Advertisement

ರಸ್ತೆಗಳೆಲ್ಲ ಹೈಟೆಕ್‌; ಚರಂಡಿ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆಯಿತ್ತು !

10:34 PM Oct 01, 2019 | Team Udayavani |

ಮಹಾನಗರ: ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹೊಂದಿಕೊಂಡ ಕಂಕನಾಡಿ ವಾರ್ಡ್‌ ಪಾಲಿಕೆ ವ್ಯಾಪ್ತಿಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಾರ್ಡ್‌ಗಳ ಪೈಕಿ ಒಂದು. ಸುಮಾರು 35 ಕಿ.ಮೀ. ವ್ಯಾಪ್ತಿಯಿರುವ ಕಂಕನಾಡಿಯು ಪಾಲಿಕೆಯ 49ನೇ ವಾರ್ಡ್‌. ಹಿಂದೆ ಇದೂ ಗ್ರಾಮೀಣ ಭಾಗವಾಗಿತ್ತು. ಸುಮಾರು 20 ವರ್ಷಗಳ ಹಿಂದೆ ಪಾಲಿಕೆ ವ್ಯಾಪ್ತಿಗೆ ಸೇರಿಸಲಾಯಿತು. ಬಳಿಕ ಇಲ್ಲಿ ಕಾಂಗ್ರೆಸ್‌ನ ಸೇಸಮ್ಮ, ವಿಶ್ವನಾಥ, ಬಿಜೆಪಿಯ ಭಾಸ್ಕರ್‌ಚಂದ್ರ ಶೆಟ್ಟಿ, ಕಾಂಗ್ರೆಸ್‌ನ ಪ್ರವೀಣ್‌ಚಂದ್ರ ಆಳ್ವ ಸದಸ್ಯರಾಗಿದ್ದರು.

Advertisement

ಕಂಕನಾಡಿ ಶ್ರೀಕ್ಷೇತ್ರ ಬ್ರಹ್ಮ ಬೈದರ್ಕಳ, ಕಪಿತಾನಿಯೋ, ಉಜ್ಜೋಡಿ, ನಾಗುರಿ, ಸದಾಶಿವ ನಗರ, ಎಕ್ಕೂರು, ಬಜಾಲ್‌ ಚರ್ಚ್‌, ಕಂಕನಾಡಿ ರೈಲ್ವೇ ನಿಲ್ದಾಣ ಸಹಿತ ಹಲವು ಪ್ರಮುಖ ಹೆಜ್ಜೆ ಗುರುತುಗಳು ಈ ವಾರ್ಡ್‌ ವ್ಯಾಪ್ತಿಯಲ್ಲಿವೆ. ಸುಮಾರು 1,500 ಮನೆಗಳಿರುವ ವಾರ್ಡ್‌ನ ಬಹುತೇಕ ಮುಖ್ಯ-ಅಡ್ಡ ರಸ್ತೆಗಳು ಕಾಂಕ್ರೀಟ್‌ಗೊಂಡಿದ್ದರೆ, ಉಳಿದವು ಡಾಮರು ಕಂಡಿವೆ. ಆದರೆ ಹಲವೆಡೆ ಚರಂಡಿ – ಒಳ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಕೆಲವೆಡೆ ಫುಟ್‌ಪಾತ್‌ ಕಲ್ಪಿಸಿದ್ದರೂ ಇನ್ನು ಕೆಲವೆಡೆ ಫುಟ್‌ಪಾತ್‌ ಕಾಮಗಾರಿ ಅರ್ಧಬಂರ್ಧ ಆಗಿದೆ. ಪಾದ‌ಚಾರಿ ರಸ್ತೆಗಳು, ಚರಂಡಿ ವ್ಯವಸ್ಥೆ ಇಲ್ಲದಿರುವುದೇ ದೊಡ್ಡ ಕೊರತೆ.

ರಸ್ತೆಗಳ ಅಭಿವೃದ್ಧಿ
ವಾರ್ಡ್‌ ವಿಸ್ತೀರ್ಣ ದೊಡ್ಡದಾಗಿರುವುದರಿಂದ ಒಂದೊಂದು ಅಡ್ಡರಸ್ತೆಗಳನ್ನು ಸಂಪರ್ಕಿಸುವ ಕೆಲಸ ಮಾಡಲಾಗಿದೆ. ಪಂಪ್‌ವೆಲ್‌, ಎಕ್ಕೂರು, ಉಜ್ಜೋಡಿ ಹೀಗೆ ಎಲ್ಲ ಭಾಗಗಳಿಗೂ ಸಂಪರ್ಕ ಕಲ್ಪಿಸಲಾಗಿದೆ. ರಸ್ತೆಗಳ ಅಭಿವೃದ್ಧಿ ಈ ವಾರ್ಡ್‌ನ ಪ್ಲಸ್‌ ಪಾಯಿಂಟ್‌ ಎಂದರೆ ತಪ್ಪಾಗಲಾರದು. ಇದರೊಂದಿಗೆ ರಸ್ತೆಗಳಿಗೆ ಸೂಚನಾ ಫಲಕ, ಹಂಪ್‌ ಅಳವಡಿಕೆ ಕೆಲಸವಾಗಿದೆ.

