Advertisement

ಸರ್ವಜ್ಞನ ಮೂರೇ ಸಾಲಲ್ಲಿದೆ ಎಲ್ಲ ಸಾರ: ಡಿಸಿ ರಮೇಶ್‌

01:07 PM Feb 21, 2017 | |

ದಾವಣಗೆರೆ: ಆಡು ಮುಟ್ಟದ ಸೊಪ್ಪಿಲ್ಲ ಹಾಗೆಯೇ ಸರ್ವಜ್ಞ ಮುಟ್ಟದ ವಲಯವಿಲ್ಲ. ಸಾವಿರಾರು ಪುಟಗಳ ಗ್ರಂಥ ಹೇಳುವ ಸಾರವನ್ನು ಮೂರು ಸಾಲಿನಲ್ಲಿ ತಿಳಿ ಹೇಳಿರುವ ಅಸಾಮಾನ್ಯ ವ್ಯಕ್ತಿ ಸರ್ವಜ್ಞ ಎಂದು ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಬಣ್ಣಿಸಿದ್ದಾರೆ. 

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಕುಂಬಾರರ ಸಂಘದ ಸಂಯುಕ್ತಾಶ್ರಯದಲ್ಲಿ ಸೋಮವಾರ ಕುವೆಂಪು ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಸರ್ವಜ್ಞ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಅವರು, ಸಮಾಜದ ಎಲ್ಲ ವಲಯಗಳ ಬಗ್ಗೆ ಸರ್ವಜ್ಞ ತಮ್ಮ ತ್ರಿಪದಿಗಳಲ್ಲಿ ಹೇಳಿದ್ದಾರೆ.

ಶಾಲೆಗೆ ಹೋಗದೆ, ಅಕ್ಷರ ಕಲಿಯದೆ ಸರ್ವಜ್ಞ ಆದ ರೀತಿಗೆ ಸರಿಸಾಟಿಯೇ ಇಲ್ಲ. ಮಹಾಭಾರತ, ರಾಮಾಯಣದಂತಹ ಗ್ರಂಥಗಳ ಸಾರವನ್ನು ತ್ರಿಪದಿಯಲ್ಲೇ ಹೇಳಿರುವ ಅವರು, ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಅಂದಿರುವುದು ಎಂದಿಗೂ ಪ್ರಸ್ತುತ ಎಂದರು. ಇಂದು ನಾವು ಅತ್ಯಾಧುನಿಕ ಯುಗದಲ್ಲಿದ್ದೇವೆ.

ಬೇರೆ ಗ್ರಹಗಳಿಗೆ ಉಪಗ್ರಹಗಳನ್ನು ಕಳುಹಿಸುತ್ತಿದ್ದೀವೆ. ಈ ಎಲ್ಲ ತಂತ್ರಜ್ಞಾನದಿಂದ ಎಲ್ಲಿಗೆ ತಲುಪಲಿದ್ದೇವೆ ಎಂಬುದು ಗೊತ್ತಿಲ್ಲ. ಆದರೆ ಎಲ್ಲದರ ಅಂತ್ಯ ಆಹಾರ ಸಂಪಾದನೆ. ಇದನ್ನೇ ಸರ್ವಜ್ಞ ಎಲ್ಲಕ್ಕೂ ಮಿಗಿಲಾಗಿರುವುದು ಮೇಟಿ ವಿದ್ಯೆ ಎನ್ನುವ ಮೂಲಕ ಹೇಳಿದ್ದಾರೆ ಎಂದು ತಿಳಿಸಿದರು. 

ಸರಳ ಭಾಷೆ, ಎಲ್ಲರ ಮನಮುಟ್ಟುವಂತೆ ಪರಿಣಾಮಕಾರಿಯಾಗಿ ಸರ್ವಜ್ಞ ಹೇಳಿರುವ ರೀತಿ ಎಂದಿಗೂ ಮಾದರಿಯಾಗಿದೆ. ಕೋಟಿ ಮಾತಿಗಿಂತ ಮಿತವಾಗಿ ಮಾತನಾಡುವ ಮೂಲಕ ಉತ್ತಮ ಕಾರ್ಯವೆಸಗಬೇಕೆನ್ನುವ ಅವರ ಮಾತು ಸರ್ವ ಕಾಲಕ್ಕೂ ಪ್ರಸ್ತುತವಾಗಿದ್ದು, ಇದಕ್ಕೆ ಪೂರಕವಾಗಿ ನಾವು ಕೆಲಸ ಮಾಡಬೇಕಿದೆ.

