Advertisement

ರಾಜ್ಯದ ಎಲ್ಲ ವಿವಿಗಳೂ ಹಗರಣಮಯ

12:07 PM Jan 18, 2017 | Team Udayavani |

ಬೆಂಗಳೂರು: ವಿಶ್ವವಿದ್ಯಾಲಯಗಳ ಸುಧಾರಣೆಗೆ ಮುಂದಾಗಿರುವ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಮೊದಲಿಗೆ ಅಲ್ಲಿ ನಡೆದಿರುವ ಹಗರಣಗಳ ಮೇಲೆ ಕಣ್ಣಿಟ್ಟಿದ್ದಾರೆ. ರಾಜ್ಯದ ಎಲ್ಲಾ 17 ವಿವಿಗಳಲ್ಲೂ  ಬೃಹತ್‌ ಹಗರಣಗಳು ನಡೆದಿರುವುದಾಗಿ ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ವಿವಿಗಳಲ್ಲಿ ಕಳೆದ 10 ವರ್ಷಗಳಿಂದ ನಡೆದಿರುವ ಹಗರಣಗಳ ತನಿಖೆಗೆ ಜಿಲ್ಲಾ ಮಟ್ಟದ ಉನ್ನತಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ. 

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಗಳಲ್ಲಿ ನಡೆದಿರುವ ಹಗರಣಗಳ ಕುರಿತ ಕಡತಗಳು ತಮ್ಮ ಬಳಿ ಇವೆ. ಎಲ್ಲಾ ವಿವಿಗಳಲ್ಲಿ ಒಂದಲ್ಲಾ ಒಂದು ಹಗರಣ ನಡೆದಿದೆ. ಹೀಗಾಗಿ ಪ್ರತಿ ವಿವಿಗಳಲ್ಲೂ  10 ವರ್ಷಗಳಿಂದ ನಡೆದಿರುವ ಹಗರಣಗಳ ತನಿಖೆಗೆ ತನಿಖಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಆಯಾ ಜಿಲ್ಲೆಯ ಜಿಲ್ಲಾಧಿಕಾರಿ, ಜಿಪಂ ಹಣಕಾಸು ಅಧಿಕಾರಿ ಮತ್ತು ಲೋಕೋಪಯೋಗಿ ಇಲಾಖೆಯ ಸೂಪರಿಂಟೆಂಡೆಂಟ್‌ ಎಂಜಿನಿಯರ್‌ಗಳು ತನಿಖಾಧಿಕಾರಿಗಳಾಗಿದ್ದು, ಹಗರಣದ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ ಎಂದರು.

ಎಲ್ಲಾ ವಿವಿಗಳು ಸೇರಿ ಸುಮಾರು 500 ಕೋಟಿ ರೂ.ಗೂ ಹೆಚ್ಚು ಮೊತ್ತದ ಹಗರಣ ನಡೆದಿರುವ ಸಾಧ್ಯತೆ ಇದೆ. ತನಿಖಾ ವರದಿ ಕೈಸೇರಿದ ಬಳಿಕವಷ್ಟೇ ನಿಖರ ಮಾಹಿತಿ ಲಭ್ಯವಾಗಲಿದೆ ಎಂದು ಸಚಿವರು ಸುದ್ದಿ ಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಉನ್ನತ ಶಿಕ್ಷಣ ಅಭಿವೃದ್ಧಿಗೆ ಕ್ರಿಯಾ ಯೋಜನೆ: ರಾಜ್ಯದಲ್ಲಿ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿಗಳ ಪ್ರಮಾಣ ಶೇ.27ರಷ್ಟಿದೆ.  ಉನ್ನತ ಶಿಕ್ಷಣದ ದಾಖಲಾತಿ ಪ್ರಮಾಣ ಹೆಚ್ಚಳ, ವಿದೇಶಿ ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣ ಕಲ್ಪಿಸಲು ಇನ್ನಷ್ಟು ಉನ್ನತ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಮತ್ತು ಗುಣಮಟ್ಟದ ಶಿಕ್ಷಣ, ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಕ್ರಿಯಾ ಯೋಜನೆ ಸಿದ್ಧಪಡಿಸಿದೆ. ಇದನ್ನು ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಲಿದ್ದಾರೆ ಎಂದರು.

ಕ್ಯಾಂಪಸ್‌ ಭೂಮಿ ಒತ್ತುವರಿ: ಬೆಂಗಳೂರು ವಿವಿ ಸೇರಿದಂತೆ ರಾಜ್ಯದ ಬಹುತೇಕ ವಿವಿಗಳ ಕ್ಯಾಂಪಸ್‌ ಭೂಮಿ ಒತ್ತುವರಿಯಾಗಿದ್ದು, ಅದರ ತೆರವಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಬೆಂ.ವಿವಿಯೊಂದರಲ್ಲೇ ನೂರು ಎಕರೆ ಭೂಮಿ ಒತ್ತುವರಿಯಾಗಿರುವ ಸಾಧ್ಯತೆ ಇದೆ. ಹಾಗಾಗಿ ಯಾವ್ಯಾವ ವಿವಿಗಳಲ್ಲಿ ಎಷ್ಟು ಭೂಮಿ ಒತ್ತುವರಿಯಾಗಿದೆ ಎಂದು ಪರಿ ಶೀಲಿಸಿ ಬಳಿಕ ತೆರವುಗೊಳಿಸಲಾಗುತ್ತದೆ ಎಂದು ಹೇಳಿದರು.

Advertisement

ಅತಿಥಿ ಉಪನ್ಯಾಸಕರಿಗೆ ವೇತನ: ಅತಿಥಿ ಉಪನ್ಯಾಸಕರಿಗೆ 8 ತಿಂಗಳಿಂದ ವೇತನ ನೀಡದಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ವೇತನಕ್ಕೆ ಸಂಬಂಧಿಸಿದಂತೆ ಸರ್ಕಾರ ಹಣ ಬಿಡುಗಡೆ ಮಾಡಿದೆ. ಆದರೆ, ಕಂಪ್ಯೂಟರ್‌ ಸಮಸ್ಯೆಯಿಂದ ಉಪ ನ್ಯಾಸಕರಿಗೆ ವಿತರಿಸಲು ಸಾಧ್ಯವಾಗಿಲ್ಲ.  ಶೀಘ್ರ ವೇತನ ಅತಿಥಿ ಉಪನ್ಯಾಸಕರ ಕೈಸೇ ರಲಿದೆ ಎಂದು ಭರವಸೆ ನೀಡಿದರು.

ವಿಶ್ವ ಬ್ಯಾಂಕ್‌ನಿಂದ 3500 ಕೋಟಿ ರೂ.ಸಾಲ: ರಾಜ್ಯದಲ್ಲಿ ಶಿಕ್ಷಣ ಗುಣಮಟ್ಟ ಹೆಚ್ಚಳ ಹಾಗೂ ಶಾಲಾ ಕಾಲೇಜುಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ವಿಶ್ವ ಬ್ಯಾಂಕ್‌ನಿಂದ ಸುಮಾರು 3500 ಕೋಟಿ ರೂ. ಸಾಲ ಪಡೆಯಲು ರಾಜ್ಯ ಸರ್ಕಾರ ಉದ್ದೇಶಿಸಿದೆ ಎಂದು ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next