Advertisement

ಸಂವಿಧಾನದಲ್ಲಿ ನಂಬಿಕೆ ಇಲ್ಲದವರಿಗಿಲ್ಲ ಆಳುವ ಹಕ್ಕು

01:13 PM Apr 17, 2019 | Team Udayavani |

ಹಾವೇರಿ: ಸಂವಿಧಾನ ಗಟ್ಟಿಗೊಳಿಸುವ ಕೆಲಸ ಕಾಂಗ್ರೆಸ್‌ ಮಾಡುತ್ತ ಬಂದಿದೆ. ಆದರೆ, ಬಿಜೆಪಿಯವರು ಸಂವಿಧಾನವನ್ನು ಅವಹೇಳನ ಮಾಡುವ ಕೆಲಸ ಮಾಡುತ್ತ ಬಂದಿದ್ದಾರೆ. ಸಂವಿಧಾನದಲ್ಲಿ ನಂಬಿಕೆ ಇಲ್ಲದವರಿಗೆ ದೇಶದ ಆಡಳಿತ ನಡೆಸುವ ಹಕ್ಕಿಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್‌. ಸುದರ್ಶನ ಹೇಳಿದರು.

Advertisement

ಮಂಗಳವಾರ ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಭಾವನಾತ್ಮಕ ಹೇಳಿಕೆಯಿಂದ ಜನರನ್ನು ಪದೇ ಪದೇ ಜನರನ್ನು ಬಿಜೆಪಿ ಮರುಳು ಮಾಡುತ್ತಿದೆ. ಇದು ಪ್ರತಿ ಸಲ ನಡೆಯುವುದಿಲ್ಲ ಎಂದರು.

ಭಯೋತ್ಪಾದನೆ ವಿಚಾರವನ್ನೇ ರಾಜಕೀಯವಾಗಿ ಲಾಭ ಪಡೆಯಲು ಬಿಜೆಪಿ ಹವಣಿಸುತ್ತಿದೆ. ಆದರೆ, ವಾಸ್ತವದಲ್ಲಿ ಕಂದಹಾರ ಪ್ರಕರಣ, ಸಂಸತ್‌ ದಾಳಿ, ಗೋದ್ರಾ ದಾಳಿ, ಅಕ್ಷರಧಾಮ ದಾಳಿ, ರಘುನಾಥ ದೇಗುಲ ದಾಳಿ ಸೇರಿದಂತೆ ಇನ್ನಿತರ ಭಯೋತ್ಪಾದನೆ ಕೃತ್ಯಗಳು ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ನಡೆದಿವೆ. ಇದನ್ನು ನೋಡಿದರೆ ಬಿಜೆಪಿಗೆ ಭಯೋತ್ಪಾದನೆ ತಡೆಯುವ ಸಾಮರ್ಥ್ಯ ಹಾಗೂ ಮನಸ್ಸಿಲ್ಲ ಎಂಬುದು ತಿಳಿಯುತ್ತದೆ ಎಂದರು.

ಕಾಂಗ್ರೆಸ್‌ ಸರ್ಕಾರದ ಆಡಳಿತ ಅವಧಿಯಲ್ಲಿ ಎರಡು ಮಹಾಯುದ್ಧಗಳು, ಆರು ಬಾರಿ ಸರ್ಜಿಕಲ್‌ ಸ್ಟ್ರೈಕ್‌ ನಡೆದಿವೆ. ಆದರೆ, ಕಾಂಗ್ರೆಸ್‌ ಯಾವತ್ತೂ ಆ ವಿಚಾರವನ್ನು ರಾಜಕೀಯವಾಗಿ ಬಳಸಿಕೊಂಡಿಲ್ಲ. ನಮ್ಮ ದೇಶದ ಸೈನ್ಯ ಬಲಿಷ್ಠವಾಗಿದ್ದು, ಯಾವತ್ತೂ ಅದು ಗೆಲ್ಲುತ್ತಲೇ ಬಂದಿದೆ. ಅದಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಕೀರ್ತಿ ನೆಹರು ಅವರಿಗೆ ಸಲ್ಲುತ್ತದೆ ಎಂದರು.

