Advertisement
ಮೂಲತಃ ಕಾಸರಗೋಡಿನವರೇ ಆಗಿದ್ದು ಪ್ರಸ್ತುತ ಉಡುಪಿ ಜಿಲ್ಲೆಯ ಕಾಂತಾವರದಲ್ಲಿ ನೆಲೆಸಿರುವ ಖ್ಯಾತ ವೈದ್ಯ, ಸಾಹಿತಿ, ಸಂಘಟಕ, ಕನ್ನಡಪರ ಚಿಂತಕ ಡಾ| ನಾ. ಮೊಗಸಾಲೆಯವರು ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಹಿರಿಯ ಕವಿ, ಅಂಕಣಗಾರ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ| ದೊಡ್ಡರಂಗೇ ಗೌಡರು ಸಮ್ಮೇಳನವನ್ನು ಉದ್ಘಾಟಿಸಲಿರುವರು. ಸಂಸದ ಪಿ. ಕರುಣಾಕರನ್, ಶಾಸಕರಾದ ಎನ್.ಎ. ನೆಲ್ಲಿಕುನ್ನು, ಕೆ. ಕುಂಞಿರಾಮನ್, ಪಿ.ಬಿ. ಅಬ್ದುಲ್ ರಜಾಕ್, ವಿಮರ್ಶಕ ಎಸ್. ಆರ್. ವಿಜಯಶಂಕರ್, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಪಿ.ಎಸ್. ಪುಣಿಂಚತ್ತಾಯ, ಹರಿಕೃಷ್ಣ ಪುನರೂರು ಮೊದಲಾದ ಗಣ್ಯರಲ್ಲದೆ ಜಿಲ್ಲಾ ಪಂಚಾಯತ್ ಮೊದಲಾದ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಕಾಸರಗೋಡು ಮತ್ತು ನೆರೆಯ ಜಿಲ್ಲೆಯ ಗಣ್ಯರು, ಸಾಹಿತಿಗಳು ಭಾಗವಹಿಸಲಿರುವರು.
Related Articles
ಸಾಮಾನ್ಯವಾಗಿ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಷೆ, ಸಾಹಿತ್ಯ ವಿಚಾರಗಳಿಗೆ ಪ್ರಾಧಾನ್ಯವಿದ್ದರೂ ಕರಾವಳಿಯ ಗಂಡು ಕಲೆಯಾದ ಯಕ್ಷಗಾನಕ್ಕೆ ಪ್ರಾತಿನಿಧ್ಯವಿರುವುದಿಲ್ಲ ಎಂಬ ಕೊರಗು ಯಕ್ಷ ಪ್ರಿಯರನ್ನು ಕಾಡುತ್ತದೆ. ಆದರೆ ಕಾಸರಗೋಡು ಜಿಲ್ಲೆಯಲ್ಲಿ ನಡೆಯುವ ಕ.ಸಾ.ಪ. ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಎಂದಿಗೂ ಯಕ್ಷಗಾನಕ್ಕೆ ಪ್ರಾತಿನಿಧ್ಯವಿರುತ್ತದೆ. ಅಧ್ಯಕ್ಷರಾದ ಎಸ್.ವಿ. ಭಟ್ ಅವರು ಸ್ವತಃ ಯಕ್ಷಗಾನ ಪ್ರಿಯರಾಗಿ ರುವುದು ಮಾತ್ರವಲ್ಲ ಯಕ್ಷಗಾನದ ತವರು ನೆಲವಾದ ಕಾಸರಗೋಡಿನಲ್ಲಿ ಈ ಮಹಾನ್ ಕಲೆಯ ಅಭಿಮಾನಿಗಳ ಸಂಖ್ಯೆ ಅಪಾರವಾಗಿರುವುದೂ ಇದಕ್ಕೆ ಕಾರಣ.
