ಮೈಸೂರು : ರೌಡಿ ಶೀಟರ್ ಗಳನ್ನು ಜೊತೆಯಲ್ಲಿಟ್ಟುಕೊಳ್ಳುವುದು ಒಳ್ಳೆಯದಲ್ಲ.ಎಲ್ಲ ರಾಜಕೀಯ ಪಕ್ಷಗಳಲ್ಲೂ ಅಂತಹವರು ಇದ್ದೇ ಇರುತ್ತಾರೆ ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಶನಿವಾರ ಪ್ರತಿಕ್ರಿಯೆ ನೀಡಿದ್ದಾರೆ.
ರಾಜಕೀಯ ನೇತಾರರ ಜೊತೆ ರೌಡಿ ಶೀಟರ್ ಗಳು ಕಾಣಿಸಿಕೊಳ್ಳುತ್ತಿರುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, ಯಾರು ಕೂಡ ಸರ್ಟಿಫಿಕೇಟ್ ತೆಗೆದುಕೊಂಡು ನಮ್ಮ ಮುಂದೆ ಬರುವುದಿಲ್ಲ.ಕೆಲವೊಂದು ಸಂದರ್ಭಗಳಲ್ಲಿ ನಮ್ಮ ಪಕ್ಕ ನಿಂತು ಫೋಟೊ ತೆಗೆಸಿಕೊಳ್ಳುವವರು ಯಾರು ಎಂದು ನಮಗೆ ತಿಳಿದಿರುವುದಿಲ್ಲ.ಯಾವುದೇ ಒಂದು ರಾಜಕೀಯ ಪಕ್ಷ ಸಂವಿಧಾನದ ಅಡಿಯಲ್ಲಿ ಈ ದೇಶಕ್ಕೆ ಕೊಡುಗೆ ನೀಡಿದವರನ್ನು ಜೊತೆಯಲ್ಲಿಟ್ಟುಕೊಳ್ಳಬೇಕು. ಮತದಾರರಲ್ಲಿ ಭಯ ಮೂಡಿಸುವವರನ್ನು, ರೌಡಿ ಶೀಟರ್ ಗಳನ್ನು ಜೊತೆಯಲ್ಲಿಟ್ಟುಕೊಳ್ಳುವುದು ಒಳ್ಳೆಯದಲ್ಲ.
ಎಲ್ಲ ರಾಜಕೀಯ ಪಕ್ಷಗಳಲ್ಲೂ ಅಂತಹವರು ಇದ್ದೇ ಇರುತ್ತಾರೆ.ಕೆಲವರಿಗೆ ರಾಜಕೀಯ ನಾಯಕರ ಶ್ರೀರಕ್ಷೆಯೂ ಇರುತ್ತದೆ.ಆದರೀಗ ದೃಶ್ಯ ಮಾಧ್ಯಮ ಪ್ರಭಾವಿಯಾಗಿರುವುದರಿಂದ ಬೇಗ ಬೆಳಕಿಗೆ ಬರುತ್ತದೆ ಎಂದು ಹೇಳಿದ್ದಾರೆ.
”ದೇಶ ಸೇವೆ ಮಾಡುವಂತಹ, ದೂರದೃಷ್ಟಿ ಉಳ್ಳವರು ರಾಜಕೀಯಕ್ಕೆ ಬರುವಂತಾಗಬೇಕು.ಇತ್ತೀಚೆಗೆ ಮುಖ್ಯಮಂತ್ರಿಗಳು ಸರ್ಕಾರ ಜನರಿಂದ ಬರಬೇಕು, ವಾಮಮಾರ್ಗದಿಂದ ಬರಬಾರದು ಎಂದಿದ್ದಾರೆ. ಯಾವ ಕಾರಣದಿಂದ ಆ ರೀತಿ ಹೇಳಿದ್ದಾರೋ ಗೊತ್ತಿಲ್ಲ. ಈ ರೀತಿ ಒಬ್ಬರಿಗೊಬ್ಬರು ಆರೋಪ ಪ್ರತ್ಯಾರೋಪದಲ್ಲಿ ತೊಡಗಿರೋದು ಸರಿಯಲ್ಲ.ಪಕ್ಷಕ್ಕಿಂತ ದೇಶ ಮುಖ್ಯ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು” ಎಂದರು.
ಕಾದು ನೋಡಬೇಕಿದೆ
ಟಿಪ್ಪು ನಿಜಕನಸುಗಳು ನಾಟಕ ಪ್ರದರ್ಶನಕ್ಕೆ ತಡೆಯಾಜ್ಞೆ ತರುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, ನ್ಯಾಯಾಲಯಕ್ಕೆ ಹೋದಾಗ ನಾಟಕ ಇನ್ನೂ ಪ್ರದರ್ಶನವಾಗಿರಲಿಲ್ಲ.ಹಾಗಾಗಿ ಕೃತಿ ಮಾರಾಟಕ್ಕೆ ಮಾತ್ರ ನಿಷೇಧ ಹೇರಲಾಯಿತು. ನಾಟಕ ಪ್ರದರ್ಶನಕ್ಕೂ ತಡೆಯಾಜ್ಞೆ ಸಿಗುವ ಸಾಧ್ಯತೆಯಿದೆ. ಈ ವಿಚಾರ ಮೈಸೂರಿನ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ. ರಂಗಾಯಣದ ನಿರ್ದೇಶಕರಿಗೆ ಹೈಕೋರ್ಟ್ ನಿಂದ ಇಂದು ಸಮನ್ಸ್ ಕೂಡ ಬಂದಿದೆ. ಅದಕ್ಕೆ ಅವರು ಏನು ಸಮಜಾಯಿಷಿ ಕೊಡುತ್ತಾರೆ, ನ್ಯಾಯಾಲಯ ಏನು ತೀರ್ಪು ಕೊಡುತ್ತದೇ ಎಂಬುದನ್ನು ಕಾದು ನೋಡಬೇಕಿದೆ” ಎಂದರು.