Advertisement

‘ಸರ್ವತೋಮುಖ ಬೆಳವಣಿಗೆ ಶಿಕ್ಷಣದ ಗುರಿ’

12:27 PM Aug 17, 2018 | Team Udayavani |

ಕೊಡಿಯಾಲಬೈಲ್‌ : ಓದು ಮಾತ್ರವಲ್ಲದೇ ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಸಾಧಿಸುವುದು ಶಿಕ್ಷಣದ ನಿಜವಾದ ಗುರಿ. ವಿದ್ಯಾರ್ಥಿಗಳ ಕೌಶಲಾಭಿವೃದ್ಧಿಯಿಂದ ವ್ಯಕ್ತಿ, ಶಿಕ್ಷಣ ಸಂಸ್ಥೆ ಹಾಗೂ ದೇಶಕ್ಕೂ ಲಾಭವಿದೆ ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಪ್ರಭಾರ ಉಪಕುಲಪತಿ ಡಾ| ಕಿಶೋರ್‌ ಕುಮಾರ್‌ ಸಿ.ಕೆ. ಹೇಳಿದರು.

Advertisement

ಮಂಗಳೂರು ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ ಮತ್ತು ಬೆಸೆಂಟ್‌ ಮಹಿಳಾ ಕಾಲೇಜಿನ ಆಶ್ರಯದಲ್ಲಿ ನಡೆದ ವಿಶ್ವ ವಿದ್ಯಾಲಯ ಮಟ್ಟದ ಅಂತರ್‌ ಕಾಲೇಜು ಸಂಗೀತ ಸ್ಪರ್ಧೆ ‘ನಾದತರಂಗ- 2018’ ಉದ್ಘಾಟಿಸಿ ಅವರು ಗುರುವಾರ ಮಾತನಾಡಿದರು. ಕಾಲೇಜುಗಳು ಪಠ್ಯೇತರ, ಪಠ್ಯ ಪೂರಕ ಚಟುವಟಿಕೆ ಹಾಗೂ ಕೌಶಲವರ್ಧನೆಗೆ ಮಹತ್ವ ನೀಡಬೇಕು ಎಂದರು.

ಸಾಧನೆಗೆ ಪೂರಕ
ಮಂಗಳೂರು ವಿಶ್ವವಿದ್ಯಾಲಯವು ಕೌಶಲ, ಶಿಕ್ಷಣ, ಕ್ರೀಡೆ ಹಾಗೂ ಲಲಿತಕಲೆಗಳ ಪ್ರೋತ್ಸಾಹಕ್ಕಾಗಿ ವಿವಿಧ ಯೋಜನೆಗಳನ್ನು ಹಾಕಿಕೊಂಡಿದೆ. ಕ್ರೀಡಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಸಾಧನೆಗೆ ಪೂರಕವಾಗಿ ಕ್ರೀಡಾ ಪರಿಕರ, ತರಬೇತಿ ಹಾಗೂ ಕ್ರೀಡಾಳುಗಳುಗಳಿಗೆ ಪ್ರಯಾಣದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಲಲಿತ ಕಲೆಗಳಲ್ಲಿ ಆಸಕ್ತಿ ಮೂಡಿಸಲು ‘ನಾದತರಂಗ’ದಂತಹ ಕಾರ್ಯಕ್ರಮಗಳನ್ನು ಪ್ರತಿ ವರ್ಷವೂ ಕಾಲೇಜು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳುತ್ತಿದೆ ಎಂದರು.

ಕಾಲೇಜಿನ ಸಂಚಾಲಕ ಕೆ. ದೇವಾನಂದ ಪೈ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ| ಸತೀಶ್‌ ಕುಮಾರ್‌ ಶೆಟ್ಟಿ ಪಿ. ಮಾತನಾಡಿದರು. ಕಾಲೇಜಿನ ಲಲಿತಾ ಕಲಾ ಸಂಘದ ಸಂಚಾಲಕಿ ಅರುಣಾ ಸುರೇಶ್‌ ಪ್ರಸ್ತಾವನೆಗೈದರು. ಉಪನ್ಯಾಸಕಿಯರಾದ ರೇಷ್ಮಾ ವಂದಿಸಿದರು. ರಂಜಿನಿ ಶೆಟ್ಟಿ ನಿರೂಪಿಸಿದರು. 

ವಿವಿಧ ಸ್ಪರ್ಧೆ
ಎರಡು ದಿನಗಳ ನಾದತರಂಗ ಕಾರ್ಯಕ್ರಮದಲ್ಲಿ ವೈಯಕ್ತಿಕ ಮತ್ತು ಸಮೂಹ ವಿಭಾಗದಲ್ಲಿ ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ಸ್ವರವಾದ್ಯ, ಶಾಸ್ತ್ರೀಯ ತಾಳವಾದ್ಯ, ಲಘು ಸಂಗೀತ, ಪಾಶ್ಚಾತ್ಯ ಸಂಗೀತ, ದೇಶಭಕ್ತಿಗೀತೆ, ಜಾನಪದ ಗೀತೆ ಮತ್ತು ಜನಪದ ಸಂಗೀತ ಮೇಳ ಮುಂತಾದ ಸಂಗೀತ ಸ್ಪರ್ಧೆಗಳು ನಡೆಯಲಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next