ಕೇಂದ್ರೀಯ ಪ್ರತ್ಯಕ್ಷ ತೆರಿಗೆ ಮಂಡಳಿ ವಾರ್ಷಿಕ ತೆರಿಗೆ ಸಂಗ್ರಹದ ಅಂಕಿಅಂಶವನ್ನು ಇಂದು ಬಿಡುಗಡೆಗೊಳಿಸಿದೆ. ಮಹಾರಾಷ್ಟ್ರ, ದಿಲ್ಲಿ ಮತ್ತು ಕರ್ನಾಟಕ ಈ ಮೂರು ರಾಜ್ಯಗಳಿಂದ ಒಟ್ಟು ಶೇ. 61 ಪ್ರತ್ಯಕ್ಷ ತೆರಿಗೆ ಸಂಗ್ರಹವಾಗಿದೆ ಎಂದು ಈ ದತ್ತಾಂಶ ತಿಳಿಸುತ್ತದೆ. ತಮಿಳುನಾಡು ಮತ್ತು ಗುಜರಾತನ್ನು ಈ ಪಟ್ಟಿಗೆ ಸೇರಿಸಿಕೊಂಡರೆ ಈ ಐದು ರಾಜ್ಯಗಳಿಂದ ಒಟ್ಟು ಪ್ರತ್ಯಕ್ಷ ತೆರಿಗೆ ಸಂಗ್ರಹ ಶೇ.71 ಆಗುತ್ತದೆ. ಅಂದರೆ ಕಂದಾಯ ಸಂಗ್ರಹದಲ್ಲಿ ಕೇವಲ ಬೆರಳೆಣಿಕೆಯಷ್ಟು ರಾಜ್ಯಗಳು ಮಾತ್ರ ನಿರೀಕ್ಷಿತ ಗುರಿಗಿಂತಲೂ ಮುಂದಿವೆ ಹಾಗೂ ಇದೇ ವೇಳೆ ಉಳಿದೆಲ್ಲ ರಾಜ್ಯಗಳು ಈ ಗುರಿಯನ್ನು ತಲುಪಲು ಹೆಣಗಾಡುತ್ತಿರುವುದು ಇದರಿಂದ ಸ್ಪಷ್ಟವಾಗುತ್ತದೆ.
ಜನರು ಪಾವತಿಸುವ ಆದಾಯ ತೆರಿಗೆ ಮತ್ತು ಕಾರ್ಪೋರೇಟ್ ಕಂಪೆನಿಗಳು ಕಟ್ಟಿದ ತೆರಿಗೆಯೇ ಪ್ರತ್ಯಕ್ಷ ತೆರಿಗೆ. ಹೆಚ್ಚು ತೆರಿಗೆ ಸಂಗ್ರಹವಾಗಿದೆ ಎಂದರೆ ಜನರು ಮತ್ತು ಕಾರ್ಪೋರೇಟ್ ಸಂಸ್ಥೆಗಳು ಹೆಚ್ಚು ವರಮಾನ ಗಳಿಸಿದ್ದಾರೆ ಎಂದು ಅರ್ಥ. ಅರ್ಥಾತ್ ಈ ರಾಜ್ಯಗಳಲ್ಲಿ ಉತ್ತಮ ಉದ್ಯೋಗ ಅವಕಾಶಗಳಿವೆ ಮತ್ತು ಉದ್ಯಮ ಸ್ನೇಹಿ ವಾತಾವರಣ ಇದೆ ಎಂದಾಗುತ್ತದೆ. ಯಾವ ರಾಜ್ಯದಲ್ಲಿ ತೆರಿಗೆ ಸಂಗ್ರಹ ಅಧಿಕವಿರುತ್ತದೋ ಆ ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗಳು ಕೂಡ ಬಿರುಸಾಗಿರುತ್ತವೆ. ಆದರೆ ಇಂಥ ರಾಜ್ಯಗಳ ಸಂಖ್ಯೆ ಬಹಳ ಕಡಿಮೆ ಇರುವುದು ನಮ್ಮ ಒಕ್ಕೂಟ ವ್ಯವಸ್ಥೆಯಲ್ಲಿ ಸಂಪನ್ಮೂಲ ಸಮಾನವಾಗಿ ಹಂಚಿಕೆಯಾಗಿಲ್ಲ ಎನ್ನುವುದನ್ನು ತಿಳಿಸುತ್ತದೆ.
ಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯಗಳಿಗೆ ಕೇಂದ್ರದಿಂದ ಪ್ರತಿಯಾಗಿ ಅಷ್ಟೇ ಪ್ರಯೋಜನಗಳು ಸಿಗುವ ಖಾತರಿಯಿಲ್ಲ. ಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯಗಳಲ್ಲಿ ಈ ಕುರಿತಾದ ಅಸಮಾಧಾನ ಸದಾ ಹೊಗೆಯಾಡುತ್ತಿರುತ್ತದೆ. ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಂಡರೆ ಪ್ರತ್ಯಕ್ಷ ತೆರಿಗೆ ಸಂಗ್ರಹದಲ್ಲಿ ತೃತೀಯ ಸ್ಥಾನದಲ್ಲಿದ್ದರೂ ಕೇಂದ್ರದಿಂದ ನೆರೆ ಪರಿಹಾರಕ್ಕೆ ಸಾಕಷ್ಟು ನೆರವು ಸಿಗಲಿಲ್ಲ ಎಂಬ ಆಕ್ರೋಶ ಈಗಾಗಲೇ ವ್ಯಕ್ತವಾಗಿದೆ.
