ಮೂಡಿಗೆರೆ: ತಾಲೂಕಿನ ಭೈರಾಪುರ ಭಾಗದಲ್ಲಿ ಓಡಾಡಿಕೊಂಡಿರುವ ಭೈರ ಎಂಬ ನರಹಂತಕ ಕಾಡಾನೆ ಹಿಡಿಯಲು ಸೋಮವಾರ ಅರಣ್ಯ ಇಲಾಖೆ ಅಧಿ ಕಾರಿಗಳ ತಂಡ ಕಾರ್ಯಾಚರಣೆ ನಡೆಸಿದೆ. ನರಹಂತಕ ಭೈರ ಕಾಡಾನೆ ಹಿಡಿಯಲು ನೂರಕ್ಕೂ ಅಧಿಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಮತ್ತಿಗೂಡು ಆನೆ ಶಿಬಿರದಿಂದ ಭೀಮ, ಅಭಿಮನ್ಯು, ಮಹೇಂದ್ರ, ಗೋಪಾಲಸ್ವಾಮಿ ಹಾಗೂ ದುಬಾರೆ ಆನೆ ಶಿಬಿರದಿಂದ ಅಜೇಯ, ಪ್ರಶಾಂತ್ ಸೇರಿ ಒಟ್ಟು 6 ಆನೆಗಳನ್ನು ಕರೆಸಿಕೊಳ್ಳಲಾಗಿದೆ. ಕಳೆದೆರಡು ತಿಂಗಳಿಂದ ಭೈರ ಕಾಡಾನೆ ಓಡಾಟದ ಚಲನವಲನ ಗಮನಿಸುತ್ತಿದ್ದು, ಭೈರಾಪುರ ಅರಣ್ಯದಲ್ಲಿ ಹೆಚ್ಚಾಗಿ ಓಡಾಡಿಕೊಂಡಿರುವ ಮಾಹಿತಿ ಕಲೆ ಹಾಕಲಾಗಿತ್ತು.
ಸೋಮವಾರ ಭೈರನನ್ನು ಹಿಡಿಯಲೆಬೇಕೆಂದು ಸಿದ್ಧವಾಗಿದ್ದ ಅರಣ್ಯ ಇಲಾಖೆ ತಂಡ ಭೈರ ಇರುವ ಸ್ಥಳ ಕಾರ್ಯಾಚರಣೆ ನಡೆಸಲು ಸೂಕ್ತವಾಗಿಲ್ಲ ಎಂಬ ಕಾರಣಕ್ಕೆ ಮಂಗಳವಾರಕ್ಕೆ ಮುಂದೂಡಿದೆ. ಡಿಎಫ್‌ಒ ಕ್ರಾಂತಿ, ಊರುಬಗೆ ಗ್ರಾಪಂ ಉಪಾಧ್ಯಕ್ಷೆ ಭಾರತಿ, ಸದಸ್ಯರಾದ ಅಭಿಜಿತ್, ಪುಷ್ಪ, ನಿಶಾಂತ್ ಪಟೇಲ್, ಪರಿಸರವಾದಿ ಹುರುಡಿ ವಿಕ್ರಂ ಮತ್ತಿತರರಿದ್ದರು.
ಭೈರನನ್ನು ಹಿಡಿಯಲು ವೈದ್ಯರು, 100ಕ್ಕೂ ಅಧಿಕ ಅರಣ್ಯ ಸಿಬ್ಬಂದಿ, 6 ಆನೆಗಳನ್ನು ಕರೆಸಿಕೊಂಡು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೋಮವಾರ ಸಂಜೆ ಮೇಕನಗದ್ದೆ ಸಮೀಪದ ಕಾಡಿನಲ್ಲಿ ಭೈರ ಆನೆ ಓಡಾಡಿಕೊಂಡಿದೆ. ಆದರೆ ಆ ಸ್ಥಳ ಆನೆಯನ್ನು ಹಿಡಿಯುವ ಸೂಕ್ತ ಪ್ರದೇಶವಲ್ಲ. ಹಾಗಾಗಿ ಮಂಗಳವಾರ ಭೈರನನ್ನು ಹಿಡಿಯುವ ಸ್ಥಳಕ್ಕೆ ಓಡಿಸಿ ಕಾರ್ಯಾಚರಣೆ ಯಶಸ್ವಿಗೊಳಿಸಲಾಗುವುದು.
ಮೋಹನ್, ಆರ್‌ಎಫ್‌ಒ ಮೂಡಿಗೆರೆ