ಬೆಂಗಳೂರು: ರಾಜ್ಯ ಸರಕಾರ ರೂಪಿಸಿರುವ ಸಾಮೂಹಿಕ ಸರಳ ವಿವಾಹ ‘ಸಪ್ತಪದಿ’ ಬಗ್ಗೆ ಪ್ರಚಾರ ಕೈಗೊಳ್ಳಲು ಪ್ರಚಾರ ರಥ ಸಿದ್ಧಪಡಿಸಲಾಗಿದೆ. ರಾಜ್ಯದ ಹತ್ತು ಪ್ರಮುಖ ದೇವಾಲಯಗಳಿಂದ ಹೊರಡಲಿರುವ ರಥಯಾತ್ರೆಯು ಯೋಜನೆ ಕುರಿತು ಪ್ರಚಾರ ನಡೆಸಲಿದೆ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. 13ರಂದು ಕೊಲ್ಲೂರು ಮೂಕಾಂಬಿಕಾ ದೇವಾಸ್ಥಾನದಲ್ಲಿ ಪ್ರಚಾರ ಯಾತ್ರೆ ಉದ್ಘಾಟನೆಯಾಗಲಿದೆ. ವಾರ್ತಾ ಇಲಾಖೆ ಸಹಯೋಗದೊಂದಿಗೆ ರಾಜ್ಯಾದ್ಯಂತ 750 ಪ್ರಚಾರ ಫಲಕಗಳ ಮೂಲಕ ಮಾಹಿತಿ ನೀಡಲಾಗುವುದು ಎಂದು ಹೇಳಿದರು.
ರಾಜ್ಯದ ಆಯ್ದ 100 ಮುಜರಾಯಿ ದೇವಾಲಯಗಳಲ್ಲಿ ಎಪ್ರಿಲ್ 26ರಂದು ಸಪ್ತಪದಿ ಸಾಮೂಹಿಕ ವಿವಾಹ ನಡೆಯಲಿದ್ದು ಸಾಮೂಹಿಕ ವಿವಾಹಕ್ಕೆ ಸಂಬಂಧಿಸಿದಂತೆ ಟೋಲ್ ಫ್ರೀ ದೂರವಾಣಿ 18004256654 ಮೂಲಕ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು.
ಯಾವ ಜಿಲ್ಲೆಗಳಲ್ಲಿ ಆದಾಯ ಇರುವ ಎ ವರ್ಗದ ದೇವಾಲಯಗಳು ಇಲ್ಲವೋ ಅಂತಹ ಜಿಲ್ಲೆಗಳಲ್ಲಿ ಬಿ ಅಥವಾ ಸಿ ದರ್ಜೆ ದೇವಸ್ಥಾನ ಆಯ್ಕೆ ಮಾಡಿಕೊಂಡು ಸಾಮೂಹಿಕ ವಿವಾಹ ಏರ್ಪಡಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ಈಗಾಗಲೇ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಬಳ್ಳಾಪುರ, ಮಡಿಕೇರಿ, ಕೊಡಗು ಜಿಲ್ಲೆಗಳಿಗೆ ಭೇಟಿ ನೀಡಿ ಸಾಮೂಹಿಕ ವಿವಾಹ ಏರ್ಪಡಿಸಲು ನಿರ್ದೇಶನ ನೀಡಿದ್ದೇನೆ ಎಂದವರು ತಿಳಿಸಿದರು.
ರಾಜ್ಯಾದ್ಯಂತ ಮುಂದಿನ 2-3 ತಿಂಗಳಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕಾಗಿ ವಿಶೇಷ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗುವುದು ಎಂದು ಹೇಳಿದರು.