ಫುಟ್‌ಪಾತ್‌ ವ್ಯವಸ್ಥೆ
ಪ್ರಗತಿನಗರದ ನಿವಾಸಿಯೊ ಬ್ಬರು ಹೇಳುವ ಪ್ರಕಾರ, ಈ ವಾರ್ಡ್‌ಗೆ 5 ವರ್ಷಗಳಲ್ಲಿ ಉತ್ತಮ ರಸ್ತೆ ಸಂಪರ್ಕ ಕಲ್ಪಿಸ ಲಾಗಿದೆ. ಆದರೆ ಬಹುತೇಕ ರಸ್ತೆಗಳಿಗೆ ಚರಂಡಿ, ಫುಟ್‌ ಪಾತ್‌ ಮಾಡಿಲ್ಲ. ಮಳೆ ನೀರು ಹರಿಯಲು ವ್ಯವಸ್ಥೆಯಿಲ್ಲದೇ ರಸ್ತೆಗಳು ಅಲ್ಲಲ್ಲಿ ಜಲಾವೃತಗೊಳ್ಳು ತ್ತವೆ. ರಸ್ತೆ ಅಭಿವೃದ್ಧಿಯೊಂದಿಗೆ ಫುಟ್‌ಪಾತ್‌, ಚರಂಡಿ ಬಗ್ಗೆಯೂ ಗಮನಹರಿಸಲಿ ಎನ್ನುತ್ತಾರೆ.

ರಾಜಕಾಲುವೆಗೆ ತಡೆಗೋಡೆಯಿಲ್ಲ
ಕಂಕನಾಡಿ ವಾರ್ಡ್‌ನ ಪಂಪ್‌ವೆಲ್‌ನಿಂದ ಎಕ್ಕೂರುವರೆಗೆ ಸುಮಾರು 3 ಕಿ.ಮೀ. ವ್ಯಾಪ್ತಿ ಯಲ್ಲಿ ಹಾದು ಹೋಗುವ ದೊಡ್ಡ ರಾಜ ಕಾಲುವೆಗೆ ತಡೆಗೋಡೆ ನಿರ್ಮಿಸಿಲ್ಲ. ಅನುದಾನ ಬಿಡುಗಡೆ ಯಾಗಿದ್ದರೂ ತಾಂತ್ರಿಕ ಕಾರಣಗಳಿಂದಾಗಿ ವಿಳಂಬ ವಾಗಿದೆ. ರಾಜಕಾಲುವೆ ಸಮೀಪ ಪ. ಜಾತಿ, ಪಂಗಡ ಕಾಲನಿ ಸಹಿತ ಹಲವು ಮನೆಗಳಿವೆ. ಮಳೆ ಬಂದಾಗ ಈ ಜನರ ಸ್ಥಿತಿ ಹೇಳುವಂತಿಲ್ಲ.

Advertisement

ಪ್ರಾ.ಆ. ಕೇಂದ್ರ ಉದ್ಘಾಟನೆಗೆ ಸಿದ್ಧತೆ
ಕಂಕನಾಡಿ ಬಿ ವಾರ್ಡ್‌ ಹೆಚ್ಚು ಕಾರ್ಮಿಕರು ಇರುವ ಸ್ಥಳವಾದ್ದರಿಂದ ಈ ಭಾಗಕ್ಕೆ ನಗರ ಪ್ರಾಥಮಿಕ ಆ. ಕೇಂದ್ರ ಮಂಜೂರಾಗಿತ್ತು. ಬಾಡಿಗೆ ಮನೆಯಲ್ಲಿ 3 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರದಲ್ಲಿ ದಿನಕ್ಕೆ 50ರಿಂದ 80ರಷ್ಟು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. 2017ರ ಅನುದಾನದಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಎಕ್ಕೂರಿನಲ್ಲಿ ಸ್ವಂತ ಕಟ್ಟಡ ನಿರ್ಮಿಸಲಾಗಿದೆ. ಚು. ನೀತಿಸಂಹಿತೆ ಹಿನ್ನೆಲೆಯಲ್ಲಿ ಬಾಕಿಯಾಗಿದ್ದ ಉದ್ಘಾಟನ ಸಮಾರಂಭ ಕೆಲವೇ ದಿನಗಳಲ್ಲಿ ನೆರವೇರಲಿದೆ.