ಜನಸಂಖ್ಯೆ ಹೆಚ್ಚು ಇರುವ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ರಾಜಸ್ಥಾನ ಮತ್ತು ಮಧ್ಯ ಪ್ರದೇಶ ತೆರಿಗೆ ಸಂಗ್ರಹದಲ್ಲಿ ಬಹಳ ಕಳಪೆ ದಾಖಲೆ ಹೊಂದಿವೆ. ತೃತೀಯ ಅತಿ ಹೆಚ್ಚು ಜನಸಂಖ್ಯೆಯಿರುವ ರಾಜ್ಯವಾದ ಬಿಹಾರದ ತೆರಿಗೆ ಸಂಗ್ರಹ ಬರೀ ಶೇ.0.65 ಮಾತ್ರ. ಆದರೆ ಕೇಂದ್ರದ ಸಂಪನ್ಮೂಲ ಹಂಚಿಕೆಯಲ್ಲಿ ದೊಡ್ಡ ಪಾಲು ಈ ರಾಜ್ಯಗಳಿಗೆ ಹೋಗುತ್ತದೆ. ನಿರಂತರವಾಗಿ ಈ ಅಸಮಾನತೆ ಮುಂದುವರಿದುಕೊಂಡು ಬಂದಿದೆ. ಈ ರಾಜ್ಯಗಳಲ್ಲಿ ಔಪಚಾರಿಕ ವಲಯದ ಉದ್ಯೋಗ ಮತ್ತು ಕಾರ್ಪೋರೇಟ್ ಕಂಪೆನಿಗಳ ಪ್ರಸ್ತುತಿ ಕಡಿಮೆಯಿದೆ ಎನ್ನುವುದನ್ನು ಕಡಿಮೆ ತೆರಿಗೆ ಸಂಗ್ರಹ ತೋರಿಸಿಕೊಡುತ್ತದೆ.
ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ 2024-25ರಲ್ಲಿ ದೇಶವನ್ನು 5 ಲಕ್ಷ ಕೋಟಿ ರೂಪಾಯಿಯ ಆರ್ಥಿಕ ಶಕ್ತಿಯಾಗಿ ರೂಪಿಸುವ ಘೋಷಣೆ ಮಾಡಿದ್ದಾರೆ. ಇದರ ಬೆನ್ನಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತನ್ನ ರಾಜ್ಯವನ್ನು 1 ಲಕ್ಷ ಕೋ. ರೂ. ಆರ್ಥಿಕತೆಯ ರಾಜ್ಯ ಮಾಡುವುದಾಗಿ ಹೇಳಿದ್ದಾರೆ. ಇಂಥ ಮಹತ್ವಾಕಾಂಕ್ಷೆಯ ಗುರಿಯನ್ನು ಇಟ್ಟುಕೊಳ್ಳುವುದು ಒಳ್ಳೆಯದೇ. ಗುರಿ ತಲುಪಲು ಸಾಧ್ಯವಾದರೆ ದೇಶ ಸಮೃದ್ಧಿಯಾಗುವುದರಲ್ಲಿ ಸಂಶಯವಿಲ್ಲ. ಆದರೆ ವಾಸ್ತವ ಸ್ಥಿತಿ ಮಾತ್ರ ಸಂಪೂರ್ಣ ಭಿನ್ನವಾಗಿದೆ. ಆರ್ಥಿಕ ಸಮೃದ್ಧಿ ಎನ್ನುವುದು ಕೆಲವೇ ರಾಜ್ಯಗಳಲ್ಲಿ ಕೇಂದ್ರೀಕೃತವಾಗಿದ್ದು, ಉಳಿದ ರಾಜ್ಯಗಳು ಇನ್ನೂ ಬಡತನ ರೇಖೆಯಲ್ಲೇ ಇವೆ. ಈ ಅಸಮಾನತೆಯನ್ನು ಹೋಗಲಾಡಿಸದೆ 5 ಲಕ್ಷ ಕೋ. ರೂ. ಗುರಿಯನ್ನು ಸಾಧಿಸಿಕೊಳ್ಳುವುದು ಹೇಗೆ? ಆರ್ಥಿಕತೆಯನ್ನು 5 ಲಕ್ಷ ಕೋ. ರೂ.ಗೆ ತಲುಪಿಸುವ ಜೊತೆಗೆ ಎಲ್ಲಾ ರಾಜ್ಯಗಳು ಸಮೃದ್ಧಿಯಾಗುವಂಥ ನೀತಿಗಳನ್ನು ರೂಪಿಸುವ ಅಗತ್ಯ ಇದೆ.