Advertisement

‘ಸಚಿವರೆಲ್ಲ ಶೀಘ್ರ ಮಾಜಿ ಆಗ್ತಾರೆ’

02:44 AM May 03, 2019 | Team Udayavani |

ಬೆಳಗಾವಿ/ಗೋಕಾಕ: ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಹಾಲಿ ಸಚಿವರಾಗಿ ತಿರುಗಾಡುವವರು ಮಾಜಿಗಳಾಗಲಿದ್ದಾರೆ. ಸರ್ಕಾರದಲ್ಲಿ ಬಹಳ ಬದಲಾವಣೆ ಆಗಲಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ದೋಸ್ತಿ ಸರ್ಕಾರ ಪತನದ ಭವಿಷ್ಯ ನುಡಿದರು.

Advertisement

ತಮ್ಮ ಪುತ್ರ ಅಮರನಾಥ ಜಾರಕಿಹೊಳಿಯವರು ಕೆಎಂಎಫ್‌ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಗುರುವಾರ ಗೋಕಾಕದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿ, ಕೆಂಪು ಲೈಟ್ ಹಾಕಿಕೊಂಡು ಓಡಾಡುವರು ಮಾಜಿ ಆಗುತ್ತಾರೆ. ಈಗ ಕೆಂಪು ಲೈಟ್ ಹಾಕಿಕೊಂಡು ಓಡಾಡುವವರನ್ನು ನೋಡಿ ಹೆದರಬೇಡಿ. ದೊಡ್ಡ ಪ್ರಮಾಣದಲ್ಲಿ ನಮಗೆ ಅಧಿಕಾರ ಬರುತ್ತದೆ. ವಿಶ್ವಾಸ ದ್ರೋಹ ಮಾಡುವ ಹಾಗೂ ಬೆನ್ನಿಗೆ ಚೂರಿ ಹಾಕುವ ಮಂದಿಯನ್ನು ನಂಬಬೇಡಿ. ಅಧಿಕಾರ ಬರಲಿ, ಬಿಡಲಿ ನಮ್ಮನ್ನು ನಂಬಿ ಎಂದು ಹೇಳಿದರು.

ಮಗನನ್ನು ನಿರ್ದೇಶಕರಾಗಿ ಆಯ್ಕೆ ಮಾಡಿದ್ದಕ್ಕೆ ಧನ್ಯವಾದ ಹೇಳಿದ ರಮೇಶ, ಕೆಎಂಎಫ್‌ನ ಚುನಾವಣೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸೇರಿ ಎಲ್ಲರ ಆಶೀರ್ವಾದ ಇದೆ. ಅಥಣಿ ಶಾಸಕ ಮಹೇಶ ಕುಮಠಳ್ಳಿ ಕಾರ್ಯಕ್ರಮಕ್ಕೆ ಬಂದಿದ್ದಾನೆ. ಅವನು ನಮ್ಮವನೇ. ಕೆಎಂಎಫ್‌ ಚುನಾವಣೆ ಅಂದರೆ ಎಂಎಲ್ಎ ಚುನಾವಣೆ ಇದ್ದ ಹಾಗೆ. ಬೆಂಗಳೂರು ಲೆವೆಲ್ನಲ್ಲಿ ಮಗನ ತರುವ ಆಸೆ ಇದೆ. ಅದಕ್ಕೆ ನೀವು ಸಹಕಾರ ಕೊಡಬೇಕು. ನಂತರ ರಾಜಕೀಯದಲ್ಲಿ ಧ್ರುವೀಕರಣ ಆಗಲಿದೆ ಎಂದರು.

ಶಾಸಕ ರಮೇಶ ಅವರೊಂದಿಗೆ ಮಾತುಕತೆ ಮುಗಿಸಿ ಹೊರ ಬಂದ ಶಾಸಕ ಕುಮಠಳ್ಳಿ, ಮಾಧ್ಯಮದವರಿಗೆ ರಾಜಕೀಯ ವಿಷಯ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಅಥಣಿ ತಾಲೂಕಿನಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಈ ಕುರಿತು ಶಾಸಕ ರಮೇಶ ಅವರೊಂದಿಗೆ ಚರ್ಚಿಸಿದ್ದೇನೆ. ಮಹಾರಾಷ್ಟ್ರ ಮುಖ್ಯಮಂತ್ರಿ ಅವರೊಂದಿಗೆ ಈ ಬಗ್ಗೆ ಚರ್ಚಿಸುವುದಾಗಿ ಹೇಳಿದ್ದಾರೆ ಎಂದರು.

ಶಾಸಕರೊಂದಿಗೆ ಗೌಪ್ಯ ಮಾತುಕತೆ
ಪುತ್ರ ಅಮರನಾಥ ಅವರ ಸನ್ಮಾನ ಕಾರ್ಯಕ್ರಮಕ್ಕೆ ಬೆಂಗಳೂರಿನಿಂದ ಆಗಮಿಸಿದ ಶಾಸಕ ರಮೇಶ ಜಾರಕಿಹೊಳಿ, ಶಾಸಕ ಮಹೇಶ ಕುಮಠಳ್ಳಿ, ವಿಧಾನ ಪರಿಷತ್‌ ಸದಸ್ಯ ವಿವೇಕರಾವ್‌ ಪಾಟೀಲರೊಂದಿಗೆ ವೇದಿಕೆ ಹಂಚಿಕೊಂಡರು. ಗೋಕಾಕ ಹಾಗೂ ಅರಭಾವಿ ಕ್ಷೇತ್ರದ ಮುಖಂಡರು, ಬೆಂಬಲಿಗರು, ಗೋಕಾಕ ನಗರಸಭೆಯ ಹಾಲಿ, ಮಾಜಿ ಸದಸ್ಯರು ಭಾಗಿಯಾಗಿದ್ದರು. ನಂತರ ರಮೇಶ ಅವರು ತಮ್ಮ ನಿವಾಸದಲ್ಲಿ ಗೌಪ್ಯವಾಗಿ ಕುಮಠಳ್ಳಿ, ವಿವೇಕರಾವ್‌ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದರು. ಅರ್ಧ ಗಂಟೆಗೂ ಹೆಚ್ಚು ಹೊತ್ತು ಸಭೆ ನಡೆಸಿರುವುದಾಗಿ ತಿಳಿದು ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next