ವಿಜಯಪುರ: ಕೋವಿಡ್ ಲಸಿಕಾಕರಣದ ಪ್ರಗತಿ ಪ್ರಮಾಣ ಕಡಿಮೆ ಇರುವ ಕಾರಣ ಸಿಂದಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿ ಅರ್ಹ ಎಲ್ಲ ಮತದಾರರು ಕೋವಿಡ್ ಲಸಿಕೆ ಪಡೆಯುವಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಿಂದಗಿ ವಿಧಾನಸಭೆ ಚುನಾವಣೆ ನಿಮಿತ್ತ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಅಂಗನವಾಡಿ ಮೇಲ್ವಿಚಾರಕರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಮಾತನಾಡಿದರು.
ಪ್ರತಿ ಮತದಾರರು ಕೋವಿಡ್ ಲಸಿಕೆ ಹಾಕಿಸಿಕೊಂಡಿರಬೇಕು. ಚುನಾವಣೆ ಆಯೋಗದ ನಿರ್ದೇಶನದಂತೆ ಸಿಂದಗಿ ವಿಧಾನಸಭಾ ಕ್ಷೇತ್ರದ 18 ವರ್ಷ ಮೇಲ್ಮಟ್ಟ ಪ್ರತಿಯೊಬ್ಬ ಮತದಾರರು ಕೋವಿಡ್ ಮುನ್ನೆಚ್ಚರಿಕೆಯಾಗಿ ಪ್ರಥಮ ಲಸಿಕೆಯಾದರೂ ಪಡೆದಿರಬೇಕು. ಈ ದಿಸೆಯಲ್ಲಿ ಸಂಬಂಧಪಟ್ಟ ಅಧಿಕಾರಿ ಮತ್ತು ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಕೋವಿಡ್ ಲಸಿಕಾ ಕಾರ್ಯಕ್ರಮ ಚುರುಕುಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕೋವಿಡ್ ಲಸಿಕಾಕರಣದಲ್ಲಿ ಜಿಲ್ಲೆಯಲ್ಲಿ ಶೇ.77 ಸಾಧನೆ ಮಾಡಲಾಗಿದೆ. ಸಿಂದಗಿ ತಾಲೂಕಿನಲ್ಲಿ ಲಸಿಕಾ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ತಕ್ಷಣ ಸಂಬಂಧಪಟ್ಟ ತಾಲೂಕು ಆರೋಗ್ಯ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸಿಂದಗಿ ಹಾಗೂ ಆಲಮೇಲ ಪಪಂ ಮುಖ್ಯಾಧಿಕಾರಿಗಳು ಕಾರ್ಯಪ್ರವೃತ್ತರಾಗಿ ಪರಸ್ಪರ ಸಮನ್ವಯತೆಯಿಂದ ಲಸಿಕಾ ಪ್ರಮಾಣ ಹೆಚ್ಚಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿ, ಪ್ರತಿನಿತ್ಯ ಕೋವಿಡ್ ಲಸಿಕೆ ಪೂರೈಸಲು ಕ್ರಮ ಕೈಗೊಳ್ಳಲಾಗುತ್ತಿದೆ. ನಿರ್ಲಕ್ಷ ವಹಿಸದೇ ಆದ್ಯತೆ ಮೇಲೆ ಲಸಿಕಾಕರಣ ಕೈಗೊಳ್ಳುವಂತೆ ಸೂಚನೆ ನೀಡಿದರು.
ಶುಕ್ರವಾರ ಜಿಪಂ ಸಿಇಒ ಗೋವಿಂದ ರೆಡ್ಡಿ ಮಾತನಾಡಿ ಜಿಲ್ಲಾದ್ಯಂತ ಒಂದು ಲಕ್ಷ ಕೋವಿಡ್ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಅದರಂತೆ ಸಿಂದಗಿ ತಾಲೂಕಿನಲ್ಲಿಯೂ 20 ಸಾವಿರ ಕೋವಿಡ್ ಲಸಿಕೆ ನೀಡುವ ಆರಂಭಿಕ ಗುರಿ ನೀಡಲಾಗಿದೆ. ತಕ್ಷಣ ಪ್ರಥಮ ಹಾಗೂ ದ್ವಿತೀಯ ಲಸಿಕೆಯಾಗಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆ ಪಡೆದವರು ಮತ್ತು ಪಡೆಯುವವರನ್ನು ಗುರುತಿಸಬೇಕು. ಸಿಂದಗಿ ವಿಧಾನಸಭಾ ಮತಕ್ಷೇತ್ರದ ಪಟ್ಟಣ, ಗ್ರಾಮವಾರು ಹಾಗೂ ಲಸಿಕಾ ಕೇಂದ್ರವಾರು ಫಲಾನುಭವಿಗಳನ್ನು ಗುರುತಿಸಿ ಶೇ. ನೂರರಷ್ಟು ಲಸಿಕಾಕರಣ ನೀಡಲು ಪ್ರಯತ್ನಿಸಬೇಕು ಎಂದರು.
ಸಿಂದಗಿ ಮತಕ್ಷೇತ್ರಕ್ಕೆ ಪ್ರತಿದಿನ ಕೋವಿಡ್ ಲಸಿಕೆ ಆದ್ಯತೆ ಮೇಲೆ ಪೂರೈಸಲಾಗುವುದು. ಆರೋಗ್ಯ ಇಲಾಖೆ ಸಂಬಂಧಿಸಿದ ಅಧಿಕಾರಿಗಳು ಕುರಿತು ಸೂಕ್ತ ನಿಗಾ ವಹಿಸಬೇಕು. ಪ್ರತಿನಿತ್ಯ ಗುರಿಗೆ ತಕ್ಕಂತೆ ಲಸಿಕಾಕರಣ ಮಾಡಲು ತಿಳಿಸಿದ ಅವರು, ಲಸಿಕಾಕರಣಕ್ಕೆ ನಿರಾಕರಿಸುವವರನ್ನು ಗ್ರಾಪಂ ಟಾಸ್ಕ್ ಫೋರ್ಸ್ ಹಾಗೂ ಸ್ವಸಹಾಯ ಗುಂಪುಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ನೆರವಿನೊಂದಿಗೆ ಲಸಿಕೆ ಪಡೆಯಲು ಮನವರಿಕೆ ಮಾಡಬೇಕು. ಲಸಿಕೆ ಪಡೆಯದೆ ಇರುವಂತಹ ಟಾಸ್ಕ್ಫೋರ್ಸ್ ಸದಸ್ಯರಿಗೆ ಗ್ರಾಪಂ ಸದಸ್ಯತ್ವ ರದ್ದತಿ ಕುರಿತು ಮಾಹಿತಿ ನೀಡಿ ತಪ್ಪದೇ ಲಸಿಕೆ ಪಡೆಯಲು ಪ್ರೋತ್ಸಾಹಿಸುವಂತೆ ಸೂಚನೆ ನೀಡಿ ಲಸಿಕಾಕರಣದಲ್ಲಿ ಶೇ. ನೂರರಷ್ಟು ಪ್ರಗತಿ ಸಾಧಿಸಬೇಕು. ಕಳಪೆ ಸಾಧನೆ ತೋರುವ ಪಿಡಿಒ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.