ಪ್ರಮುಖ ಕಾಮಗಾರಿ
– ಎಕ್ಕೂರು ಪಕ್ಕಲಡ್ಕ ಮುಖ್ಯರಸ್ತೆ, ಜೆ.ಎಂ. ಮುಖ್ಯರಸ್ತೆ, ಎಕ್ಕೂರು- ತೋಜಿಲ ಮುಖ್ಯ ರಸ್ತೆ, ಉಜ್ಜೋಡಿ ಮಹಾಲಿಂಗೇಶ್ವರ ದೇವಸ್ಥಾನ ಮುಖ್ಯ ರಸ್ತೆ ಸಹಿತ ಹಲವು ರಸ್ತೆಗಳ ಅಭಿವೃದ್ಧಿ

– ನಾಗುರಿ ಮಜಲು- ರೈಲು ನಿಲ್ದಾಣ ರಸ್ತೆ ವಿಸ್ತರಣೆ ಹಾಗೂ ಅಭಿವೃದ್ಧಿ,

– ನಾಗುರಿ- ಬಲಿಪೆಮಾರು ಕಿರು ಸೇತುವೆ ನಿರ್ಮಾಣ, ಸದಾಶಿವ ನಗರ ಕಿರು ಸೇತುವೆ

– ಎಕ್ಕೂರು ಮುಖ್ಯ ರಸ್ತೆ ಸೇತುವೆ ನಿರ್ಮಾಣ,

– ಬೋರ್ಡ್‌ ಶಾಲೆ- ಪಂಪ್‌ವೆಲ್‌ ರಸ್ತೆ ಕಾಂಕ್ರೀಟ್‌ ಕಾಮಗಾರಿ

– ಪ್ರಗತಿಯಲ್ಲಿರುವ ಮೂರು ಉದ್ಯಾನವನಗಳ ಅಭಿವೃದ್ಧಿಗೆ ಚಾಲನೆ

ಕಂಕನಾಡಿ ವಾರ್ಡ್‌
ವಾರ್ಡ್‌ನ ಭೌಗೋಳಿಕ ವ್ಯಾಪ್ತಿ¤: ಪಂಪ್‌ವೆಲ್‌ನಿಂದ ಎಕ್ಕೂರು, ಪಂಪ್‌ವೆಲ್‌ನಿಂದ ಮಂಜುಳಿಕೆ, ಎಕ್ಕೂರು ಕುತ್ತಡ್ಕ, ಜೆ.ಎಂ. ರಸ್ತೆ ಸರ್ಕಲ್‌ ವ್ಯಾಪ್ತಿಯ ಈ ವಾರ್ಡ್‌ ಸುಮಾರು 35 ಕೀ.ಮೀ. ವ್ಯಾಪ್ತಿ ಹೊಂದಿದೆ.

ಒಟ್ಟು ಮತದಾರರು: 7162
ಒಟ್ಟು ಮಹಿಳೆಯರು: 3770
ಒಟ್ಟು ಪುರುಷರು: 3392

5 ವರ್ಷಗಳ‌ಲ್ಲಿ ಬಂದ ಅನುದಾನ
2014 15
1.62 ಕೋಟಿ ರೂ.
4.96 ಕೋಟಿ ರೂ.

2016 17
1.71 ಕೋಟಿ ರೂ.

2017 18
1.16 ಕೋಟಿ ರೂ.

2018- 19
2.50 ಕೋಟಿ ರೂ.

ಎಲ್ಲ ರಸ್ತೆಗಳ ಸಮಗ್ರ ಅಭಿವೃದ್ಧಿಗೆ ಆದ್ಯತೆ ವಾರ್ಡ್‌ನ್ನು ಭಾಗಶಃ ಅಭಿವೃದ್ಧಿಗೊಳಿಸಲಾಗಿದೆ. ಎಲ್ಲ ಭಾಗಗಳಿಗೂ ಕಾಂಕ್ರೀಟ್‌, ಡಾಮರು ಕಾಮಗಾರಿ ಆಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣವಾಗಿದೆ. ಆದರೆ ಮೈದಾನ, ಪಾರ್ಕ್‌ಗಳ ಅಭಿವೃದ್ಧಿ, ಬಾಕಿ ಇರುವ ಭಾಗಗಳಲ್ಲಿ ಚರಂಡಿ , ಫುಟ್‌ಪಾತ್‌ ನಿರ್ಮಾಣ, ಎಕ್ಕೂರು ಮುಖ್ಯ ರಸ್ತೆಯಿಂದ ಕಂಟ್ರಿಕ್ಲಬ್‌ ಮೂಲಕ ಎನ್‌.ಎಚ್‌. 66 ಸಂಪರ್ಕ ರಸ್ತೆ ಸೇರಿದಂತೆ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕಿದೆ.
-ಪ್ರವೀಣ್‌ಚಂದ್ರ ಆಳ್ವ 

ಸುದಿನ ನೋಟ
ಜನರೆಲ್ಲ ಹೇಳುವ ಹಾಗೆ, ರಸ್ತೆ ಸೌಕರ್ಯ ಅಭಿವೃದ್ಧಿಯಾದುದರ ಬಗ್ಗೆ ಸಮಾಧಾನವಿದೆ. ಆದರೆ ಹಲವು ವರ್ಷಗಳ ಚರಂಡಿ ಸಮಸ್ಯೆ ಈ ಬಾರಿ ಯಾದರೂ ಬಗೆಹರಿದೀತೆಂಬ ನಿರೀಕ್ಷೆಯಿತ್ತು . ಅದು ಆದ್ಯತೆಯಾಗಿದ್ದರೆ ಅಭಿವೃದ್ಧಿಯ ಲೆಕ್ಕಾಚಾರ ಬದಲಾಗುತ್ತಿತ್ತು.

  ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next