Advertisement
ಕಾಸರಗೋಡಿನಲ್ಲಿ ಕನ್ನಡದ ಬೆಳವಣಿಗೆಗೆ ಯಕ್ಷಗಾನದ ಕೊಡುಗೆ ಅಪಾರ. ಕನ್ನಡ, ಮಲಯಾಳ, ತುಳು, ಮರಾಠಿ, ಕೊಂಕಣಿ ಮೊದಲಾದ ಬೇರೆ ಬೇರೆ ಮನೆಮಾತುಗಳ ಜನರು ಪಂಡಿತ ಪಾವರರೆನ್ನದೆ ಜಾತಿ ಮತ ಅಂತಸ್ತಿನ ಭೇದವಿಲ್ಲದೆ ಯಕ್ಷಗಾನದತ್ತ ಆಕರ್ಷಿತರಾಗಿದ್ದಾರೆ. ಯಕ್ಷಗಾನದ ಅಭಿರುಚಿ ಕನ್ನಡ ಕಲಿಕೆಯನ್ನು ಉತ್ತೇಜಿಸಿದೆಯಲ್ಲದೆ ಮಾತು ಬರಹದಲ್ಲಿ ಭಾಷಾಶುದ್ದಿಗೂ ಕೊಡುಗೆ ನೀಡಿದೆ. ಪಾರ್ತಿಸುಬ್ಬ, ಕುರಿಯ, ಕೀರಿಕ್ಕಾಡು, ಶೇಣಿ, ಕುಂಬಳೆ ಮೊದಲಾದ ಮಹಾನ್ ಯಕ್ಷ ಕಲಾವಿದರು ಜನ್ಮ ತಳೆದ ನಾಡು ಕಾಸರಗೋಡು. 11ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯುವ ಮುಳ್ಳೇರಿಯಾ ಹಾಗೂ ಅಕ್ಕಪಕ್ಕದ ಊರುಗಳಾದ ಆದೂರು, ಕುಂಟಾರು, ಮುಂಡೋಳು, ಬೆಳ್ಳೂರು, ಮುಳಿಯಾರು ಮೊದಲಾದವು ಅಪಾರ ಯಕ್ಷಪ್ರೇಮಿಗಳನ್ನೂ ಯಕ್ಷಸಂಘಟನೆಗಳನ್ನೂ ಹೊಂದಿವೆ.
ಮುಳ್ಳೇರಿಯಾದ ಹಿರಿಮೆಹನ್ನೊಂದನೆಯ ಕಾಸರಗೋಡು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿರುವ ಮುಳ್ಳೇರಿಯಾವನ್ನೊಳಗೊಂಡ ಕಾರಡ್ಕ ಗ್ರಾಮ ಸಾಹಿತ್ಯ ಸಂಸ್ಕೃತಿಯ ನೆಲೆವೀಡು. ಖ್ಯಾತ ಕವಿಗಳಾದ ಡಾ| ಕೆ.ವಿ. ತಿರುಮಲೇಶ್, ವೇಣುಗೋಪಾಲ ಕಾಸರಗೋಡು, ಶ್ರೀಕೃಷ್ಣ ಚೆನ್ನಾಂಗೋಡು, ಸಂಶೋಧಕ ಡಾ| ವೆಂಕಟರಾಜ ಪುಣಿಂಚತ್ತಾಯ, ಕಲಾವಿದ ಪಿ.ಎಸ್. ಪುಣಿಂಚತ್ತಾಯ ಮೊದಲಾದವರು ಊರಿನ ಕೀರ್ತಿಯನ್ನು ಬೆಳಗಿಸಿದ್ದಾರೆ. ಮುಂಡೋಳು, ದೇಲಂಪಾಡಿ, ಬೆಳ್ಳೂರು, ನಾರಂಪಾಡಿ, ಆದೂರು, ಅಡೂರು. ಕುಂಟಾರು ಮೊದಲಾದ ಸನಿಹದ ದೇವಸ್ಥಾನಗಳು, ಮಸೀದಿಗಳು, ಇಗರ್ಜಿಗಳು ಊರಿನ ಪಾವಿತ್ರ್ಯವನ್ನು ಹೆಚ್ಚಿಸಿವೆ. ಕನ್ನಡ, ಮಲಯಾಳ, ತುಳು, ಮರಾಠಿ, ಕೊಂಕಣಿ, ಕರಾಡ, ಹವ್ಯಕ, ಮಾಪಿಳ್ಳ ಮೊದಲಾದ ಬಹುಭಾಷೆಗಳು ಈ ನಾಡಿನ ಹಿರಿಮೆಯನ್ನು ಹೆಚ್ಚಿಸಿವೆ. ಹಲವಾರು ವಿದ್ಯಾಸಂಸ್ಥೆಗಳು ಈ ಪರಿಸರದಲ್ಲಿವೆ. ಸಂಗೀತ, ನಾಟಕ, ನೃತ್ಯ, ಯಕ್ಷಗಾನ ಕಲೆಗಳಿಗೆ ಈ ಊರು ಹೆಸರಾಗಿದೆ. ಕಾಂಚನಗಂಗಾ ಕಲಾಗ್ರಾಮ. ಕಲ್ಲೇರಿ ಜಲಪಾತ, ಪಯಸ್ವಿನೀ ನದಿ ಮೊದಲಾದ ಪ್ರೇಕ್ಷಣೀಯ ಸ್ಥಳಗಳು ಇಲ್ಲಿವೆ. ಅಕ್ಷರಶಃ ಯಕ್ಷ ಹಬ್ಬ
