Advertisement

ಎಲ್ಲ ಕನ್ನಡ ಮಾಧ್ಯಮ ಶಾಲೆಗಳಲ್ಲೂ ಕಡ್ಡಾಯ

06:05 AM Oct 11, 2018 | |

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಡಯಟ್‌ ಸೇರಿದಂತೆ ಕನ್ನಡ ಮಾಧ್ಯಮ ತರಗತಿಗಳು ನಡೆಯುವ ಎಲ್ಲ ಶಾಲೆಗಳಲ್ಲೂ ನವರಾತ್ರಿಯ ಯಾವುದಾದರೂ ಒಂದು ದಿನ ಜ್ಞಾನದ ಸಂಕೇತವಾದ ಕನ್ನಡ ಸಾಂಸ್ಕೃತಿಕ ನಾಡಹಬ್ಬ ದಸರಾವನ್ನು ಆಚರಿಸಬೇಕೆಂದು ಕಾಸರಗೋಡು ಜಿಲ್ಲಾ ಶಿಕ್ಷಣ ಉಪನಿರ್ದೇಶಕರು (ಡಿಡಿಇ) ಈ ವರ್ಷವೂ ಆದೇಶ ಹೊರಡಿಸಿದ್ದಾರೆ. 

Advertisement

ಅ. 8 ರಂದು ಹೊರಡಿಸಿದ ಆದೇಶವನ್ನು ಕನ್ನಡ ಮಾಧ್ಯಮ ತರಗತಿಗಳಿರುವ ಎಲ್ಲ ಶಾಲೆಗಳಿಗೂ ಇ ಮೇಲ್‌ ಮುಖಾಂತರ ಕಳುಹಿಸಲಾಗಿದೆ. ಜಿಲ್ಲಾ ಶಿಕ್ಷಣಾಧಿಕಾರಿಗಳು (ಡಿಇಒ) ಕೂಡ ಸಹಾಯಕ ಶಿಕ್ಷಣಾಧಿಕಾರಿಯವರಿಗೆ  (ಎಇಒ) ಎಲ್ಲ ಶಾಲಾ ಮುಖ್ಯೋಪಾಧ್ಯಾಯರಿಗೂ ದಸರಾ ಆದೇಶ ಕಳುಹಿಸಿದ್ದಾರೆ.

ಜಿಲ್ಲಾಧಿಕಾರಿಗಳ ನೇತೃತ್ವದ ಜಿಲ್ಲಾ ಭಾಷಾ ಅಲ್ಪಸಂಖ್ಯಾಕ ಸಮಿತಿಯ ಸಭೆಯಲ್ಲಿ ತೀರ್ಮಾನವಾದಂತೆ ಜಿಲ್ಲೆಯ ಎಲ್ಲ ಕನ್ನಡ ಮಾಧ್ಯಮ ಶಾಲೆಗಳಲ್ಲೂ ದಸರಾ ನಾಡಹಬ್ಬವನ್ನು ಆಚರಿಸಬೇಕೆಂದು ಡಿಡಿಇ 2014ರಲ್ಲೇ ಆದೇಶ ಹೊರಡಿಸಿದ್ದರು. 

