Advertisement

ಎಲ್ಲಾ ಸರಿಯಿತ್ತು, ಆಮೇಲೇನಾಯ್ತು?

06:00 AM Dec 12, 2018 | |

ಜ್ಯೋತಿಗೆ, ಬಾವ ಎಂದರೆ ಬಹಳ ಪ್ರಿಯ. ಅಕ್ಕನ ಶಿಸ್ತಿನ ಕಣ್ಗಾವಲಿನಲ್ಲಿ ಬಾವ- ನಾದಿನಿಯರ ನಡುವೆ ಮಧುರ ಸಂಬಂಧವಿತ್ತು. ಆಕೆ ಕೇಳಿದ್ದೆಲ್ಲವನ್ನೂ ಬಾವ ಕೊಡಿಸುತ್ತಿದ್ದರು. ಎಲ್ಲಾ ಕಡೆಗೆ ಆಕೆಯನ್ನೂ ಕರೆದುಕೊಂಡು ಹೋಗುತ್ತಿದ್ದರು. “ಮದುವೆಯಾದರೆ, ನಿಮ್ಮ ಥರದವರನ್ನೇ ಮದುವೆಯಾಗಬೇಕು ಬಾವಾ’ ಎಂದು ಜ್ಯೋತಿ ಸದಾ ಹೇಳುತ್ತಿದ್ದಳು.  

Advertisement

ಹದಿನೈದು ವರ್ಷಗಳ ಹಿಂದೆ, ಚೊಚ್ಚಲ ಹೆರಿಗೆಯಲ್ಲಿ ಅಕ್ಕ ತೀರಿಕೊಂಡ ನೋವಿನ ಸಂದರ್ಭದಲ್ಲಿ ಜ್ಯೋತಿ ತನ್ನ ಬಾವನನ್ನೇ ಮದುವೆಯಾಗುವ, ಅಕ್ಕನ ಮಗುವಿಗೆ ತಾಯಿಯಾಗುವ ನಿರ್ಧಾರ ತೆಗೆದುಕೊಂಡಳು. ಬಾವನಿಗೆ ಪತ್ನಿಯಾಗಿ, ಮಗುವಿಗೆ ತಾಯಿಯಾಗಿ, ಅತ್ತೆಯ ಮನೆಗೆ ಸೊಸೆಯಾಗಿ ಕಾಲಿಟ್ಟಳು ಜ್ಯೋತಿ. ಎಷ್ಟು ಚಿಕ್ಕ ವಯಸ್ಸಿಗೆ ಎಂಥಾ ಮನಸ್ಸು ಎಂದು ಆಗ ಎಲ್ಲರಿಗೂ ಆಶ್ಚರ್ಯ!

ಗಂಡನಾದ ಮೇಲೆ ಬಾವ ಬದಲಾದಂತೆ ಕಂಡರು. ತನ್ನನ್ನು ಬೇಕಾಬಿಟ್ಟಿ ಮಾತನಾಡಿಸುತ್ತಾರೆ ಎಂದು, ನನ್ನ ಮುಂದೆ ಕುಳಿತು ಜ್ಯೋತಿ ರೋದಿಸಿದಳು. ಆಕೆಯ ಕಣ್ಣುಗಳು ಬಾತುಕೊಂಡಿದ್ದವು. ಜೀವನದ ಮೇಲೆ ನಂಬಿಕೆಯನ್ನೇ ಕಳೆದುಕೊಂಡಿದ್ದಳು. ತೀರಿಕೊಂಡ ಅಕ್ಕನ ಎಲ್ಲ ಪಾತ್ರಗಳನ್ನೂ ಸಮರ್ಥವಾಗಿ ವಹಿಸಿಕೊಂಡರೂ, ಬಾವ ಗಂಡನಾಗಿ ಮೋಸ ಮಾಡಿದ ಅನ್ನೋ ಭಾವನೆ ಅವಳಲ್ಲಿತ್ತು. ಜ್ಯೋತಿಗೆ ಈಗ ಎರಡು ಮಕ್ಕಳಾಗಿದ್ದರೂ, ನೆಮ್ಮದಿ ಸಿಕ್ಕಿರಲಿಲ್ಲ. 

ಹದಿನೈದು ತುಂಬಿದ ಅಕ್ಕನ ಮಗಳು ಶೀಲಾ, ಥೇಟ್‌ ಅಕ್ಕನಂತೆಯೇ. ಅವಳ ಬಗ್ಗೆ ಸಹಜವಾಗಿ ಎಲ್ಲರ ಹೃದಯದಲ್ಲೂ ಒಂದು ಹೆಚ್ಚಿನ ಅನುಕಂಪವಿತ್ತು. ದಿನೇ ದಿನೆ ತನ್ನ ಗಂಡ ಶೀಲಾಗೆ ಹೆಚ್ಚಿನ ಸಮಯ ನೀಡುತ್ತಿರುವ ಚಿಕ್ಕ ಅನುಮಾನ ಜ್ಯೋತಿಯಲ್ಲಿ ಮನೆಮಾಡಿತ್ತು. ತನ್ನ ಮಕ್ಕಳಿಗೂ ಸಮಯ ಕೊಡಿ ಎಂದು ಗಂಡನಲ್ಲಿ ದುಂಬಾಲು ಬಿದ್ದಿದ್ದಳು. ಅಕ್ಕನ ಮಗಳಿಗೆ ಕೆಲವೊಮ್ಮೆ ನೋವುಂಟಾಗುವ ಹಾಗೆಯೂ ಮಾತನಾಡಿದ್ದಳು.  

