ಬೆಳಗಾವಿ: ಮಾದರಿ ಕೈಗಾರಿಕಾ ನೀತಿ ಜಾರಿಗೆ ತರಲು ಸಿದ್ಧತೆ ನಡೆದಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೈಗಾರಿಕೆ ಸ್ಥಾಪನೆ ಮತ್ತು ಬೆಳವಣಿಗೆಗೆ ಆದ್ಯತೆ ನೀಡಲಾಗುತ್ತದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಹೇಳಿದರು. ನಗರದ ಉದ್ಯಮಬಾಗ ಕೈಗಾರಿಕಾ ಪ್ರದೇಶದಲ್ಲಿ ಮಂಗಳವಾರ ನಡೆದ ಕೈಗಾರಿಕೋದ್ಯಮಿಗಳ ಸಭೆಯಲ್ಲಿ ಸಚಿವ ಶೆಟ್ಟರ್ ಅವರು ಮಾತನಾಡುತ್ತಾ ಈ ವಿಚಾರವನ್ನು ತಿಳಿಸಿದರು.
ಉದ್ಯಮಬಾಗ ಅತ್ಯಂತ ಹಳೆಯ ಕೈಗಾರಿಕಾ ಪ್ರದೇಶವಾಗಿದೆ. ಇಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದಾಗ ಈ ಭಾಗಕ್ಕೆ ತುರ್ತಾಗಿ ರಸ್ತೆ ಸಹಿತ ಎಲ್ಲಾ ರೀತಿಯ ಮೂಲಸೌಕರ್ಯಗಳ ತುರ್ತು ಅಗತ್ಯವಿರುವುದು ಕಂಡುಬಂದಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಕೈಗಾರಿಕೋದ್ಯಮಿಗಳು ಕೂಡ ಸ್ಥಳೀಯ ಸರಕಾರಕ್ಕೆ ತೆರಿಗೆ ಪಾವತಿಸುವುದರಿಂದ ಮಹಾನಗರ ಪಾಲಿಕೆ ವತಿಯಿಂದ ಸುಧಾರಣಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಪಾಲಿಕೆ ಆಯುಕ್ತರಿಗೆ ಸಚಿವರು ಸೂಚನೆ ನೀಡಿದರು. ಈಗಾಗಲೇ 6 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯಗಳನ್ನು ಒದಗಿಸುವ ಕಾಮಗಾರಿಗಳನ್ನು ಆರಂಭಿಸಲಾಗುವುದು ಎಂದು ಅವರು ತಿಳಿಸಿದರು.
ಕೇಂದ್ರ ಸರ್ಕಾರ ಅನುಮೋದನೆ ನೀಡಬೇಕಿರುವ ಪ್ರಸ್ತಾವಗಳ ಬಗ್ಗೆ ತಮ್ಮ ನಮ್ಮ ಗಮನಕ್ಕೆ ತಂದರೆ ಅದಕ್ಕೆ ಅನುಮೋದನೆ ಪಡೆಯಲು ಸಹಕರಿಸುವುದಾಗಿ ಸಚಿವ ಶೆಟ್ಟರ್ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಸಂಸದ ಸುರೇಶ್ ಅಂಗಡಿ ಮಾತನಾಡಿ, ದೇಶದಲ್ಲಿ ಸಂಗ್ರಹವಾಗುವ ತೆರಿಗೆ ಪ್ರಮಾಣದಲ್ಲಿ ಒಟ್ಟಾರೆ ಶೇ.75 ತೆರಿಗೆ ಸಣ್ಣ ಉದ್ದಿಮೆದಾರರಿಂದ ಬರುತ್ತಿದೆ ಹಾಗಾಗಿ ಈ ಕ್ಷೇತ್ರದ ಪ್ರಗತಿಗೆ ನೆರವು ನೀಡಲು ಸರ್ಕಾರ ಸದಾ ಸಿದ್ಧವಿದೆ ಎಂದು ಜಗದೀಶ್ ಶೆಟ್ಟರ್ ಭರವಸೆ ನೀಡಿದರು.
ಉದ್ಯಮಬಾಗ ಕೈಗಾರಿಕಾ ಪ್ರದೇಶದ ಸಮಗ್ರ ಅಭಿವೃದ್ಧಿಗೆ ವರದಿ ಸಿದ್ಧಪಡಿಸಿದ ಬಳಿಕ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಅಗತ್ಯ ನೆರವು ಒದಗಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.