Advertisement
ಶಾಲೆಯಲ್ಲಿ ಸದ್ಯದ ದಾಖಲಾತಿ ಪ್ರಕಾರ ಎಂಟನೇ ತರಗತಿಯಲ್ಲಿ 156 ಮಕ್ಕಳು, ಒಂಬತ್ತನೇ ತರಗತಿಯಲ್ಲಿ 195 ಮಕ್ಕಳು, ಹತ್ತನೇ ತರಗತಿಗೆ 197 ಮಕ್ಕಳು ದಾಖಲಾಗಿದ್ದು, ಒಟ್ಟು 550ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ದಾಖಲಾಗುವ ಮಕ್ಕಳ ಸಂಖ್ಯೆ ಇನ್ನೂ ಏರಿಕೆಯಾಗುವ ಸಾಧ್ಯತೆಯೂ ಹೆಚ್ಚಿದೆ. ಶಾಲೆಯಲ್ಲಿ ಒಟ್ಟು 17 ಜನ ಶಿಕ್ಷಕರಿದ್ದಾರೆ. 12 ಸುಸಜ್ಜಿತ ಕೊಠಡಿಗಳಿವೆ. ಸಕಲ ಸೌಲಭ್ಯಗಳಿವೆ. ಶಾಲಾ ಆವರಣದಲ್ಲಿನ ಸುಂದರ ಕೈತೋಟ ಇಡೀ ಶಾಲೆಗೆ ಮೆರಗು ತಂದಿದೆ. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಇಲ್ಲಿ ಹೆಚ್ಚು ಒತ್ತು ನೀಡಲಾಗುತ್ತಿದೆ. ಶಾಲೆಯಲ್ಲಿ ಪರಿಣಿತ ಬೋಧಕ ವರ್ಗದವರಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜತೆಗೆ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಶಿಕ್ಷಣ ಜತೆಗೆ ಪಠ್ಯೇತರ ಶೈಕ್ಷಣಿಕ ಚಟುವಟಿಕೆ, ಗುಣಮಟ್ಟದ ಶಿಕ್ಷಣ ನೀಡಲು ಆದ್ಯತೆ ನೀಡಲಾಗುತ್ತಿದೆ. ಶಿಕ್ಷಕರ-ಪಾಲಕರ ನಡುವೆ ಉತ್ತಮ ಸಂಬಂಧವಿದೆ. ಶಾಲೆಯ ಅಭಿವೃದ್ಧಿಯಲ್ಲಿ ಎಲ್ಲ ಶಿಕ್ಷಕರು ಹೆಚ್ಚು ಆಸಕ್ತಿ ವಹಿಸುತ್ತಾರೆ. ಶಾಲೆಯಲ್ಲಿನ ಉತ್ತಮವಾದ ಶೈಕ್ಷಣಿಕ ವಾತಾವರಣ ಕಂಡು ಗ್ರಾಮಸ್ಥರು ಹಾಗೂ ಪಕ್ಕದ ಗ್ರಾಮಸ್ಥರು ತಮ್ಮ ಮಕ್ಕಳನ್ನು ಇದೇ ಶಾಲೆಗೆ ಕಳುಹಿಸಲು ಮುಂದಾಗಿದ್ದಾರೆ.
Related Articles
Advertisement
ಅಮೃತ ಯೋಜನೆಗೆ ಆಯ್ಕೆ: ಸೂಳೇಭಾವಿ ಸರ್ಕಾರಿ ಪ್ರೌಢಶಾಲೆ ತಾಲೂಕಿನಲ್ಲಿಯೇ ಅತಿ ಹೆಚ್ಚು ದಾಖಲಾತಿ ಹೊಂದಿರುವ ಶಾಲೆಯಾಗಿದೆ. ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ. ಇದರಿಂದ ಪ್ರತಿವರ್ಷ ಉತ್ತಮ ಫಲಿತಾಂಶ ಪಡೆಯುತ್ತದೆ. ಶಾಲೆಯ ಪ್ರಗತಿ ಮತ್ತು ಮಕ್ಕಳ ದಾಖಲಾತಿ ಅನುಗುಣವಾಗಿ ಶಾಲೆ ಈ ಬಾರಿ ಅಮೃತ ಯೋಜನೆಗೆ ಆಯ್ಕೆಯಾಗಿದೆ. ಈ ಯೋಜನೆಯಡಿ ಶಾಲೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಹೈಟೆಕ್ ಬೋಧನಾ ಕೊಠಡಿ ನಿರ್ಮಿಸಲಾಗುತ್ತದೆ. ಶಾಲೆಯ ಮೈದಾನ ಅಭಿವೃದ್ಧಿಗೆ ಗ್ರಾಪಂ ಆಡಳಿತ ಮಂಡಳಿ ಮುಂದಾಗಿದೆ. ಇದಕ್ಕೆ ಶಿಕ್ಷಕರು ಮತ್ತು ಎಸ್‌ಡಿಎಂಸಿ ಅವರು ಸಾಥ್ ನೀಡಿದ್ದಾರೆ.
