Advertisement

ಬಿಜೆಪಿಯಲ್ಲಿ ಜೈಲಿಗೆ ಹೋದವರೆಲ್ಲಾ ಚೌಕಿದಾರ್‌: ಸಿದ್ದರಾಮಯ್ಯ

12:24 AM Apr 10, 2019 | Lakshmi GovindaRaju |

ಬೆಂಗಳೂರು: ಬಿಜೆಪಿಯಲ್ಲಿ ಜೈಲಿಗೆ ಹೋದವರೆಲ್ಲರೂ ಚೌಕಿದಾರ್‌ ಎಂದು ಹೇಳಿಕೊಳ್ಳುತ್ತಿದ್ದಾರೆ. ನರೇಂದ್ರ ಮೋದಿ ಢೋಂಗಿ ಪ್ರಧಾನಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

Advertisement

ಬೆಂಗಳೂರು ದಕ್ಷಿಣ ಮೈತ್ರಿ ಪಕ್ಷಗಳ ಅಭ್ಯರ್ಥಿ ಬಿ.ಕೆ. ಹರಿಪ್ರಸಾದ್‌ ಅವರ ಪರವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಜೊತೆ ಜಂಟಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಚೌಕಿದಾರ್‌ ಎಂದು ಹೇಳುತ್ತಾರೆ.

ಬಡವರು, ದಲಿತರು, ನಿರ್ಗತಿಕರಿಗೆ ಅವರು ಚೌಕಿದಾರ್‌ ಆಗಿಲ್ಲ. ಅಂಬಾನಿ, ಅದಾನಿಗಳಿಗೆ ಚೌಕಿದಾರ್‌ ಆಗಿದ್ದಾರೆ. ಬಿಜೆಪಿಯಲ್ಲಿ ಜೈಲಿಗೆ ಹೋಗಿ ಬಂದಿರುವ ಯಡಿಯೂರಪ್ಪ, ಕಟ್ಟಾ ಸುಬ್ರಮಣ್ಯ ನಾಯ್ಡು ಎಲ್ಲರೂ ಚೌಕಿದಾರ್‌ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಆರೋಪಿಸಿದರು.

ಹೊಸ ಬಾಟಲಿಯಲ್ಲಿ ಹಳೆ ಮದ್ಯ: ಪ್ರಧಾನಿ ನರೇಂದ್ರ ಮೋದಿಗೆ ಸತ್ಯ ಹೇಳಿಯೇ ಗೊತ್ತಿಲ್ಲ. ಅವರು ದೇಶದ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಕಳೆದ ಇಪ್ಪತ್ತೈದು ವರ್ಷಗಳಿಂದ ರಾಮ ಮಂದಿರ ಕಟ್ಟುವುದಾಗಿ ಹೇಳುತ್ತಿದ್ದಾರೆ.

ಐದು ವರ್ಷ ಇವರೇ ಅಧಿಕಾರದಲ್ಲಿದ್ದರು. ಆಗ ಯಾಕೆ ರಾಮಮಂದಿರ ಕಟ್ಟಲಿಲ್ಲ. ಈಗ ಮತ್ತೆ ಪ್ರಣಾಳಿಕೆಯಲ್ಲಿ ರಾಮಮಂದಿರ ಕಟ್ಟುವುದಾಗಿ ಹೇಳಿದ್ದಾರೆ. ಬಿಜೆಪಿ ಪ್ರಣಾಳಿಕೆ ಹೊಸ ಬಾಟಲಿಯಲ್ಲಿ ಹಳೆ ಮದ್ಯ ಎನ್ನುವಂತಾಗಿದೆ ಎಂದು ವಾಗ್ಧಾಳಿ ನಡೆಸಿದರು.

Advertisement

ಕಳೆದ ಚುನಾವಣೆಯಲ್ಲಿ ಬದಲಾವಣೆಗಾಗಿ ಮೋದಿಗೆ ಮತ ಹಾಕಿದರು. ಆದರೆ, ಮನಮೋಹನ್‌ ಸಿಂಗ್‌ ದೇಶ ಕಂಡ ಪ್ರಾಮಾಣಿಕ ಪ್ರಧಾನಿ. ಅವರ ಮೇಲೆ ಸುಳ್ಳು ಆರೋಪ ಮಾಡಿದರು. ನಾನು ಐವತ್ತು ವರ್ಷದಿಂದ ರಾಜಕೀಯ ನೋಡುತ್ತಾ ಬಂದಿದ್ದೇನೆ.

ಹರಿಪ್ರಸಾದ್‌ ನನಗಿಂತ ಮೊದಲೇ ರಾಜಕೀಯಕ್ಕೆ ಬಂದವರು. ನಮ್ಮ ರಾಜ್ಯದ ಕನ್ನಡಿಗ ರೈತರ ಮಗ ದೇವೇಗೌಡರು ಪ್ರಧಾನ ಮಂತ್ರಿಯಾಗಿ ಕೆಲಸ ಮಾಡಿದರು ಎಂದು ದೇವೇಗೌಡರನ್ನು ಹೊಗಳಿದರು.

