ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಎದುರಿಸಲು ಪ್ರತಿ ತಾಲೂಕಿನಲ್ಲಿಯೂ ಮಕ್ಕಳಿಗಾಗಿ ಪ್ರತ್ಯೇಕ ಕೊವಿಡ್ ಕೇರ್ ಸೆಂಟರ್ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ಕೋವಿಡ್ ಮೂರನೇ ಅಲೆ ನಿಯಂತ್ರಣ ಕುರಿತು ಬೆಂಗಳೂರು ನಗರ ಜಿಲ್ಲೆ ಹಾಗೂ ಬಿಬಿಎಂಪಿ ವ್ಯಾಪ್ತಿಯ ಜನ ಪ್ರತಿನಿಧಿಗಳು ಅಧಿಕಾರಿಗಳ ಸಭೆ ನಡೆಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಎರಡನೇ ಅಲೆಯಲ್ಲಿ ಸುಮಾರು 50 ಮಕ್ಕಳು ತಂದೆ ತಾಯಿಯನ್ನು ಕಳೆದುಕೊಂಡಿದ್ದಾರೆ. ಅವರಿಗೆ ಬಾಲ ಸೇವಾ ಯೋಜನೆಯ ಮೂಲಕ ಪ್ರತಿ ತಿಂಗಳು ಮಗುವಿಗೆ 3500 ರೂ. ನೀಡುವುದು, ಅಲ್ಲದೆ ಉಚಿತ ಶಿಕ್ಷಣ ನೀಡುವುದು, 21 ವರ್ಷ ತುಂಬಿದ ಹೆಣ್ಣು ಮಕ್ಕಳಿಗೆ 1 ಲಕ್ಷ ರೂ. ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಉದಯವಾಣಿ ವಿಡಿಯೋ ವೈರಲ್: ಬೀದಿ ವ್ಯಾಪಾರಿಗಳ ಮೇಲೆ ದರ್ಪ ತೋರಿದ್ದ ಪಿಎಸ್ ಐ ಅಮಾನತು
ತಂದೆ ತಾಯಿಗಳನ್ನು ಮಕ್ಕಳನ್ನು ನೋಡಿಕೊಳ್ಳಲು ಸಂಬಂಧಿಗಳು ಶಕ್ತರಿಲ್ಲದಿದ್ದರೆ ಇಲಾಖೆ ಮೂಲಕ ದತ್ತು ಸ್ವೀಕಾರ ಕ್ರಮ ಕೈಗೊಳ್ಳಲಾಗುವುದು. ಯಾರಾದರೂ ದಾನಿಗಳು ಅವರ ಜೀವನಕ್ಕೆ ಉಜ್ವಲ ಭವಿಷ್ಯ ರೂಪಿಸಲು ಮುಂದೆ ಬಂದರೆ ಅಂತ ಮಕ್ಕಳ ಭವಿಷ್ಯ ರೂಪಿಸಲು ಇಲಾಖೆ ಕೊಂಡಿಯಾಗಿ ಕೆಲಸ ಮಾಡಲಿದೆ. ಮೂರನೇ ಅಲೆ ನಿಯಂತ್ರಿಸಲು ಮಹಿಳಾ ಮತ್ತು ಮಕ್ಕಳ ಇಲಾಖೆ, ಆರೋಗ್ಯ, ಶಿಕ್ಷಣ, ಗ್ರಾಮೀಣಾಭಿವೃದ್ದಿ ಮತ್ತು ಪೊಲೀಸ್ ಇಲಾಖೆ ಮಕ್ಕಳನ್ನು ಗುರುತಿಸುವ ಕೆಲಸವನ್ನು ಮಾಡಲಾಗುತ್ತಿದೆ. ಮಕ್ಕಳಿಗೆ ಸೋಂಕು ದೃಢ ಪಟ್ಟರೆ ಕೊವಿಡ್ ಕೇರ್ ಸೆಂಟರ್ ಗೆ ಮಗುವಿನೊಂದಿಗೆ ತಾಯಿಯೂ ಇರಲು ಅವಕಾಶ ಮಾಡಲಾಗಿದೆ. ಯುವತಿಯರಿಗೆ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗುವುದು. ಅಂಗವಿಕಲರಿಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಪ್ರತ್ಯೇಕ ಮಕ್ಕಳ ಕೊವಿಡ್ ಆಸ್ಪತ್ರೆ: ಬೆಂಗಳೂರು ನಗರ ಜಿಲ್ಲೆಯಲ್ಲಿ ಸಾಕಷ್ಟು ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಅದರ ಹೊರತಾಗಿ ಮಕ್ಕಳಿಗಾಗಿಯೇ ಪ್ರತ್ಯೇಕ ಕೊವಿಡ್ ಆಸ್ಪತ್ರೆ ತೆರೆಯಲು ಸಲಹೆ ಬಂದಿದೆ. ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು. ಈಗಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ 1419 ಬೆಡ್ ಗಳನ್ನು ಗುರುತಿಸಲಾಗಿದೆ. 141 ವೆಂಟಿಲೇಟರ್ ಉಳ್ಳ ಐಸಿಯು ಬೆಡ್ ಗಳು, 116 ಐಸಿಯು ರಹಿತ ಬೆಡ್ ಗಳು, 430 ಹೆಚ್ ಡಿಯು ಬೆಡ್ ಗಳು, 712 ಸಾಮಾನ್ಯ ಬೆಡ್ ಗಳನ್ನು ವ್ಯವಸ್ಥೆ ಮಾಡಲಾಗಿದೆ. ಇನ್ನೂ ಹೆಚ್ಚಿನ ಬೆಡ್ ಬೇಡಿಕೆ ಇದೆ. ಮಕ್ಕಳಿಗೆ ಪ್ರತ್ಯೇಕವಾದ ಮಾಸ್ಕ್, ವೆಂಟಿಲೇಟರ್, ಬೆಡ್, ಔಷಧ, ಮಾತ್ರೆ ಬೇಕಾಗುತ್ತದೆ ಅದರ ಸಿದ್ದತೆಯೂ ನಡೆಯುತ್ತಿದೆ ಎಂದರು.
ಇದನ್ನೂ ಓದಿ: ರೋಹಿಣಿ ಸಿಂಧೂರಿಗೆ ಮತ್ತೊಂದು ಸಂಕಷ್ಟ: ಡಿಸಿ ಅಧಿಕೃತ ನಿವಾಸ ನವೀಕರಣ ಪ್ರಕರಣದ ತನಿಖೆಗೆ ಆದೇಶ
ಕಳೆದ ಒಂದು ವರ್ಷದಲ್ಲಿ ಸೋಂಕಿನಿಂದ ಜಿಲ್ಲೆಯಲ್ಲಿ 51 ಮಕ್ಕಳು ನಿಧನ ಹೊಂದಿದ್ದಾರೆ. ರಾಜ್ಯದಲ್ಲಿ ಇದುವರೆಗೂ 0-9 ವಯಸ್ಸಿನ 67687 ಮತ್ತು 09-18 ವಯಸ್ಸಿನ 170565 ಮಕ್ಕಳು ಒಟ್ಟು 0-18 ವಯಸ್ಸಿನ 2,38,252 ಮಕ್ಕಳು ಸೋಂಕಿಗೆ ತುತ್ತಾಗಿವೆ. ಜಿಲ್ಲೆಯಲ್ಲಿ ಒಂದು ವರ್ಷದಲ್ಲಿ 2 ಮಕ್ಕಳು ತಂದೆ ತಾಯಿ ಕಳೆದುಕೊಂಡು ಅನಾಥರಾಗಿದ್ದಾರೆ. ಅವರಿಗೆ ಮುಖ್ಯಮಂತ್ರಿ ಬಾಲ ಸೇವಾ ಯೋಜನೆ ಮೂಲಕ ಸಹಾಯಧನ ನೀಡಲಾಗುವುದು ಎಂದು ಸಚಿವರು ಹೇಳಿದರು.
ಇದೇ ವೇಳೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ 30 ಮಕ್ಕಳ ಮೇಲೆ ಲಸಿಕೆ ಪ್ರಯೋಗ ಮಾಡಲಾಗಿದೆ. ಅದು ಯಶಸ್ವಿಯಾದರೆ ಮುಂದಿನ ತೀರ್ಮಾನ ಸಿಎಂ, ಪಿಎಂ ತೆಗೆದುಕೊಳ್ಳುತ್ತಾರೆ. ಶಾಲೆ ತೆರೆಯುವ ಬಗ್ಗೆ ಶಿಕ್ಷಣ ಸಚಿವರ ಜೊತೆ ಚರ್ಚಿಸಲಾಗುವುದು. ತಜ್ಞರ ವರದಿಯಲ್ಲಿ ಅಧಿಕೃತವಾಗಿ ಏನು ವರದಿ ನೀಡಿದ್ದಾರೆ ಎನ್ನುವುದು ನಮ್ಮ ಇಲಾಖೆಗೆ ಇನ್ನೂ ಮಾಹಿತಿ ಬಂದಿಲ್ಲ. ಸಿಎಂ ನೋಡಿ ನಮ್ಮ ಇಲಾಖೆಗೆ ಕಳುಹಿಸಿಕೊಡುತ್ತಾರೆ ಎಂದರು. .