Advertisement

ಎಲ್ಲ ರಾಜ್ಯಗಳು ಪಾನಮುಕ್ತವಾದರೆ ಸ್ವಸ್ಥ ಸಮಾಜ: ಜಯರಾಂ ಭಟ್‌

11:23 AM Oct 05, 2017 | |

ಮಂಗಳೂರು: ಮದ್ಯ ಸೇವನೆಯಿಂದ  ಕುಟುಂಬಗಳ ನೆಮ್ಮದಿ ಹಾಳಾಗುತ್ತದೆ. ವ್ಯಸನಿಯ ಆರೋಗ್ಯವೂ ಕೆಡುತ್ತದೆ. ದೇಶದ ಎಲ್ಲ ರಾಜ್ಯ ಗಳು ಪಾನಮುಕ್ತವಾದರೆ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯವಾದೀತು ಎಂದು ಕರ್ಣಾಟಕ ಬ್ಯಾಂಕ್‌ನ ಅಧ್ಯಕ್ಷ ಪಿ. ಜಯರಾಮ ಭಟ್‌ ಅಭಿಪ್ರಾಯಪಟ್ಟರು.

Advertisement

ಮಂಗಳೂರು ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ನಗರದ ಪುರಭವನದಲ್ಲಿ ಬುಧವಾರ ನಡೆದ ಜನಜಾಗೃತಿ ಸಮಾವೇಶ ಹಾಗೂ ಪಾನ ಮುಕ್ತರ ಅಭಿನಂದನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಜನಜಾಗೃತಿ ವೇದಿಕೆಯು ಈಗಾ ಗಲೇ ಅನೇಕ ಶಿಬಿರಗಳ ಮೂಲಕ 77,000ಕ್ಕೂ ಹೆಚ್ಚು ಮಂದಿಯ ಮನ ಪರಿವರ್ತಿಸಿ ವ್ಯಸನದಿಂದ ಮುಕ್ತಗೊಳಿಸಿದೆ. ಅವರ ಬಾಳಿಗೆ ಬೆಳಕು ನೀಡುವ ವೇದಿಕೆ ಹಮ್ಮಿಕೊಂಡ ಕಾರ್ಯ ಶ್ಲಾಘನೀಯ ಎಂದರು. 

ಮುಖ್ಯ ಅತಿಥಿ, ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ಮಾತನಾಡಿ, ದೇಶದ ಕೆಲ ರಾಜ್ಯಗಳಲ್ಲಿ ಈಗಾಗಲೇ ಮದ್ಯಪಾನವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕರ್ನಾಟಕ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ಭಾಗಶಃ ನಿಷೇಧಗೊಂಡಿದೆ ಎಂದು ಹೇಳಿದರು. ಸಚಿವರಾದ ಬಿ. ರಮಾನಾಥ ರೈ ಮತ್ತು  ಯು.ಟಿ. ಖಾದರ್‌ ಮಾತನಾಡಿದರು. ವರ್ಣಜಾಗೃತಿ ಚಿತ್ರ ಅನಾವರಣ
ಮಾದಕ ದ್ರವ್ಯಗಳನ್ನು ವಿರೋಧಿ ಸುವ ವರ್ಣಜಾಗೃತಿ ಚಿತ್ರವನ್ನು ದ.ಕ. ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್‌ ಅನಾವರಣಗೊಳಿಸಿದರು. ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಸತೀಶ್‌ ಹೊನ್ನವಳ್ಳಿ ಅಧ್ಯಕ್ಷತೆ ವಹಿಸಿದ್ದರು. ಕೆ.ಎಸ್‌. ಹೆಗ್ಡೆ ವೈದ್ಯಕೀಯ ಮಹಾವಿದ್ಯಾಲಯದ ಡೀನ್‌ ಡಾ| ಸತೀಶ್‌ ಕುಮಾರ್‌ ಭಂಡಾರಿ, ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆಯ ದ.ಕ. ಹಾಗೂ ಉಡುಪಿ ಜಿಲ್ಲಾಧ್ಯಕ್ಷ ಮುಹಮ್ಮದ್‌ ಇಸ್ಮಾಯಿಲ್‌, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಚಂದ್ರಶೇಖರ್‌ ನೆಲ್ಯಾಡಿ, ಧರ್ಮಸ್ಥಳ ಗ್ರಾ.ಯೋ. ಯೋಜನಾಧಿ ಕಾರಿ ಉಮರಬ್ಬ, ಶ್ರೀಧರ್‌ ರಾವ್‌ ಉಪಸ್ಥಿತರಿದ್ದರು. 

ಮದ್ಯಪಾನ ತ್ಯಜಿಸಿದವರನ್ನು ಸಾಂಕೇತಿಕವಾಗಿ ಅಭಿನಂದಿಸಲಾಯಿತು.  ವೇದಿಕೆಯ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ ಆಶಯ ಭಾಷಣ ಮಾಡಿದರು. ವೇದಿಕೆಯ ಮಂಗಳೂರು ತಾಲೂಕು ಅಧ್ಯಕ್ಷ ಮಹಾಬಲ ಚೌಟ ಸ್ವಾಗತಿಸಿದರು. ದಯಾನಂದ ಕತ್ತಲಸಾರ್‌ ಅವರು  ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next