Advertisement

ಚುನಾವಣೆಗೆ ನಕ್ಸಲ್‌ ದಾಳಿ ಭೀತಿ

04:25 AM Nov 12, 2018 | Team Udayavani |

ರಾಯ್‌ಪುರ: ಛತ್ತೀಸ್‌ಗಢದಲ್ಲಿ ಸೋಮವಾರ ನಕ್ಸಲ್‌ ಪ್ರಭಾವಿ ಜಿಲ್ಲೆಗಳ 18 ಕ್ಷೇತ್ರಗಳಿಗೆ ನಡೆಯಲಿರುವ ಮೊದಲ ಹಂತದ ಮತದಾನಕ್ಕೆ ಮುನ್ನವೇ ಕಂಕೇರ್‌ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ನಕ್ಸಲ್‌ ದಾಳಿ ನಡೆದಿದೆ. ಎರಡು ಘಟನೆಗಳಲ್ಲಿ 7 ಸುಧಾರಿತ ಸ್ಫೋಟಕಗಳನ್ನು ಸಿಡಿಸಲಾಗಿದೆ.

Advertisement

ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರ ಜತೆಗಿನ ಎನ್‌ಕೌಂಟರ್‌ನಲ್ಲಿ ಬಿಎಸ್‌ಎಫ್ನ ಸಬ್‌ ಇನ್ಸ್‌ ಪೆಕ್ಟರ್‌ ಮಹೇಂದ್ರ ಸಿಂಗ್‌ ಹುತಾತ್ಮರಾಗಿದ್ದಾರೆ. ಕಂಕೇರ್‌ ಜಿಲ್ಲೆಯಲ್ಲಿ 6 ಸುಧಾರಿತ ಸ್ಫೋಟಕಗಳನ್ನು ಸ್ಫೋಟಿಸಲಾಗಿದೆ. ಎನ್‌ಕೌಂಟರ್‌ನಲ್ಲಿ ಓರ್ವ ನಕ್ಸಲ್‌ನನ್ನು ಹೊಡೆದುರುಳಿಸಲಾಗಿದೆ. ಮೊದಲ ಹಂತದ ಮತದಾನಕ್ಕಾಗಿ ಒಂದು ಲಕ್ಷ ಭದ್ರತಾ ಸಿಬಂದಿಯನ್ನು ನೇಮಿಸಲಾಗಿದೆ. ಅಲ್ಲದೆ, ಮಾನವ ರಹಿತ ಡ್ರೋಣ್‌ಗಳನ್ನು ಇದೇ ಮೊದಲ ಬಾರಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಅವುಗಳಿಂದ ದೊರೆತ ಮಾಹಿತಿಯನ್ನು ಆಧರಿಸಿ ಭದ್ರತಾ ಪಡೆ ನಿಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕಂಕೇರ್‌ ಜಿಲ್ಲೆಯಲ್ಲಿ ನಡೆದ ಮೊದಲ ಪ್ರಕರಣದಲ್ಲಿ 7 ಐಇಡಿಗಳನ್ನು ನಕ್ಸಲರು ಸ್ಫೋಟಿಸಿದ್ದಾರೆ. ಕಟ್ಟಕಲ್‌ ಮತ್ತು ಗೋಮಿ ಗ್ರಾಮಗಳ ನಡುವಿನ ದಟ್ಟ ಅಡವಿಯಲ್ಲಿ ಈ ಘಟನೆ ಸಂಭವಿಸಿದೆ. ಗಾಯಗೊಂಡಿದ್ದ ಸಬ್‌-ಇನ್ಸ್‌ಪೆಕ್ಟರ್‌ ಮಹೇಂದ್ರ ಸಿಂಗ್‌ ಆಸ್ಪತ್ರೆಗೆ ಸಾಗಿಸುವ ವೇಳೆ ಕೊನೆಯುಸಿರೆಳೆದಿದ್ದಾರೆ. ಒಂದೇ ಸ್ಥಳದಲ್ಲೇ 6 ಸ್ಫೋಟ ಸಂಭವಿಸಿದ್ದು, ಸ್ಥಳಕ್ಕೆ ಹೆಚ್ಚುವರಿ ಪೊಲೀಸ್‌ ಮತ್ತು ಇತರ ಪಡೆಗಳು ಧಾವಿಸಿ ಪರಿಶೀಲಿಸಿವೆ ಎಂದು ರಾಯ್‌ಪುರ ವಲಯದ ಐಜಿಪಿ ದೀಪಾಂಶು ಕಬ್ರಾ ಹೇಳಿದ್ದಾರೆ. ಕಳೆದ 15 ದಿನಗಳಲ್ಲಿ ನಕ್ಸಲರಿಂದ ನಡೆದ ನಾಲ್ಕನೇ ಸ್ಫೋಟ ಇದಾಗಿದೆ.