ಶಾಲಾ ಅಭಿವೃದ್ಧಿಗೆ ಪಣ: ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆ ಅಭಿವೃದ್ಧಿಗೆ ಗ್ರಾಮದ ಹಿರಿಯ ರಾಜಕಾರಣಿಗಳು, ಯುವ ನಾಯಕರು ಮತ್ತು ಶಿಕ್ಷಣ ಪ್ರೇಮಿಗಳು, ಹಳೆಯ ವಿದ್ಯಾರ್ಥಿಗಳು, ನಿವೃತ್ತ ಶಿಕ್ಷಕರು ಶಾಲಾ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡಿದ್ದಾರೆ. ದಾನಿಗಳಿಂದ ಸಂಗ್ರಹಿಸಿದ ಹಣದಿಂದ ಶಾಲೆಯಲ್ಲಿರುವ ಬಡ-ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವರ್ಷಕೊಮ್ಮೆ ಸನ್ಮಾನ ಮಾಡಿ ಪ್ರೋತ್ಸಾಹಧನ ನೀಡಲಾಗುತ್ತದೆ. ಸರ್ಕಾರದ ಎಲ್ಲ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದು ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ಇದಕ್ಕೆ ಗ್ರಾಮಸ್ಥರು ಸಾಥ್ ನೀಡಿದ್ದಾರೆ. ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣದ ಅವಶ್ಯಕತೆ ಕುರಿತು ಜಾಗೃತಿ ಮೂಡಿಸಿ ಶಾಲೆಗೆ ಕರೆತಂದು ಅವರ ಸರ್ವತೋಮುಖ ಅಭಿವೃದ್ಧಿಗೆ ಶಾಲೆಯಲ್ಲಿ ಪಠ್ಯ-ಪಠ್ಯೇತರ ಚಟುವಟಿಕೆಗಳನ್ನು ಹಮ್ಮಿಕೊಂಡು ನಿರಂತರವಾಗಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ. ಇದರಿಂದ ನಮ್ಮ ಶಾಲೆ ಹೆಚ್ಚು ದಾಖಲಾತಿ ಹೊಂದಿದೆ ಮತ್ತು ಪ್ರತಿವರ್ಷ ಉತ್ತಮ ಫಲಿತಾಂಶ ಪಡೆಯುತ್ತಿದೆ ಎನ್ನುತ್ತಾರೆ ಶಾಲೆ ಗಣಿತ ಶಿಕ್ಷಕ ಮಹಾದೇವ ಬಸರಕೋಡ.
ಸಮರ್ಪಣ ಭಾವದ ಶಿಕ್ಷಕ ವೃಂದ ಮತ್ತು ಶಾಲೆ ಶೈಕ್ಷಣಿಕ ಅಭಿವೃದ್ಧಿಗೆ ಬೆನ್ನೆಲುಬಾಗಿ ನಿಂತಿರುವ ಎಸ್‌ಡಿಎಂಸಿ, ಗ್ರಾಮದ ಜನಪ್ರತಿನಿಧಿಗಳ ಸಹಕಾರದಿಂದ ಮಕ್ಕಳಿಗೆ ಶಾಲೆಯಲ್ಲಿ ಉತ್ತಮವಾದ ಕಲಿಕಾ ವಾತಾವರಣ ನಿರ್ಮಿಸಲಾಗಿದೆ. ಇದರಿಂದ ಮಕ್ಕಳಿಗೆ ಸರ್ವತೋಮುಖ ಶಿಕ್ಷಣ ನೀಡಲು ಸಾಧ್ಯವಾಗಿದೆ. -ಎಚ್.ಎಂ. ಹಾಲನ್ನವರ, ಪ್ರಭಾರಿ ಉಪ ಪ್ರಾಚಾರ್ಯ
–ಎಚ್.ಎಚ್.ಬೇಪಾರಿ