ಕ.ಸಾ.ಪ. ಕೇರಳ ಘಟಕ ಹಾಗೂ ಕನ್ನಡ ಮಾಧ್ಯಮ ಅಧ್ಯಾಪಕ ಸಂಘಗಳು ಇದಕ್ಕಾಗಿ ಒತ್ತಾಯಿಸಿದ್ದವು. ಅಧ್ಯಾಪಕ ಸಂಘವು ದಸರಾ ಆಚರಿಸುವ ಮಾರ್ಗಸೂಚಿಯನ್ನೂ ಪ್ರಕಟಿಸಿ ಎಲ್ಲ ಶಾಲೆಗಳಿಗೂ ವಿತರಿಸಿತ್ತು. ಆದರೂ ದಸರಾ ಆದೇಶ ಕನ್ನಡ ಮಾಧ್ಯಮ ಮಾತ್ರವೇ ಇರುವ ಶಾಲೆಗಳಿಗೆ ಸಂಬಂಧಿಸಿದ್ದು ಎಂಬ ತಪ್ಪು ಗ್ರಹಿಕೆಯಿಂದ ಕನ್ನಡ, ಮಲಯಾಳ ಉಭಯ ಮಾಧ್ಯಮಗಳಿರುವ ಹೆಚ್ಚಿನ ಶಾಲೆಗಳಲ್ಲಿ ದಸರಾ ಆಚರಣೆ ನಡೆದಿರಲಿಲ್ಲ. ಈ ಆದೇಶ ಒಂದು ವರ್ಷಕ್ಕೆ ಮಾತ್ರ ಸಂಬಂಧಿಸಿದ್ದು ಎಂದು ಕೂಡ ಕೆಲವು ಮಂದಿ ಅಧ್ಯಾಪಕರು ನೆವ ಹೇಳತೊಡಗಿದರು. ಕೆಲವು ಮಂದಿ ಕನ್ನಡಿಗ ಪೋಷಕರಿಗೆ ಈ ವಿಚಾರವೇ ತಿಳಿದಿರಲಿಲ್ಲ.

ಮುಂದಿನ ವರ್ಷವೂ ಮಾಹಿತಿ ಹಕ್ಕು ಕಾಯಿದೆ ಪ್ರಕಾರ ಮಾಹಿತಿಯನ್ನು ಸಂಗ್ರಹಿಸಿದಾಗ ಕೆಲವೇ ಶಾಲೆಗಳಲ್ಲಿ ದಸರಾ ಆಚರಿಸಿದ್ದು ಕಂಡುಬಂತು. ಮಲಯಾಳದ ಸಾಂಸ್ಕೃತಿಕ ಹಬ್ಬ ಓಣಂ ಹಬ್ಬವನ್ನಲ್ಲದೆ ಹಿಂದಿ, ವಿಜ್ಞಾನ, ಗಣಿತ, ಸಮಾಜಶಾಸ್ತ್ರ ಹೀಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ದಿನಗಳನ್ನು ಆಚರಿಸುವ ಕನ್ನಡ ಮಾಧ್ಯಮ ಅಧ್ಯಾಪಕರು ಹಾಗೂ ಪೋಷಕರು ಕನ್ನಡ ವಿದ್ಯಾರ್ಥಿಗಳಿಗೆ ಕನ್ನಡ ಸಂಸ್ಕೃತಿಯನ್ನು ಪರಿಚಯಿಸುವುದಕ್ಕಾಗಿ ಕಾಸರಗೋಡಿನಲ್ಲಿ ಬಹುಕಾಲದ  ಪರಂಪರೆಯಿರುವ ನವರಾತ್ರಿಯ ಸಾಂಸ್ಕೃತಿಕ ರೂಪವಾದ ಕನ್ನಡದ ಸಾಂಸ್ಕೃತಿಕ ಹಬ್ಬ ದಸರಾವನ್ನು ಆಚರಿಸದಿರುವ ಬಗ್ಗೆ ಕನ್ನಡಾಭಿಮಾನಿಗಳು ನೊಂದುಕೊಂಡಿದ್ದರು. ಕರ್ನಾಟಕ ಗಮಕ ಕಲಾಪರಿಷತ್ತು ಕೇರಳ ಘಟಕದ ಅಧ್ಯಕ್ಷ ಟಿ. ಶಂಕರನಾರಾಯಣ ಭಟ್‌ ಅವರು ಈ ಬಗ್ಗೆ ಶಿಕ್ಷಣ ಉಪನಿರ್ದೇಶಕರು, ಜಿಲ್ಲಾ ವಿದ್ಯಾಧಿಕಾರಿಗಳು, ಉಪ ವಿದ್ಯಾಧಿಕಾರಿಗಳು ಮೊದಲಾದವರಿಗೆ ಕಳೆದ ವರ್ಷ ದೂರು ಸಲ್ಲಿಸಿದ್ದರು. ಹಾಗಾಗಿ ಕಳೆದ ವರ್ಷವೂ ದಸರಾ ಆಚರಿಸಬೇಕೆಂದು ಡಿಡಿಇ ಯವರ ಸೂಚನೆ ಪ್ರಕಟವಾಯಿತು.