2ನೇ ಘಟನೆ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ಬೇದ್ರೆ ಅರಣ್ಯ ಪ್ರದೇಶದಲ್ಲಿ ವಿಶೇಷ ಕಾರ್ಯ ಪಡೆ (ಎಸ್‌ಐಟಿ) ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಸಮವಸ್ತ್ರಧಾರಿ ನಕ್ಸಲ್‌ನನ್ನು ಸಾಯಿಸಲಾಗಿದೆ ಮತ್ತು ಒಬ್ಬನನ್ನು ವಶಕ್ಕೆ ಪಡೆಯಲಾಗಿದೆ. ಈ ಸ್ಥಳದಲ್ಲಿ ಒಂದು ರೈಫ‌ಲ್‌ ಸಹಿತ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

ಭೀತಿ ನಡುವೆ ಇಂದು ಮತದಾನ
ನಕ್ಸಲ್‌ ಪೀಡಿತ ಪ್ರದೇಶಗಳ 18 ಕ್ಷೇತ್ರಗಳಿಗೆ ಸೋಮವಾರ ಮತದಾನ ನಡೆಯಲಿದೆ. ಸಿಎಂ ಡಾ| ರಮಣ್‌ ಸಿಂಗ್‌ ಮತ್ತು ಅವರ ಸಂಪುಟದ ಇಬ್ಬರು ಸಚಿವರು ಸೇರಿ 190 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸಿಎಂ ವಿರುದ್ಧ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ದಿ| ಅಟಲ್‌ ಬಿಹಾರಿ ವಾಜಪೇಯಿ ಸಂಬಂಧಿ ಕರುಣಾ ಶುಕ್ಲ ಸ್ಪರ್ಧಿಸಿದ್ದಾರೆ. ನ.20ರಂದು 2ನೇ ಹಂತದ ಮತದಾನ ನಡೆಯಲಿದೆ. ಬಿಎಸ್‌ಎಫ್, ಇಂಡೋ-ಟಿಬೆಟನ್‌ ಬೋರ್ಡರ್‌ ಫೋರ್ಸ್‌, ಸಿಆರ್‌ಪಿಎಫ್, ಬಿಎಎಸ್‌ಎಫ್ ಯೋಧರನ್ನು ನಿಯೋಜಿಸಲಾಗಿದೆ. ರಸ್ತೆಗಳಲ್ಲಿ ಸ್ಫೋಟಕಗಳನ್ನು ಹುದುಗಿಸಿದ್ದರೆ ಅದನ್ನು ಪತ್ತೆಹಚ್ಚಲು ‘ರೋಡ್‌ ಓಪನಿಂಗ್‌ ಪಾರ್ಟಿ’ ಎಂಬ ವಿಶೇಷ ಪಡೆ ರಚಿಸಲಾಗಿದೆ. 

Advertisement

ಬಿಎಸ್‌ಎಫ್, ಐಟಿಬಿಪಿ, ಸಿಆರ್‌ಪಿಎಫ್ ಸಿಬಂದಿ ಅಲ್ಲದೆ, ಇತರ ರಾಜ್ಯಗಳಿಂದಲೂ ಹೆಚ್ಚುವರಿ ಪೊಲೀಸ್‌ ಮತ್ತು ಭದ್ರತಾ ಸಿಬಂದಿ ಕರೆಸಿಕೊಂಡಿದ್ದೇವೆ. ನಕ್ಸಲ್‌ ಪೀಡಿತ ಪ್ರದೇಶಗಳ ಕೆಲ ಪೋಲಿಂಗ್‌ ಬೂತ್‌ಗಳನ್ನು ವರ್ಗಾಯಿಸಿದ್ದೇವೆ. ಒಟ್ಟು 1 ಲಕ್ಷ ಮಂದಿ ಭದ್ರತೆಗಿದ್ದಾರೆ.
– ಎ.ಎಂ.ಅವಸ್ಥಿ  ನಕ್ಸಲ್‌ ವಿರೋಧಿ ಪಡೆ ವಿಶೇಷ ಡಿಐಜಿ

Advertisement

Udayavani is now on Telegram. Click here to join our channel and stay updated with the latest news.

Next