Advertisement

ರಾಜ್ಯಗಳೆಲ್ಲ ಭಾರತ ಮಾತೆ ಮಕ್ಕಳಿದ್ದಂತೆ: ಪ್ರೊ|ನಾಗವಾರ

04:31 PM May 03, 2022 | Team Udayavani |

ಅಂಕೋಲಾ: ಎರಡು ರಾಜ್ಯಗಳ ಗಡಿ ಭಾಗಗಳಲ್ಲಿ ಭಾಷೆಯ ಸಮಸ್ಯೆ ಬರುವುದು ಸಹಜ. ಎಲ್ಲ ರಾಜ್ಯಗಳೂ ಭಾರತ ಮಾತೆಯ ಮಕ್ಕಳಿದ್ದಂತೆ. ಎಲ್ಲ ಭಾಷಿಕರೂ ಒಂದಾಗಿ ಸಾಗುವುದು ಉತ್ತಮ ಎಂದು ಹಿರಿಯ ಸಾಹಿತಿ ಪ್ರೊ|ಕಾಳೇಗೌಡ ನಾಗವಾರ ಹೇಳಿದರು.

Advertisement

ಪಟ್ಟಣದ ನಾಡವರ ಸಭಾಭವನದಲ್ಲಿ ಸೋಮವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಡೆದ ಜಿಲ್ಲಾ ಬರಹಗಾರರ ಸಮ್ಮಿಲನ ಉದ್ಘಾಟಿಸಿ ಅವರು ಮಾತನಾಡಿದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಡಾ|ದಿನಕರ ದೇಸಾಯಿ, ಗೌರೀಶ ಕಾಯ್ಕಿಣಿ, ಜಯಂತ ಕಾಯ್ಕಿಣಿ, ವಿಷ್ಣು ನಾಯ್ಕ, ಶಾಂತಾರಾಮ ನಾಯಕರಂತಹ ಸಾಹಿತಿಗಳಿದ್ದರೂ ಜಿಲ್ಲೆಯಲ್ಲಾಗಲೀ ತಾಲೂಕಿನಲ್ಲಾಗಲೀ ಕನ್ನಡ ಭವನ ಇಲ್ಲದಿರುವದು ವಿಪರ್ಯಾಸ. ಡಾ| ದಿನಕರ ದೇಸಾಯಿಯವರ ಎಲ್ಲ ಬಡವರಿಗೂ ಶಿಕ್ಷಣ ದೊರೆಯಬೇಕು ಎನ್ನುವ ತತ್ವ ಇಡೀ ರಾಷ್ಟ್ರಕ್ಕೇ ಮಾದರಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ| ಮಹೇಶ ಜೋಶಿ ಮಾತನಾಡಿ, ಮಹಾರಾಷ್ಟ್ರದ ಅಜಿತ ಪವಾರ ಕರ್ನಾಟಕದ ಗಡಿ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಬೇಕೆಂದು ನೀಡಿದ ಹೇಳಿಕೆ ಖಂಡನೀಯ. ಸಹೃದಯಿ ಕನ್ನಡಿಗರಾದ ನಾವು ಭಾಷಾ ವಿಚಾರ ಸುಪ್ರೀಂ ಕೋರ್ಟ್ ನಲ್ಲಿರುವುದರಿಂದ ನ್ಯಾಯಾಂಗದ ಮೇಲೆ ಗೌರವವಿಟ್ಟು ಸುಮ್ಮನಿದ್ದೇವೆ. ವಿನಾಕಾರಣ ನಮ್ಮನ್ನು ಕೆಣಕಬೇಡಿ ಕನ್ನಡಿಗರಲ್ಲೂ ಆಂಜನೇಯನ ಶಕ್ತಿ ಇದೆ ಎಂಬುದನ್ನು ಯಾರೂ ಮರೆಯಬಾರದು ಎಂದರು.

ಉತ್ತರ ಕನ್ನಡ ಜಿಲ್ಲೆ ಭೌಗೋಳಿಕವಾಗಿ ವಿಸ್ತಾರವಾಗಿದೆ. ರಾಜಕೀಯವನ್ನು ಹೊರತುಪಡಿಸಿ ಬೆಳವಣಿಗೆ ದೃಷ್ಠಿಯಿಂದ ಜನರ ಅನುಕೂಲಕ್ಕಾಗಿ ಇನ್ನೊಂದು ಜಿಲ್ಲೆಯಾಗಬೇಕು ಎಂದರು.

Advertisement

ರಾಜ್ಯದಲ್ಲಿ ಕನ್ನಡ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಕನ್ನಡ ಶಾಲೆ ಉಳಿದರೆ ಕನ್ನಡ ಉಳಿಯುತ್ತದೆ. ಕನ್ನಡ ಶಾಲೆಗಳು ಮುಚ್ಚಿದರೆ ಕನ್ನಡ, ಕರ್ನಾಟಕ, ಸಾಹಿತ್ಯ ಪರಿಷತ್ತು ಎಲ್ಲವೂ ನಾಶವಾಗುತ್ತದೆ. ಇನ್ನಾದರೂ ಕನ್ನಡಿಗರು ಎಚ್ಚೆತ್ತುಕೊಳ್ಳಬೇಕು ಎಂದರು.

ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಬಿ.ಎನ್‌. ವಾಸರೆ ಪ್ರಾಸ್ತಾವಿಕ ಮಾತನಾಡಿ, ಜಿಲ್ಲೆಯಲ್ಲಿ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ಅವಕಾಶ ನೀಡಬೇಕು ಹಾಗೂ ಜಿಲ್ಲೆಯಲ್ಲಿ ಮತ್ತು ಪ್ರತೀ ತಾಲೂಕಿನಲ್ಲೂ ಸಾಹಿತ್ಯ ಭವನಗಳನ್ನು ನಿರ್ಮಿಸಬೇಕು ಎಂಬ ಬೇಡಿಕೆಯನ್ನಿಟ್ಟರು.

ವೇದಿಕೆಯಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಮಾಜಿ ಅಧ್ಯಕ್ಷ ಡಾ|ಎನ್‌. ಆರ್‌.ನಾಯಕ, ವಿಷ್ಣು ನಾಯ್ಕ, ಭಾಗೀರಥಿ ಹೆಗಡೆ, ಡಾ|ಝಮೀರುಲ್ಲಾ ಷರೀಫ್‌, ವಿ.ಗ.ನಾಯಕ, ಹಾಗೂ ಕ.ಸಾ.ಪ ರಾಜ್ಯ ಕಾರ್ಯದರ್ಶಿ ನೇ.ಭ.ರಾಮಲಿಂಗ ಶೆಟ್ಟಿ, ಡಾ|ಬಿ.ಎಂ.ಪಟೇಲಪಾಂಡು, ಕ.ಸಾ.ಪ ಜಿಲ್ಲಾ ಘಟಕದ ಕಾರ್ಯದರ್ಶಿ ಜಾರ್ಜ್‌ ಫರ್ನಾಂಡಿಸ, ಗೌರವಾಧ್ಯಕ್ಷ ಮರ್ತುಜಾ ಹುಸೇನ್‌ ಉಪಸ್ಥಿತರಿದ್ದರು. ಸುರೇಶ ನಾಯ್ಕ ನಿರೂಪಿಸಿದರು. ಪಿ.ಆರ್‌.ನಾಯ್ಕ ಸ್ವಾಗತಿಸಿದರು. ಕ.ಸಾ.ಪ ತಾಲೂಕು ಅಧ್ಯಕ್ಷ ಗೋಪಾಲಕೃಷ್ಣ ನಾಯಕ (ಕಾಂತ ಮಾಸ್ತರ) ವಂದಿಸಿದರು. ಅಕ್ಷರೋತ್ಸವ ಕಾರ್ಯಕ್ರಮದಲ್ಲಿ ಸಾಹಿತಿಗಳು, ಬರಹಗಾರರು ಇದ್ದರು.

ಉತ್ತರ ಕನ್ನಡ ಜಿಲ್ಲೆ ಇಬ್ಭಾಗವಾಗಲಿ

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯನ್ನು ಆಡಳಿತಾತ್ಮಕ ಮತ್ತು ಬೆಳವಣಿಗೆಯ ದೃಷ್ಟಿಯಿಂದ ಇಬ್ಭಾಗ ಮಾಡಬೇಕು ಎನ್ನುವ ಮೂಲಕ ಕಸಾಪ ರಾಜ್ಯಾಧ್ಯಕ್ಷ ಡಾ| ಮಹೇಶ ಜೋಶಿ ಜಿಲ್ಲೆ ಇಬ್ಭಾಗಕ್ಕೆ ಕಸಾಪದ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಬಹಿರಂಗ ಬೆಂಬಲ ನೀಡಿದರು.

ಅವರು ಸೋಮವಾರ ಇಲ್ಲಿಯ ನಾಡವರ ಸಭಾಭವನದಲ್ಲಿ ಉ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಏರ್ಪಡಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಬರೆಹಗಾರರ ಸಮ್ಮಿಲನ ಅಕ್ಷರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಉತ್ತರ ಕನ್ನಡ ಜಿಲ್ಲೆ ಭೌಗೋಳಿಕವಾಗಿ ವಿಸ್ತಾರವಾಗಿದ್ದು, ಕರಾವಳಿ, ಮಲೆನಾಡು, ಬಯಲುಸೀಮೆಯನ್ನು ಹೊಂದಿದ ಜಿಲ್ಲೆ. ಜಿಲ್ಲಾ ಕೇಂದ್ರಕ್ಕೆ ಆಡಳಿತಾತ್ಮಕ ಕೆಲಸಕ್ಕೆ ಬರಲು ಜನರು ಹೆಣಗಾಡುತ್ತಿದ್ದಾರೆ. ಅಭಿವೃದ್ಧಿಯಲ್ಲೂ ಹಿಂದುಳಿದಿದೆ. ಸಮಗ್ರ ಧಾರವಾಡ ಜಿಲ್ಲೆ ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಾಗಿ ಒಡೆದ ಮೇಲೆ ಮೂರು ಜಿಲ್ಲೆಗಳು ಬೆಳೆದಿವೆ. ಅಭಿವೃದ್ಧಿ ಕಾಣುತ್ತಿವೆ. ಇಂತಹ ವ್ಯವಸ್ಥೆ ಉ.ಕ ಜಿಲ್ಲೆಯಲ್ಲೂ ಆಗಬೇಕು. ಇದರಲ್ಲಿ ರಾಜಕೀಯ ಇಲ್ಲವೇ ಇಲ್ಲ. ಜಿಲ್ಲೆ ಇಬ್ಭಾಗಕ್ಕೆ ಕಸಾಪ ಬೆಂಬಲ ಸೂಚಿಸುವುದಲ್ಲದೆ ಒತ್ತಾಯ ಮಾಡುತ್ತದೆ ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next