Advertisement

ಕೇವಲ ಕನ್ನಡ ಮಾಧ್ಯಮ ಮಾತ್ರವಿರುವ ಶಾಲೆಗಳಲ್ಲಿ ಮಾತ್ರವಲ್ಲ. ಕನ್ನಡ ಮಾಧ್ಯಮ ತರಗತಿಗಳು ನಡೆಯುವ ಎಲ್ಲ ಸರಕಾರಿ ಹಾಗೂ ಸರಕಾರಿ ಅನುದಾನಿತ ಶಾಲೆಗಳಲ್ಲಿ ದಸರಾ ಆಚರಿಸಬೇಕೆಂದು ಈ ವರ್ಷವೂ ಶಂಕರನಾರಾಯಣ ಭಟ್‌ ಅವರು ಸಂಬಂಧಪಟ್ಟವರಿಗೆ ಮನವಿ ನೀಡಿದಲ್ಲದೆ ಕಡತದ ಬೆನ್ನು ಹತ್ತಿ ಓಡಾಡಿದರು. ಅದರ ಫಲವಾಗಿ ಈಗ ಡಿ.ಡಿ.ಇ. ಅವರು ತಮ್ಮ ಹಳೆಯ ಆದೇಶವನ್ನೇ ಮತ್ತೆ ಎತ್ತಿ ಹಿಡಿದು ಕನ್ನಡ ಮಾಧ್ಯಮ ತರಗತಿಗಳು ನಡೆಯುವ ಎಲ್ಲ ಶಾಲೆಗಳಲ್ಲೂ ದಸರಾ ಆಚರಿಸಬೇಕೆಂದು ಸೂಚನೆ ಕಳುಹಿಸಿದ್ದಾರೆ.

ಶಾಲಾ ಮುಖ್ಯೋಪಾಧ್ಯಾಯರು ಈ ಸೂಚನೆಯನ್ನು ಪಾಲಿಸಬೇಕೆಂದೂ, ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸ್ಪರ್ಧೆಗಳನ್ನು ನಡೆಸಿ  ಸಿಹಿತಿಂಡಿ, ಔತಣ ವಿತರಣೆಯ ಮೂಲಕ ಕನ್ನಡ ಮಾಧ್ಯಮ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಜತೆ ಸೇರಿ ದಸರಾ ಆಚರಿಸಬೇಕು.

ಎಲ್ಲ  ದಿನಾಚರಣೆ ಇದೆ, ದಸರಾ ಏಕಿಲ್ಲ?
ಡಿಡಿಇ ಅವರ ಆದೇಶ ಪ್ರತಿವರ್ಷವೂ ಪಾಲಿಸಬೇಕಾಗಿದ್ದು, ಹಿಂದಿ ದಿನ, ಪರಿಸರ ದಿನ, ಹಿರೋಶಿಮಾ ದಿನ, ಓಜೋನ್‌ ದಿನ, ಗಣಿತ ದಿನ, ಮಾದಕ ದ್ರವ್ಯ ವಿರುದ್ಧ ದಿನ, ಓಣಂ ಹಬ್ಬ ಮೊದಲಾದವುಗಳನ್ನು ಯಾವುದೇ ವಿರೋಧವಿಲ್ಲದೆ ಪ್ರತಿವರ್ಷ ಆಚರಿಸುವ ಅಧ್ಯಾಪಕರು ಕನ್ನಡದ ಹಬ್ಬವಾದ ದಸರೆಯನ್ನು ಆಚರಿಸುವುದಿಲ್ಲವೇಕೆ?
-ಟಿ.ಶಂಕರನಾರಾಯಣ ಭಟ್‌
ಅಧ್ಯಕ್ಷ , ಕರ್ನಾಟಕ ಗಮಕ ಕಲಾಪರಿಷತ್‌ ಕೇರಳ ಘಟಕ

Advertisement

Udayavani is now on Telegram. Click here to join our channel and stay updated with the latest news.

Next