ಆದರೆ, ಅಕ್ಕನ ನಿಧನದಿಂದಾಗಿ ಬಾವ ಬಸವಳಿದಿದ್ದನ್ನು ಜ್ಯೋತಿ ಗಮನಿಸಿಯೇ ಇರಲಿಲ್ಲ. ಅಕ್ಕ-ಬಾವನ ಮಧ್ಯೆ ಅಲ್ಪ ಸಮಯದಲ್ಲೇ ಗಾಢವಾದ ಸಂಬಂಧ ಬೆಳೆದಿದ್ದು ಜ್ಯೋತಿಗೆ ಅರ್ಥವಾಗಿರಲಿಲ್ಲ. ಅಕ್ಕ ಬಹಳ ಗಂಭೀರ, ಕೊಡುಗೈ ದಾನಿ ಮತ್ತು ದೊಡ್ಡ ಸಂಸಾರದಲ್ಲಿ ಎಲ್ಲರನ್ನೂ, ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ಜಾಣ್ಮೆ ಮತ್ತು ತಾಳ್ಮೆ ಇದ್ದ ಹೆಣ್ಣು. ಅಂಥ ಪತ್ನಿಯ ಅಗಲಿಕೆ ಅವರನ್ನು ಭಾವನಾತ್ಮಕವಾಗಿ ಕೊಂದುಹಾಕಿತ್ತು. ಬಾವ ಜೀವನೋತ್ಸಾಹ ಕಳೆದುಕೊಂಡಿದ್ದರು.   

Advertisement

ಹಾಗೆಂದು ಜ್ಯೋತಿ ಕೆಟ್ಟವಳಲ್ಲ. ಆದರೆ, ವ್ಯವಹಾರಸ್ಥೆ. ಡಬ-ಡಬಾಂತ ಮಾತಾಡುವ ಸ್ವಭಾವದವಳು. ನೇರವಾಗಿ ಮಾತನಾಡಿ ಎಲ್ಲರ ನಿಷ್ಠುರಕ್ಕೆ ಒಳಗಾಗುತ್ತಿದ್ದಳು. ಬಾವನಿಗೆ ಈ ವಿಚಾರದಲ್ಲಿ ಸಿಟ್ಟು ಬರುತ್ತಿತ್ತು. ಆಗಾಗ ಹೆಂಡತಿಯ ಮೇಲೆ ಸಿಡುಕುತ್ತಿದ್ದರು. ಜ್ಯೋತಿಗೆ ಡೈವೋರ್ಸ್‌ ತೆಗೆದುಕೊಳ್ಳಬೇಕು ಎನಿಸಿಬಿಟ್ಟಿತ್ತು. ಹಾಗೆ ಹೇಳಿದಾಗ ಸಿಟ್ಟಿನಲ್ಲಿ ಬಾವ “ಓಕೆ’ ಎಂದೂ ಹೇಳಿಬಿಟ್ಟಿದ್ದಾರೆ!   

ಕೆಲವು ಸಲ, ಚಿಕ್ಕ ವಯಸ್ಸಿನಲ್ಲಿ ಆದರ್ಶಕ್ಕೆ ಬಿದ್ದು, ಆವೇಶದಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಜೀವನ ಪೂರ್ತಿ ನಿಭಾಯಿಸಲು, ದೃಢ ಮನಸ್ಸು ಬೇಕಾಗುತ್ತದೆ. ಆಗ, ಆದರ್ಶಗಳೇ ನಮ್ಮ ವ್ಯಕ್ತಿತ್ವವಾಗಬೇಕು. ನಾವು ಯಾರ ಜಾಗವನ್ನು ತುಂಬಲು ನಿಲ್ಲುತ್ತೇವೋ, ಅವರ ಛಾಯೆಯಲ್ಲಿ ಬದುಕುವುದು ಬಹಳ ಕಷ್ಟ. ತಾಯಿಯ ಪಾತ್ರ ವಹಿಸಿಕೊಳ್ಳುವುದು ಸುಲಭದ ಮಾತಲ್ಲ. ತಾಯಿಯ ತ್ಯಾಗಕ್ಕೆ ತಕ್ಕ ಪ್ರತಿಫ‌ಲ ಸಿಗದಿರಬಹುದು. ನಿಸ್ವಾರ್ಥದಲ್ಲೂ ಜನ ಸ್ವಾರ್ಥ ಹುಡುಕಬಹುದು. ಅಂಥ ಸಂದರ್ಭದಲ್ಲಿ ತಾಳ್ಮೆಯಿಂದ, ದೃಢ ಚಿತ್ತದಿಂದ ಜೀವನ ಸಾಗಿಸಬೇಕು. 

Advertisement

Udayavani is now on Telegram. Click here to join our channel and stay updated with the latest news.

Next