Advertisement

ಅವರ ಆಲೋಚನೆ ಮನನ ಮಾಡಿಕೊಂಡು, ಅವರು ತೋರಿರುವ ಪಥದಲ್ಲಿ ಸಾಗಬೇಕಿದೆ ಎಂದರು. ಹರಪನಹಳ್ಳಿ ಎಸ್‌ಯುಜೆಎಂ ಕಾಲೇಜಿನ ಉಪನ್ಯಾಸಕ ಎಚ್‌. ಮಲ್ಲಿಕಾರ್ಜುನ ಮಾತನಾಡಿ, ಸರ್ವಜ್ಞ ನಮ್ಮ ರಾಜ್ಯಕ್ಕೆ ಮಾತ್ರವಲ್ಲ ದೇಶಕ್ಕೇ ಮಾದರಿಯಾದ ಸಂತ. ಅವರು ರಚಿಸಿರುವ ಸಾವಿರಕ್ಕೂ ಹೆಚ್ಚು ತ್ರಿಪದಿಗಳಲ್ಲಿ ಸಾಮಾಜಿಕ ಕಳಕಳಿ, ಅಂಕು ಡೊಂಕುಗಳನ್ನು ತಿದ್ದುವ ಪ್ರಯತ್ನ ಮತ್ತು ನಿಜ ಪಥದ ಸೂಚನೆ ಕಾಣಬಹುದು.

ಎಲ್ಲರಿಗೂ ಅರ್ಥವಾಗುವಂತೆ ಹೇಳಿರುವ ಅವರ ಸರಳ ಭಾಷೆ ಮತ್ತು ರೀತಿ ಅದ್ಭುತ ಎಂದರು. 16ನೇ ಶತಮಾನದಲ್ಲಿ ಹಾವೇರಿ ಜಿಲ್ಲೆಯ ಮಾಸೂರು-ಅಂಬಲೂರು ಊರಿನ ಕುಂಬಾರ ಮಾಳಿ ಮತ್ತು ಮಲ್ಲರಸ ದಂಪತಿಯ ಪುತ್ರನೇ ಪುಷ್ಪದತ್ತ. ಕಾವ್ಯ ನಾಮ ಸರ್ವಜ್ಞ. ಸರ್ವಜ್ಞರ ಇತಿಹಾಸ ಕುತೂಹಲಕರವಾಗಿದೆ.

ಅವರನ್ನು ಜನತೆಯ ಕವಿ ಎಂದೆನ್ನಬಹುದು. ಅವರೊಬ್ಬ ನಿಷ್ಟುರವಾದಿಯಾಗಿದ್ದರೂ ವಿನೋದ, ಸಹಾನುಭೂತಿ ಮತ್ತು ಸರಳವಾಗಿ ಸಮಾಜ ಸುಧಾರಣೆ ಸಂದೇಶಗಳನ್ನು ತಮ್ಮ ತ್ರಿಪದಿಗಳಲ್ಲಿ ಸಾರಿದ್ದಾರೆ ಎಂದು ಹೇಳಿದರು. ತಾಯಿಯ ಮಹತ್ವ, ಡಾಂಭಿಕತೆ, ತೋರಿಕೆಯ ಭಕ್ತಿ, ವಿದ್ಯೆ, ಆರೋಗ್ಯ, ದುಶ್ಚಟದಿಂದ ದೂರವಿರುವ ಬಗ್ಗೆ ಹಾಗೂ ವ್ಯವಹಾರ ಕೌಶಲ್ಯ ಸೇರಿದಂತೆ ಸಮಾಜದ ಎಲ್ಲ ವಲಯಗಳ ಬಗ್ಗೆ ಸರ್ವಜ್ಞರು ಜನಸಾಮಾನ್ಯರ ಮನ ಮುಟ್ಟುವಂತೆ ಹೇಳಿದ್ದಾರೆ.

ಇಂತಹ ಮಾದರಿ ಸಂತರ ಆಲೋಚನೆಗಳನ್ನು ನಾವು ಅಳವಡಿಸಿಕೊಳ್ಳಬೇಕಿದೆ ಎಂದ ಅವರು ಇಂತಹವರ ಜಯಂತಿ ಕೇವಲ ಕೆಲ ಸಮುದಾಯಕ್ಕೆ ಸೀಮಿತವಾಗಬಾರದು ಎಂದು ತಿಳಿಸಿದರು.ದುಂದ್ಯಪ್ಪನವರು ರಚಿಸಿದ ಕುಲದೀಪಕರು ಎಂಬ ಪುಸ್ತಕವನ್ನು ಇದೇ ಸಂದರ್ಭದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಧಿಷ್ಠಾಧಿಕಾರಿ ಯಶೋಧ ವಂಟಿಗೋಡಿ ಬಿಡುಗಡೆಗೊಳಿಸಿದರು.

ಕುಂಬಾರ ಸಮಾಜದ ಅಧ್ಯಕ್ಷ ಬಸವರಾಜ ಕುಂಚೂರು ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್‌ ಬೆಕ್ಕೇರಿ ಸ್ವಾಗತಿಸಿದರು. ಮುದ್ದಣ್ಣ ನಾಗರಾಳ್‌ ನಿರೂಪಿಸಿದರು. ಕೆ.ಜಿ.ಲೋಕೋಶ್‌ ವಂದಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next