ಮನ್‌ಕಿ ಬಾತ್‌ನಿಂದ ಹೊಟ್ಟೆ ತುಂಬಲ್ಲ: ಬಿಜೆಪಿಯವರು ಸಂವಿಧಾನ ಬದಲಾಯಿಸುವುದು, ಮೀಸಲಾತಿ ರದ್ದು ಪಡಿಸುವುದು, 370 ನೇ ವಿಧಿ ರದ್ದು ಪಡಿಸುತ್ತೇವೆ ಎಂದು ಹೇಳುತ್ತಾರೆ. ಬಡವರಿಗೆ ಮೀಸಲಾತಿ ನೀಡುವುದು ಅವರಿಗೆ ಬೇಡ. ಅಂಬೇಡ್ಕರ್‌ ಬರೆದಿರುವ ಸಂವಿಧಾನ ಬಿಜೆಪಿಯವರಿಗೆ ಬೇಡವಾಗಿದೆ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಕಾಂಗ್ರೆಸ್‌ ಉಳಿಸಿ. ಮನ್‌ಕಿ ಬಾತ್‌ನಿಂದ ಬಡವರ ಹೊಟ್ಟೆ ತುಂಬುವುದಿಲ್ಲ ಎಂದು ಆರೋಪಿಸಿದರು.

ಬಿಜೆಪಿಗೆ ಬೆಂಬಲಿಸಿದರೆ ಬೆಂಕಿ ಇಡುತ್ತಾರೆ – ಕುಮಾರಸ್ವಾಮಿ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲಿಸಿದರೆ ಅವರು ಬೆಂಗಳೂರಿಗೆ ಬೆಂಕಿ ಇಡುತ್ತಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಬೆಂ. ದಕ್ಷಿಣ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್‌ ಪರ ಜಂಟಿ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶ ಉಳಿಯಬೇಕೆಂದರೆ ನರೇಂದ್ರ ಮೋದಿ ತೊಲಗಬೇಕು.

ಮೋದಿ ಪ್ರಧಾನಿಯಾಗಿ ಗ್ಯಾಸ್‌ ಬೆಲೆ 900 ದಾಟಿದೆ. ನೋಟ್‌ ಬ್ಯಾನ್‌ ಮಾಡಿ ಎಲ್ಲರಿಗೂ ಸಂಕಷ್ಟ ತಂದಿಟ್ಟರು ಎಂದು ವಾಗ್ಧಾಳಿ ನಡೆಸಿದರು. ಪ್ರಧಾನಿ ಮೋದಿ ಕಾಂಗ್ರೆಸ್‌ ಮೈತ್ರಿಕೂಟವನ್ನು ಲೇವಡಿ ಮಾಡುತ್ತಾರೆ. ಅವರೇ ಸ್ವತಂತ್ರವಾಗಿ ಅಧಿಕಾರ ಹಿಡಿಯಲು ಆಗುವುದಿಲ್ಲ ಎಂದು13 ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್‌ ಮೈತ್ರಿ ಪಕ್ಷಗಳ ಬಗ್ಗೆ ಮಾತನಾಡಲು ಇವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಪ್ರಧಾನಿ ರಾಜ್ಯಕ್ಕೆ ಬಂದು ಸುಳ್ಳಿನ ಕಂತೆಗಳನ್ನು ಇಟ್ಟು ಹೋಗಿದ್ದಾರೆ. ಅವರು ರಾಜ್ಯಕ್ಕೆ ಕೊಟ್ಟ ಅಭಿವೃದ್ಧಿಗೆ ಮತ ಕೊಡಿ ಎಂದು ಕೇಳಿಲ್ಲ. ಯೋಧರಿಗೆ, ರೈತರಿಗೆ ಮತ ನೀಡಿ ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಿರುವ ಬಗ್ಗೆ ಪ್ರಧಾನಿಯವರು ತಿಳಿದುಕೊಳ್ಳಲಿ. ರಾಜ್ಯ ಸರ್ಕಾರ 48 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ. ಪ್ರಧಾನಿಯವರು ನಯಾ ಪೈಸೆ ಸಾಲ ಮನ್ನಾ ಮಾಡಿಲ್ಲ ಎಂದು ಸುಳ್ಳು ಹೇಳಿದ್ದಾರೆ.

ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಹಣ ನೀಡಿಲ್ಲ. ಹಾಲಿಗೆ ಪ್ರೋತ್ಸಾಹ ಧನ, ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ರಾಜ್ಯ ಸರ್ಕಾರ ನೀಡಿದೆ. ಕೇಂದ್ರ ಸರ್ಕಾರದಿಂದ ಯಾವುದೇ ಅನುದಾನ ನೀಡಿಲ್ಲ. ಬೆಂಗಳೂರಿನಿಂದ ಮೂವರು ಬಿಜೆಪಿ ಸಂಸದರನ್ನು ಆಯ್ಕೆ ಮಾಡಲಾಗಿದೆ. ಅವರು ಬೆಂಗಳೂರಿಗೆ ಯಾವ ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next