ಈ ಬಾರಿಯ ಸಮ್ಮೇಳನ ಅಕ್ಷರಶಃ ಯಕ್ಷಹಬ್ಬವಾಗಲಿದ್ದು ಎರಡು ಯಕ್ಷಗಾನ ಪ್ರದರ್ಶನಗಳಲ್ಲದೆ ಪ್ರಸಿದ್ಧ ಯಕ್ಷ ಕಲಾವಿದರಿಂದ ತೆಂಕುತಿಟ್ಟಿನ ಯಕ್ಷ ಹಾಸ್ಯಲಹರಿ ಎಂಬ ವಿನೂತನ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಲಿದೆ. ಮೊದಲದಿನ ಅಪರಾಹ್ನ ಬಡಗುತಿಟ್ಟಿನ ಪ್ರಸಿದ್ಧ ಮೇಳವಾದ ಸಾಲಿಗ್ರಾಮ ಮೇಳದವರಿಂದ “ಭಕ್ತ ಚಂದ್ರಹಾಸ’ ಎಂಬ ಪ್ರಸಂಗ ಹಾಗೂ ಎರಡನೇ ದಿನವೂ ಅಪರಾಹ್ನ ಯಕ್ಷ ಹಾಸ್ಯಲಹರಿಯ ಹೊರತಾಗಿ ಕಾಸರಗೋಡಿನ ಪ್ರತಿಭಾವಂತ ಕಲಾವಿದರಿಂದ “ಮಹಿಷಾಸುರ ವಧೆ’ ಎಂಬ ತೆಂಕುತಿಟ್ಟಿನ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಮುಳ್ಳೇರಿಯಾದಲ್ಲಿ ಇದು ಎರಡನೆ ಬಾರಿ
ಮುಳ್ಳೇರಿಯಾ ಸಾಹಿತ್ಯ ಸಮ್ಮೇಳನಕ್ಕೆ ಆತಿಥ್ಯ ವಹಿಸುತ್ತಿರುವುದು ಇದು ಎರಡನೇ ಬಾರಿ. ಹಿಂದೆ 2006ರಲ್ಲಿ ಮೂರನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಡಾ| ರಮಾನಂದ ಬನಾರಿಯವರ ಅಧ್ಯಕ್ಷತೆಯಲ್ಲಿ ನಡೆದಿದ್ದು ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿತ್ತು. ಮಲಯಾಳ ಭಾಷೆ ಹೆಚ್ಚಾಗಿ ಪ್ರಚಲಿತವಿರುವಂತೆ ಕಾಣುತ್ತಿರುವ ಈ ಪ್ರದೇಶದಲ್ಲಿ ಸಮ್ಮೇಳನ ಯಶಸ್ವಿಯಾಗಬಹುದೇ ಎಂಬ ಶಂಕೆಗೆ ಇದು ಉತ್ತರವಾಗಿತ್ತು. ಆಗ ಐ.ವಿ. ಭಟ್ ಅವರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. ಅಂದು ಕಾರ್ಯದರ್ಶಿಯಾಗಿದ್ದ ಎಸ್.ವಿ. ಭಟ್ ಅವರು ಜಿಲ್ಲೆಯ ಪ್ರತಿಯೊಂದು ಶಾಲೆಗಳಿಗೂ ತೆರಳಿ ಸಮ್ಮೇಳನದ ಯಶಸ್ಸಿಗಾಗಿ ದುಡಿದಿದ್ದರು. ಮೇಲುನೋಟಕ್ಕೆ ಮಲಯಾಳಮಯವಾದ ವಾಣಿಜ್ಯನಗರಿಯಂತಿದ್ದರೂ ಮುಳ್ಳೇರಿಯಾ ಪೇಟೆಯ ನಾಡಿಮಿಡಿತವನ್ನು ಅರಿತಿರುವ ಎಸ್.ವಿ. ಭಟ್ ಈ ಭಾಗದ ಜನರಿಗೆ ಸುಪ್ತವಾದ ಸಾಂಸ್ಕೃತಿಕ ಒಲವಿದೆ, ಸಮ್ಮೇಳನದಲ್ಲಿ ನಿರೀಕ್ಷೆಗೂ ಮೀರಿ ಜನಸೇರುವ ಮೂಲಕ ಇದು ಪ್ರತಿಬಿಂಬಗೊಳ್ಳಲಿದೆ ಎಂಬ ವಿಶ್ವಾಸವನ್ನು ಪ್ರಕಟಿಸುತ್ತಿದ್ದಾರೆ.