ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ “ನಮ್ಮ ಕ್ಯಾಂಟಿನ್’ ಯೋಜನೆಯನ್ನು ಜಾರಿಗೊಳಿಸಲು ಬಿಬಿಎಂಪಿ ಸಿದ್ಧತೆ ಆರಂಭಿಸಿದ್ದು, ವಾರದೊಳಗೆ ನಗರದ ಎಲ್ಲ ವಾರ್ಡ್‌ಗಳಲ್ಲಿ ನಮ್ಮ ಕ್ಯಾಂಟಿನ್‌ಗಾಗಿ ಸ್ಥಳ ಗುರುತಿಸಿ ವರದಿ ಕೊಡಿ ಎಂದು ಸೂಚನೆ ನೀಡಲಾಗಿದೆ.
ನಗರದ 198 ವಾರ್ಡ್‌ಗಳಲ್ಲಿ ನಮ್ಮ ಕ್ಯಾಂಟಿನ್‌ಗಾಗಿ ಸ್ಥಳ ಗುರುತಿಸುವಂತೆ ಪಾಲಿಕೆ ಆಯುಕ್ತರು ಎಂಟು ವಲಯಗಳ ಜಂಟಿ ಆಯುಕ್ತರಿಗೆ ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ಸ್ಥಳ ಗುರುತಿಸುವ ಕಾರ್ಯ ಚುರುಕುಗೊಂಡಿದೆ. ಬಿಬಿಎಂಪಿಯಿಂದ ಕ್ಯಾಂಟಿನ್ ನಿರ್ಮಾಣಕ್ಕೆ ಸಂಬಂಸಿದಂತೆ ಹಲವು ಮಾನದಂಡಗಳನ್ನು ನಿಗದಿಪಡಿಸಲಾಗಿದ್ದು, ಹೆಚ್ಚಿನ ಜನರಿಗೆ ಅನುಕೂಲವಾಗುವ, ಆರ್ಥಿಕವಾಗಿ ಹಿಂದುಳಿದವರು ಹೆಚ್ಚಿರುವ ಸ್ಥಳಗಳಿಗೆ ಆದ್ಯತೆ ನೀಡಲು ಸೂಚಿಸಲಾಗಿದೆ.
ನಗರದ ಕೇಂದ್ರ ಭಾಗದ ಹಲವು ಭಾಗಗಳಲ್ಲಿ ಪಾಲಿಕೆಗೆ ಸೇರಿದ ಹಾಗೂ ಕ್ಯಾಂಟಿನ್ ನಿರ್ಮಾಣಕ್ಕೆ ನಿಗದಿಪಡಿಸಿರುವ ಮಾನದಂಡದ ಪ್ರಕಾರ ಜಾಗ ಇಲ್ಲ ಎಂದು ಅಕಾರಿಗಳು ತಿಳಿಸಿದ್ದು ವಾರ್ಡ್‌ನಲ್ಲಿರುವ ಬಿಡಿಎ, ಜಲಮಂಡಳಿ ಮತ್ತು ಜಿಲ್ಲಾಡಳಿತ ಸೇರಿದಂತೆ ಸರ್ಕಾರಿ ಸಂಸ್ಥೆಗಳಿಗೆ ಸೇರಿದ ಯಾವುದೇ ಜಾಗವಿದ್ದರೂ ಪಟ್ಟಿ ಮಾಡುವಂತೆ ಆಯುಕ್ತರು ಅಕಾರಿಗಳಿಗೆ ಸೂಚಿಸಿದ್ದಾರೆ.
ವಾರದೊಳಗೆ ಚಿಹ್ನೆ, ಒಳಾಂಗಣ ವಿನ್ಯಾಸ ಆಯ್ಕೆ: ನಮ್ಮ ಕ್ಯಾಂಟಿನ್ ಯೋಜನೆಗೆ ಹೊಂದುವಂತಹ ಚಿಹ್ನೆ (ಲೋಗೊ) ಮತ್ತು ಕ್ಯಾಂಟಿನ್ ಒಳಾಂಗಣ ವಿನ್ಯಾಸ ಹೇಗಿರಬೇಕೆಂಬುದರ ಕುರಿತು ಮಾದರಿಗಳನ್ನು ಸಲ್ಲಿಸುವಂತೆ ಬಿಬಿಎಂಪಿ ಸಾರ್ವಜನಿಕರನ್ನು ಕೋರಿತ್ತು. ಅದರ ಹಿನ್ನೆಲೆಯಲ್ಲಿ ಸಾವಿರಾರು ಜನರು ಸ್ಪರ್ಧೆಯಲ್ಲಿ ಭಾಗವಹಿಸಿ ಚಿಹ್ನೆ ಹಾಗೂ ಒಳಾಂಗಣ ವಿನ್ಯಾಸ ಮಾದರಿಗಳನ್ನು ಸಲ್ಲಿಸಿದ್ದಾರೆ. ಈಗಾಗಲೇ ಸಲ್ಲಿಕೆಯಾಗಿರುವ ಎಲ್ಲ ಮಾದರಿಗಳನ್ನು ವಾರದೊಳಗೆ ಪರಿಶೀಲಿಸಿ ಆಯ್ಕೆ ಮಾಡಲಿದ್ದು, ಆಯ್ಕೆಯಾದ ಮಾದರಿಗಳಿಗೆ ಪಾಲಿಕೆಯಿಂದ ನಗದು ಬಹುಮಾನವೂ ದೊರೆಯಲಿದೆ.
ನಮ್ಮ ಕ್ಯಾಂಟಿನ್ ಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರ ಬಿಬಿಎಂಪಿಗೆ ವಹಿಸಿದೆ. ಅದರಂತೆ ಕ್ಯಾಂಟಿನ್ ನಿರ್ಮಾಣಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕ್ಯಾಂಟಿನ್ ನಿರ್ಮಾಣಕ್ಕೆ ಗುರುತಿಸಿರುವ ಸ್ಥಳಗಳ ಪಟ್ಟಿಯನ್ನು ಸಲ್ಲಿಸುವಂತೆ ಅಕಾರಿಗಳಿಗೆ ಸೂಚಿಸಲಾಗಿದೆ. ಜತೆಗೆ ಸಾರ್ವಜನಿಕರಿಂದ ಸಲ್ಲಿಕೆಯಾಗಿರುವ ನಮ್ಮ ಕ್ಯಾಂಟಿನ್ ಚಿಹ್ನೆ ಹಾಗೂ ಒಳಾಂಗಣ ವಿನ್ಯಾಸವನ್ನು ವಾರದೊಳಗೆ ಪರಿಶೀಲಿಸಿ ಆಯ್ಕೆ ಮಾಡಲಾಗುವುದು.
-ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತರು