ಬೈರೂತ್: ಒಂದು ವೇಳೆ ಇಸ್ರೇಲ್ ಗಾಜಾಪಟ್ಟಿ ಮೇಲೆ ದಾಳಿಯನ್ನು ಮುಂದುವರಿಸಿದಲ್ಲಿ, ಈ ಇಸ್ರೇಲ್-ಹಮಾಸ್ ಯುದ್ಧ ಪ್ರಾದೇಶಿಕ ಯುದ್ಧಕ್ಕೆ ಎಡೆಮಾಡಿಕೊಡಲಿದೆ ಎಂದು ಹೆಜ್ಬುಲ್ಲಾ ವರಿಷ್ಠ ಹಸ್ಸನ್ ನಸ್ರಲ್ಲಾ ಎಚ್ಚರಿಕೆ ನೀಡಿದ್ದು, ಇದಕ್ಕೆ ಅಮೆರಿಕವೇ ಹೊಣೆಯಾಗಲಿದೆ ಎಂದು ತಿಳಿಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:ಚಿಕ್ಕಮಗಳೂರು :ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದ ಖಾಸಗಿ ಬಸ್
ಹಮಾಸ್ ಉಗ್ರರು ಮತ್ತು ಇಸ್ರೇಲ್ ನಡುವೆ ಯುದ್ಧ ಆರಂಭವಾಗಿ ನಾಲ್ಕು ವಾರಗಳ ನಂತರ ಮೊದಲ ಬಾರಿಗೆ ಹೆಜ್ಬುಲ್ಲಾ ವರಿಷ್ಠ ಹಸ್ಸನ್ ಮಾಡಿರುವ ಭಾಷಣದಲ್ಲಿ, ಎಲ್ಲಾ ಆಯ್ಕೆಗಳು ಮುಕ್ತವಾಗಿದೆ ಎಂದು ಹೇಳುವ ಮೂಲಕ ಇಸ್ರೇಲ್ ಗೆ ಎಚ್ಚರಿಕೆಯ ಸಂದೇಶ ರವಾನಿಸಿರುವುದಾಗಿ ವರದಿ ಹೇಳಿದೆ.
ಇಸ್ರೇಲ್, ಹಮಾಸ್ ನಡುವೆ ನಡೆಯುತ್ತಿರುವ ಯುದ್ಧಕ್ಕೆ ಅಮೆರಿಕವೇ ಹೊಣೆಯಾಗಿದೆ. ಇಸ್ರೇಲ್ ಕೇವಲ ಆದೇಶವನ್ನು ಕಾರ್ಯಗತಗೊಳಿಸುವ ಸಾಧನವಾಗಿದೆ ಎಂದು ಹಸ್ಸನ್ ಆರೋಪಿಸಿದ್ದಾರೆ.
ಪ್ರಾದೇಶಿಕ ಯುದ್ಧವನ್ನು ತಡೆಯಬೇಕೆಂಬ ಉದ್ದೇಶ ಹೊಂದಿರುವವರು ತಕ್ಷಣವೇ ಅಮೆರಿಕಕ್ಕೆ ಸಂದೇಶ ರವಾನಿಸಿ. ಕೂಡಲೇ ಗಾಜಾದಲ್ಲಿನ ಯುದ್ಧವನ್ನು ನಿಲ್ಲಿಸಲಿ ಎಂದು ಹಸ್ಸನ್ ತಿಳಿಸಿದ್ದಾರೆ.
ಅಕ್ಟೋಬರ್ 7ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿದ ನಂತರ ಆರಂಭಗೊಂಡ ಯುದ್ಧ ಮುಂದುವರಿದಿದ್ದು, ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ ಎಂದು ವರದಿ ವಿವರಿಸಿದೆ.