Advertisement

ಕದ್ರಿಪಾರ್ಕ್‌: ಆಟಿಕೆಗಳೆಲ್ಲ ತುಂಡು ತುಂಡು; ಮಳೆಗಾಲದ ಬಳಿಕ ಹೊಸ ಆಟಿಕೆ?

11:51 AM Jul 09, 2019 | keerthan |

ಮಹಾನಗರ: ಕದ್ರಿ ಪಾರ್ಕ್‌ಗೆ ಆಗಮಿಸುವ ಎಲ್ಲರಿಗೂ ಜಿಮ್‌ ಸೌಲಭ್ಯ ಕಲ್ಪಿಸಿಕೊಡ ಬೇಕೆಂದು ಮಹಾನಗರ ಪಾಲಿಕೆ ಆರಂಭಿಸಿದ ಉಚಿತ ಜಿಮ್‌ ಸೌಲಭ್ಯದ ಕೆಲವು ಉಪಕರಣಗಳು ಮುರಿದು ಹೋಗಿವೆ. ಜಿಮ್‌ನಲ್ಲಿ ಬೆಳಕಿನ ಸೌಲಭ್ಯವೂ ಇಲ್ಲದಿರುವುದರಿಂದ ರಾತ್ರಿ ಹೊತ್ತಿನಲ್ಲಿ ಆಗಮಿಸುವ ಮಂದಿ ಮೊಬೈಲ್‌ ಟಾರ್ಚ್‌ನ ಬೆಳಕಿನಲ್ಲೇ ವಕೌìಟ್‌ ಮಾಡುವಂತಾಗಿದೆ.

Advertisement

ಉಚಿತವಾಗಿಯೇ ಸಾರ್ವಜನಿಕರಿಗೆ ಜಿಮ್‌ ಸೌಲಭ್ಯ ಕಲ್ಪಿಸಿಕೊಡಬೇಕೆಂದು ಪಾಲಿಕೆಯು ಕದ್ರಿ ಪಾರ್ಕ್‌ನಲ್ಲಿ ಜಿಮ್‌ ಸೌಲಭ್ಯವನ್ನು ಕಳೆದ ಮಾರ್ಚ್‌ ತಿಂಗ ಳಿನಿಂದ ಆರಂಭಿಸಿತು. ಆ ಮೂಲಕ, ದಿನಂಪ್ರತಿ ಬೆಳಗ್ಗೆ ಮತ್ತು ಸಂಜೆ ಕದ್ರಿ ಪಾರ್ಕ್‌ಗೆ ವಾಕಿಂಗ್‌ಗಾಗಿ ಆಗಮಿಸುವ ಸಾರ್ವಜನಿಕರಿಗೆ ವಾಕಿಂಗ್‌ನೊಂದಿಗೆ ಜಿಮ್‌ ಸೌಲಭ್ಯವನ್ನೂ ಪಡೆಯುವುದು ಸಾಧ್ಯವಾಯಿತು.

ಆದರೆ ಸೌಲಭ್ಯ ಆರಂಭವಾದ ಐದೇ ತಿಂಗಳುಗಳಲ್ಲಿ ಜಿಮ್‌ ಸಲಕರಣೆಗಳು ತುಂಡಾಗಿವೆ. ಸೈಕ್ಲಿಂಗ್‌ ಸಲಕರಣೆಯ ಒಂದು ಭಾಗದ ಪೆಡಲ್‌ನ ಮೆಟ್ಟು ಕಿತ್ತು ಹೋಗಿದ್ದು, ಕಬ್ಬಿಣದ ಸರಳು ಉಳಿದುಕೊಂಡಿವೆ. ಮಕ್ಕಳೂ ಇದರಲ್ಲಿ ಜಿಮ್‌ ಮಾಡುವುದರಿಂದ ಕಿತ್ತೋಗಿರುವ ಪೆಡಲ್‌ ಅಪಾಯಕಾರಿಯಾಗಿ ಪರಿಣಮಿಸಿದೆ. ಅಲ್ಲದೆ, ಇನ್ನೊಂದು ಜಿಮ್‌ ಸಲಕರಣೆ ಸಂಪೂರ್ಣ ತುಂಡಾಗಿದ್ದು, ಬಳಸಲಯೋಗ್ಯವಾಗಿದೆ.

ಕತ್ತಲಿನಲ್ಲೇ ವಕೌಟ್‌
ಇನ್ನು ಈ ಜಿಮ್‌ಗೆ ಯಾವುದೇ ಬೆಳಕಿನ ಸೌಲಭ್ಯ ಇಲ್ಲವಾದ್ದರಿಂದ ರಾತ್ರಿ ಹೊತ್ತಿನಲ್ಲಿ ಆಗಮಿಸುವ ಜನ ಕತ್ತಲಿನಲ್ಲಿ ಅಥವಾ ಮೊಬೈಲ್‌ ಟಾರ್ಚ್‌ನ ಬೆಳಕಿನಲ್ಲಿ ವಕೌಟ್‌ ಮಾಡುವಂತಾಗಿದೆ. ಶನಿವಾರ, ರವಿವಾರ ಮತ್ತು ಇತರ ರಜಾ ದಿನಗಳಲ್ಲಿ ರಾತ್ರಿ 8ರ ತನಕವೂ ಜನ ಇಲ್ಲಿ ಆಗಮಿಸಿ ಜಿಮ್‌ ಸೌಲಭ್ಯಗಳನ್ನು ಬಳಸುತ್ತಾರೆ. ಕಬ್ಬಿಣದ ಸಲಕರಣೆಗಳಾಗಿರುವುದರಿಂದ ಕತ್ತಲಿನಲ್ಲಿ ತಿಳಿಯದೇ ತಾಗುವ ಅಪಾಯವೂ ಇದೆ.

