾಸಕರು ತಮ್ಮ ಪ್ರಭಾವ ಬಳಸಿ ಕ್ಷೇತ್ರಕ್ಕೆ ಒಂದಿಷ್ಟು ಅನುದಾನ ತಂದರು. ಕೆರೆ ತುಂಬಿಸುವ ಯೋಜನೆಗಳಿಗೆ ಚಾಲನೆ ಸಿಕ್ಕಿತಾದರೂ ಅವುಗಳ ಕಾಮಗಾರಿ ನಿರೀಕ್ಷೆ ಮಾಡಿದಂತೆ ವೇಗ ಪಡೆದುಕೊಳ್ಳಲಿಲ್ಲ. ಈ ಸರಕಾರದಲ್ಲಿ ಅನುದಾನ ಬಿಡುಗಡೆ ವಿಷಯದಲ್ಲಿ ಬಹಳಷ್ಟು ತಾರತಮ್ಯವಾಗುತ್ತಿದೆ ಎಂಬ ಆರೋಪ ಬಿಜೆಪಿ ಶಾಸಕರದ್ದು. ಕಾಂಗ್ರೆಸ್‌ ಶಾಸಕರು ಇರುವ ಕ್ಷೇತ್ರಗಳಿಗೆ ಲೋಕೋಪಯೋಗಿ. ನೀರಾವರಿ, ಕುಡಿಯುವ ನೀರಿನ ಬಹುತೇಕ ಪ್ರಸ್ತಾವನೆಗಳಿಗೆ ಅನುಮೋದನೆ ಸಿಕ್ಕಿದೆ. ಆದರೆ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಯಾವುದೇ ಅನುದಾನ ಇಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.

ಜಿಲ್ಲೆ ವಿಭಜನೆ: ಮೈತ್ರಿ ಸರಕಾರದ ಮುಂದಿರುವ ಬಹು ದೊಡ್ಡ ಬೇಡಿಕೆಗಳಲ್ಲಿ ಇದೂ ಸಹ ಒಂದು. ಆಡಳಿತಾತ್ಮಕ ಅನುಕೂಲತೆ ದೃಷ್ಟಿಯಿಂದ ಬೆಳಗಾವಿ ವಿಭಜನೆ ಮಾಡಿ ಚಿಕ್ಕೋಡಿ ಹಾಗೂ ಗೋಕಾಕ ಹೊಸ ಜಿಲ್ಲೆಗಳನ್ನಾಗಿ ಮಾಡಬೇಕು ಎಂಬ ಬೇಡಿಕೆ ಸರಕಾರದ ಮೊದಲ ಅವಧಿಯಲ್ಲೂ ಈಡೇರಲಿಲ್ಲ. ಇದಕ್ಕಾಗಿ ಸರಕಾರದ ಮೇಲೆ ಸಾಕಷ್ಟು ಒತ್ತಡ ಹಾಕಲಾಗಿತ್ತು. ಹೋರಾಟಗಳು ನಡೆದವು. ಆದರೆ ರಾಜಕೀಯ ಪಕ್ಷಗಳಲ್ಲಿನ ಒಗ್ಗಟ್ಟಿನ ಕೊರತೆಯಿಂದ ಇದು ನನೆಗುದಿಗೆ ಬಿದ್ದಿತು.

ಕಳೆದ ಬಜೆಟ್ದಲ್ಲಿ ಬೆಳಗಾವಿಯಲ್ಲಿ ಕ್ಯಾನ್ಸರ್‌ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದು ಘೋಷಣೆ ಮಾಡಲಾಗಿತ್ತು. ಆದರೆ ಬಜೆಟ್ ನಂತರ ಅಂತಹ ಯಾವುದೇ ಪ್ರಗತಿ ಕಾಣಲಿಲ್ಲ.

 

•ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next