ಕಾಂಗ್ರೆಸ್‌ ಜನರ ಧ್ವನಿಯಾಗಿ ಕೆಲಸ ಮಾಡುತ್ತ ಬಂದಿದೆ. ಕಾಂಗ್ರೆಸ್‌ ಸಾಮಾಜಿಕ ಜವಾಬ್ದಾರಿ ಹೊಂದಿದ್ದು, ಅಧಿಕಾರ ಇದ್ದಾಗ ಅಭಿವೃದ್ಧಿಪರ ಆಲೋಚನೆ, ಅಧಿಕಾರ ಇಲ್ಲದಾಗ ದೇಶದ ಹಿತ, ಜನರ ಧ್ವನಿಯಾಗಿ ಕೆಲಸ ಮಾಡಿದೆ ಎಂದರು.

Advertisement

ಬಿಜೆಪಿಯವರು ಕಳೆದ ಚುನಾವಣೆಯಲ್ಲಿ ನೀಡಿದ ಭರವಸೆಗಳಲ್ಲಿ ಎಷ್ಟು ಈಡೇರಿಸಿದ್ದಾರೆಂಬ ಲೆಕ್ಕ ಜನರಿಗೆ ಕೊಡಬೇಕು. ಈ ಬಾರಿಯ ಬಿಜೆಪಿ ಪ್ರಣಾಳಿಕೆಯಲ್ಲಿ ಗಂಭೀರತೆ ಕಾಣುತ್ತಿಲ್ಲ. ಈ ಪ್ರಣಾಳಿಕೆ ಮೋದಿ ಹಾಗೂ ಆರ್‌ಎಸ್‌ಎಸ್‌ ಕೇಂದ್ರೀಕೃದೆ. ಆದರೆ, ಕಾಂಗ್ರೆಸ್‌ ಪ್ರಣಾಳಿಕೆಯನ್ನು ದೇಶದ 174 ಕಡೆಗಳಲ್ಲಿ ಸಭೆ ಮಾಡಿ ಜನರ ಅಭಿಪ್ರಾಯ ಪಡೆದು ಸಿದ್ಧಪಡಿಸಿದೆ. ಬಿಜೆಪಿ ಎಲ್ಲ ವರ್ಗದ ಜನರ ಹಿತ ಕಾಪಾಡುವಲ್ಲಿ ವಿಫಲವಾಗಿದ್ದು ಮತ ಕೇಳುವ ನೈತಿಕ ಹಕ್ಕಿಲ್ಲ ಎಂದರು.

ವಿಪ ಮಾಜಿ ಸಭಾಪತಿ ವೀರಣ್ಣ ಮತ್ತಿಗಟ್ಟಿ ಮಾತನಾಡಿ, ವಿವಿಧತೆಯಲ್ಲಿ ಏಕತೆ ನಮ್ಮ ದೇಶದ ಮೂಲಶಕ್ತಿ. ಇದಕ್ಕೆ ಧಕ್ಕೆ ತರುವ ಕೆಲಸ ಬಿಜೆಪಿ ಮಾಡುತ್ತಿದೆ. ಜಾತಿ, ಧರ್ಮದ ಹೆಸರಲ್ಲಿ ಜನರ ಭಾವನೆ ಕೆರಳಿಸಿ ಚುನಾವಣೆ ಎದುರಿಸುತ್ತಿರುವುದು ಖೇದಕರ ಸಂಗತಿ. ವಿದೇಶದಲ್ಲಿರುವ ಕಪ್ಪು ಹಣ ತಂದು ಬಡವರ ಖಾತೆಗೆ ಹಾಕುವುದಾಗಿ ಮೋದಿ ಹೇಳಿದ್ದರು. ಆದರೆ, ಕಪ್ಪು ಹಣ ಸಂಗ್ರಹಿಸಿದವರ ಪಟ್ಟಿಯಲ್ಲಿ
ಶೇ. 90ರಷ್ಟು ಹೆಸರು ಬಿಜೆಪಿಯವರದ್ದೇ ಆಗಿತ್ತು. ಹೀಗಾಗಿ ಅವರು ಆ ಕಾರ್ಯಕ್ರಮವನ್ನು ಅಲ್ಲಿಗೇ ಕೈಬಿಟ್ಟರು ಎಂದರು.

ಮಾಜಿ ಸಂಸದ ಐ.ಜಿ. ಸನದಿ, ಪ್ರಚಾರ ಸಮಿತಿ ಸದಸ್ಯ ಮಹೇಂದ್ರ ಸಿಂಗ್‌, ಉಪಾಧ್ಯಕ್ಷ ಸಂಜೀವಕುಮಾರ ನೀರಲಗಿ, ಜಿಲ್ಲಾ ಉಸ್ತುವಾರಿ ಜಯಸಿಂಹ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next