ಮೆಲ್ಬರ್ನ್: ಕೆಲವು ಭಾರತೀಯರ ಹೋಟೆಲ್ ಊಟದ ಬಳಿಕ ಕ್ವಾರಂಟೈನ್ ನಿಯಮ, ಕೋವಿಡ್ ಸುರಕ್ಷತೆಯ ಪಾಠ ಬಿಗಿದಿದ್ದ ಕ್ರಿಕೆಟ್ ಆಸ್ಟ್ರೇಲಿಯಾಗೆ ಈಗ ಸಮಾಧಾನವಾದಂತಿದೆ. ಕಾರಣ ಟೀಂ ಇಂಡಿಯಾದ ಎಲ್ಲಾ ಆಟಗಾರರು ಮತ್ತು ಸಿಬ್ಬಂದಿಗಳ ಕೋವಿಡ್ ಪರೀಕ್ಷೆ ನಡೆಸಿದ್ದು, ಎಲ್ಲರ ವರದಿಯೂ ನೆಗೆಟಿವ್ ಆಗಿದೆ.
ಈ ಬಗ್ಗೆ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದ್ದು, ರವಿವಾರ (ಜ.3) ದಂದು ನಡೆಸಿದ ಕೋವಿಡ್ ವರದಿಯ ಫಲಿತಾಂಶ ಬಂದಿದ್ದು, ಯಾರಿಗೂ ಕೋವಿಡ್ ಭೀತಿಯಿಲ್ಲ ಎಂದಿದೆ.
ಮೆಲ್ಬರ್ನ್ ನಲ್ಲಿ ಭಾರತೀಯ ಆಟಗಾರರಾದ ರೋಹಿತ್ ಶರ್ಮಾ, ರಿಷಭ್ ಪಂತ್, ಶುಭ್ಮನ್ ಗಿಲ್, ನವದೀಪ್ ಸೈನಿ ಮತ್ತು ಪೃಥ್ವಿ ಶಾ ಹೋಟೆಲ್ ಗೆ ತೆರಳಿದ್ದರು. ಈ ವಿಡಿಯೋವನ್ನು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದರು. ಈ ಘಟನೆಯಿಂದ ಭಾರತೀಯ ಆಟಗಾರರು ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಕಿಡಿಕಾರಿತ್ತು. ಐವರು ಆಟಗಾರರನ್ನು ಪ್ರತ್ಯೇಕಿಸಿತ್ತು ಕೂಡಾ.
ಇದನ್ನೂ ಓದಿ:ಕ್ರಿಕೆಟ್ ಆಸ್ಟ್ರೇಲಿಯದ ಮೇಲೆ “ಬ್ರಿಸ್ಬೇನ್ ಬಾಣ’ ಬಿಟ್ಟ ಭಾರತ!
ಇದಾದ ಬೆನ್ನಲ್ಲೇ ಕ್ವೀನ್ಸ್ ಲ್ಯಾಂಡ್ ಸರಕಾರವೂ ಕ್ವಾರಂಟೈನ್ ನಿಯಮ ಉಲ್ಲಂಘಿಸುವುದಾದರೆ ಬ್ರಿಸ್ಬೇನ್ ಗೆ ಟೆಸ್ಟ್ ಆಡಲು ಬರುವುದು ಬೇಡ ಎಂದು ಹೇಳಿತ್ತು. ಕಠಿಣ ನಿಯಮ ಅಳವಡಿಸಿದರೆ ನಾವು ಸಿಡ್ನಿಯಲ್ಲೇ ನಾಲ್ಕನೇ ಟೆಸ್ಟ್ ಆಡುತ್ತೇವೆ ಎಂದು ಭಾರತ ತಂಡವೂ ತಿರುಗೇಟು ನೀಡಿತ್ತು.