25 ಲಕ್ಷ ರೂ. ವೆಚ್ಚದ ಯೋಜನೆ
ಅಮೃತ್‌ ಯೋಜನೆಯಡಿ ಬಿಡುಗಡೆ ಗೊಂಡಿರುವ 116 ಲಕ್ಷ ರೂ. ಅನುದಾನದ ಹಣವನ್ನು ಬಳಸಿಕೊಂಡು ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಕದ್ರಿ ಪಾರ್ಕ್‌ನಲ್ಲಿ ಜಿಮ್‌ ಸೌಲಭ್ಯ ಕಲ್ಪಿಸಲಾಗಿತ್ತು. ಇದರಲ್ಲಿ ಕೇಂದ್ರ ಸರಕಾರದ ಶೇ. 50, ರಾಜ್ಯ ಸರಕಾರದ ಶೇ. 20, ಪಾಲಿಕೆಯ ಶೇ. 30ರಷ್ಟು ಅನುದಾನವಿದೆ. ಕಾಮಗಾರಿ ಮುಗಿದ ಬಳಿಕ ಜಿಮ್‌ನ ನಿರ್ವಹಣೆಯ ಹೊಣೆಯನ್ನು ತೋಟಗಾರಿಕಾ ಇಲಾಖೆಗೆ ಹಸ್ತಾಂತರಿಸಲಾಗಿತ್ತು. ಮಾ. 1ರಂದು ಸಂಸದ ನಳಿನ್‌ಕುಮಾರ್‌ ಕಟೀಲು ನೂತನ ಜಿಮ್‌ ಸೌಲಭ್ಯವನ್ನು ಉದ್ಘಾಟಿಸಿದ್ದರು.

Advertisement

ಆಟಿಕೆಗಳೂ ತುಂಡು ತುಂಡು!
ಕದ್ರಿ ಪಾರ್ಕ್‌ನಲ್ಲಿ ಮಕ್ಕಳ ಮನೋರಂಜನೆಗಾಗಿ ಇರುವ ಆಟಿಕೆಗಳು ಹಲವು ಸಮಯಗಳಿಂದ ತುಂಡಾದ ಸ್ಥಿತಿಯಲ್ಲಿದ್ದರೂ ಸಂಬಂಧಪಟ್ಟ ಇಲಾಖೆ ಆಟಿಕೆಗಳನ್ನು ರಿಪೇರಿ ಮಾಡುವುದಕ್ಕೆ ಗಮನ ಹರಿಸಿಲ್ಲ. ಇದೀಗ ಇನ್ನಷ್ಟು ಆಟಿಕೆಗಳು ತುಂಡಾಗಿದ್ದು, ಜಾರುಬಂಡಿಯೊಂದು ಮುರಿದು ಧರಾಶಾಯಿಯಾಗಿದೆ. ಕೆಲವು ಉಯ್ನಾಲೆಗಳ ಸರಪಳಿ ಮಾತ್ರ ಉಳಿದು ಕೊಂಡಿದ್ದರೆ, ಇನ್ನು ಕೆಲವು ಉಯ್ನಾಲೆಗಳ ಸರಪಳಿ ಕಿತ್ತು ಹೋದ ಸ್ಥಿತಿಯಲ್ಲಿದೆ. ಜಾರುಬಂಡಿಗಳ ತಳಭಾಗ ತುಕ್ಕು ಹಿಡಿದು ಬಿರುಕು ಬಿಟ್ಟಿದ್ದು, ಮಕ್ಕಳು ಕುಳಿತುಕೊಂಡಾಗ ಗಾಯವಾಗುವ ಅಪಾಯಗಳೂ ಇವೆ. ಈ ಬಗ್ಗೆ “ಉದಯವಾಣಿ-ಸುದಿನ’ ಹಲವು ಬಾರಿ ಗಮನ ಸೆಳೆದು ಎಚ್ಚರಿಸಿತ್ತು.

ಸಭೆ ಬಳಿಕ ನಿರ್ಧಾರ
ಜಿಮ್‌ ಸಲಕರಣೆಗಳ ನಿರ್ವಹಣೆ ಕುರಿತು ಈವರೆಗೆ ಯಾವುದೇ ನಿರ್ಧಾರಗಳಾಗಿಲ್ಲ. ಮುಂದೆ ಇದರ ನಿರ್ವಹಣೆ ಕುರಿತು ಸಭೆ ನಡೆಯಲಿದೆ. ಆ ಬಳಿಕ ನಿರ್ವಹಣೆ ಕೈಗೆತ್ತಿಕೊಳ್ಳಲಾಗುವುದು. ಮಕ್ಕಳ ಆಟಿಕೆಗಳನ್ನು ಮಳೆಗಾಲ ಮುಗಿದ ತತ್‌ಕ್ಷಣವೇ ತೆಗೆದು ಹಾಕಿ ಹೊಸದಾಗಿ ಅಳವಡಿಸಲಾಗುವುದು.
ಜಾನಕಿ, ಹಿರಿಯ ಸಹಾಯಕ ನಿರ್ದೇಶಕಿ, ತೋಟಗಾರಿಕೆ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next